31 ವರ್ಷಗಳ ಜೈಲು ಶಿಕ್ಷೆ ಮರೆತು ಅಮಾಯಕರ ಪರ ನಿಂತ ಪೆರಾರಿವಾಲನ್: ‘ನ್ಯಾಯದೂತ’ನ ಹೊಸ ಅವತಾರ!
2022ರಲ್ಲಿ ಜೈಲಿನಿಂದ ಹೊರಬಂದ ಪೆರಾರಿವಾಲನ್ ಕಾನೂನು ಶಿಕ್ಷಣ ಆರಂಭಿಸಿದರು. ಹಾಗೂ ಇದೀಗ ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲರಾಗಿ ನೇಮಕಗೊಂಡಿದ್ದಾರೆ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಬರೋಬ್ಬರಿ 31 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದ ಎ.ಜಿ ಪೆರಾರಿವಾಲನ್ ಇದೀಗ ಹೈಕೋರ್ಟ್ ವಕೀಲರಾಗಿ ನೇಮಕಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 2022ರ ಡಿಸೆಂಬರ್ನಲ್ಲಿ ಶಿಕ್ಷೆಯಿಂದ ವಿನಾಯಿತಿ ಪಡೆದು ಜೈಲಿನಿಂದ ಹೊರಬಂದಿದ್ದ ಪೆರಾರಿವಾಲನ್ ತಮ್ಮ ಜೀವನದ ಹೊಸ ಅಧ್ಯಾಯ ಇದೀಗ ಆರಂಭಿಸಿದ್ದಾರೆ.
ಬೆಂಗಳೂರಿನ ಡಾ.ಬಿ.ಆರ್ ಅಂಬೇಡ್ಕರ್ ಕಾನೂನು ಮಹಾವಿದ್ಯಾಲಯದಲ್ಲಿ ವಕೀಲ ವೃತ್ತಿ ಪದವಿ ಪಡೆದ ಪೆರಾರಿವಾಲನ್ ಇದೀಗ ಹೈಕೋರ್ಟ್ನಲ್ಲಿ ವಕೀಲರಾಗಿ ನೇಮಕಗೊಂಡಿದ್ದಾರೆ. 2025ರಲ್ಲಿ ವಕೀಲ ಪದವಿಯಲ್ಲಿ ಉತ್ತೀರ್ಣರಾದ ಪೆರಾರಿವಾಲನ್ ಅದೇ ವರ್ಷ ಅಖಿಲ ಭಾರತ ಬಾರ್ ಪರೀಕ್ಷೆಯನ್ನೂ ಪಾಸ್ ಮಾಡಿದ್ದಾರೆ.
ಇದನ್ನೂ ಓದಿ : ಜಿಮ್ಗೆ ಸೇರಿದ ಪತ್ನಿ ಸೌಂದರ್ಯದ ಮೇಲೆ ಪತಿಗೆ ಅಸೂಯೆ! ಪತಿ ಮಾಡಿದ ಕೆಲಸ ಕೇಳಿದ್ರೆ ಬೆಚ್ಚಿಬೀಳ್ತೀರಾ!
1991ರಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೆರಾರಿವಾಲನ್ರನ್ನು ಬಂಧಿಸುವಾಗ ಅವರಿಗೆ ಕೇವಲ 19 ವರ್ಷ. ಮನೆಯಲ್ಲಿದ್ದ ಪೆರಾರಿವಾಲನ್ರನ್ನು ವಿಚಾರಣೆ ನಡೆಸಿ ವಾಪಸ್ ಕಳಿಸುತ್ತೇನೆ ಎಂದು ಹೇಳಿ ಪೊಲಿಸರು ಕರೆದೊಯ್ದಿದ್ದರು. ಆದರೆ ಈ ಪ್ರಕರಣದಲ್ಲಿ ಪೆರಾರಿವಾಲನ್ ದೋಷಿ ಎಂದು ಸಾಬೀತಾಗಿದ್ದರು . ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಬೇಕಾದ ಸ್ಫೋಟಕ ಖರೀದಿಯಲ್ಲಿ ಪೆರಾರಿವಾಲನ್ ಪಾತ್ರವಿತ್ತು ಎಂಬುದು ತನಿಖೆಯಲ್ಲಿ ಸಾಬೀತಾಗಿತ್ತು. ಆರಂಭದಲ್ಲಿ ಪೆರಾರಿವಾಲನ್ರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಆದರೆ 2014ರಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಲಾಗಿತ್ತು.
31 ವರ್ಷಗಳ ಕಾಲ ಸೆರೆಮನೆ ವಾಸದಲ್ಲಿದ್ದ ಪೆರಾರಿವಾಲನ್ 2022ರ ಮೇ 18ರಂದು ಬಿಡುಗಡೆಗೊಂಡಿದ್ದರು. ಜೈಲಿನಲ್ಲಿದ್ದಾಗಲೂ ತಮ್ಮ ವ್ಯಾಸಂಗ ಮುಂದುವರಿಸಿದ್ದ ಪೆರಾರಿವಾಲನ್ ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ನಲ್ಲಿ ಫಸ್ಟ್ ರ್ಯಾಂಕ್ ಪಡೆದಿದ್ದರು. ಕಂಪ್ಯೂಟರ್ ಅಪ್ಲಿಕೇಶನ್ ಕೋರ್ಸ್ ಪೂರ್ಣಗೊಳಿಸಿದರು. ಪ್ಲಸ್ ಟು ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದ ಕೈದಿ ಎನಿಸಿದರು,ಜೈಲಿನಲ್ಲಿದ್ದೇ ಹೆಚ್ಚುವರಿ 7 ಡಿಪ್ಲೋಮಾ ಕೋರ್ಸ್ಗಳನ್ನು ಪೂರ್ಣಗೊಳಿಸಿದ್ದರು.
2022ರಲ್ಲಿ ಜೈಲಿನಿಂದ ಹೊರಬಂದ ಪೆರಾರಿವಾಲನ್ ಕಾನೂನು ಶಿಕ್ಷಣ ಆರಂಭಿಸಿದರು. ಹಾಗೂ ಇದಿಗ ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲರಾಗಿ ನೇಮಕಗೊಂಡಿದ್ದಾರೆ. ಪ್ರಸ್ತುತ ಇವರಿಗೆ 54 ವರ್ಷ. ನನ್ನ ಗುರಿ ಪ್ರಸಿದ್ಧ ಲಾಯರ್ ಆಗುವುದಲ್ಲ. ಜೈಲಿನಲ್ಲಿ ಕಾನೂನಿನ ನೆರವಿಲ್ಲದೇ ಪರಿತಪಿಸುತ್ತಿರುವ ಕೈದಿಗಳಿಗೆ ದನಿಯಾಗುವುದು ಎಂದು ಪೆರಾರಿವಾಲನ್ ಹೇಳಿದ್ದಾರೆ.



