ಪಿಎಂ ಸೂರ್ಯ ಘರ್ ಯೋಜನೆ: ಸಬ್ಸಿಡಿ ತ್ಯಜಿಸಿದವರಿಗೆ ಹೊಸ ಸೌಲಭ್ಯ
ಪಿಎಂ ಸೂರ್ಯ ಘರ್ ಯೋಜನೆಯಲ್ಲಿ ಸರ್ಕಾರದ ಸಬ್ಸಿಡಿ ಪಡೆಯದ ಗ್ರಾಹಕರಿಗೆ ಮಹತ್ವದ ವಿನಾಯಿತಿ ಘೋಷಿಸಲಾಗಿದೆ. ಇನ್ನು ಅವರು ವಿದೇಶಿ ಅಥವಾ ನಾನ್-ಡಿಸಿಆರ್ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಿಕೊಳ್ಳಲು ಅವಕಾಶ ದೊರೆಯಲಿದೆ.

ಮನೆ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕ ಅಳವಡಿಸಲು ಆಸಕ್ತಿ ಹೊಂದಿರುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ಸಡಿಲಿಕೆಯನ್ನು ನೀಡಿದೆ. ಪಿಎಂ ಸೂರ್ಯ ಘರ್ ಯೋಜನೆಯಡಿ ಸರ್ಕಾರದ ಸಬ್ಸಿಡಿ ಪಡೆಯದೇ ಸ್ವಂತ ವೆಚ್ಚದಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸುವ ಮನೆ ಮಾಲೀಕರು ಇನ್ನು ಮುಂದೆ ವಿದೇಶಿ ಅಥವಾ ನಾನ್-ಡಿಸಿಆರ್ ಸೋಲಾರ್ ಪ್ಯಾನಲ್‌ಗಳನ್ನು ಬಳಸಬಹುದು.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಈ ಕುರಿತು ಸ್ಪಷ್ಟನೆ ನೀಡಿದ್ದು, ಸಬ್ಸಿಡಿ ಪಡೆಯದ ಗ್ರಾಹಕರಿಗೆ ಮಾತ್ರ ಈ ವಿಶೇಷ ವಿನಾಯಿತಿ ಅನ್ವಯವಾಗುತ್ತದೆ ಎಂದು ತಿಳಿಸಿದೆ. ಇದರೊಂದಿಗೆ ನೆಟ್ ಮೀಟರಿಂಗ್ ವ್ಯವಸ್ಥೆ ಪಡೆಯುವ ಗ್ರಾಹಕರು ಸರ್ಕಾರ ಅನುಮೋದಿತ ಸೌರ ಕೋಶಗಳ ಪಟ್ಟಿಗೆ ಮಾತ್ರ ಸೀಮಿತವಾಗಬೇಕಾದ ಅಗತ್ಯವಿಲ್ಲ.
ಸಚಿವಾಲಯದ ಮಾಹಿತಿಯ ಪ್ರಕಾರ, ಈ ವಿನಾಯಿತಿಯು 2027ರ ಮಾರ್ಚ್ 31ರವರೆಗೆ ಜಾರಿಯಲ್ಲಿರಲಿದೆ. ಆದರೆ ಈ ಸೌಲಭ್ಯ ಪಡೆಯಲು ಅರ್ಜಿದಾರರು ಪಿಎಂ ಸೂರ್ಯ ಘರ್ ರಾಷ್ಟ್ರೀಯ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ.
ಇದರ ಜೊತೆಗೆ, ಎಎಲ್‌ಎಂಎಂ (ALMM) ಲಿಸ್ಟ್–2 ನಿಯಮದಿಂದ ವಿನಾಯಿತಿ ಪಡೆಯಲು ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ (NISE)ಯ ಡಿಸಿಆರ್ ಪೋರ್ಟಲ್‌ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಆದರೆ ಈ ಸಡಿಲಿಕೆ ಎಲ್ಲರಿಗೂ ಅನ್ವಯಿಸುವುದಿಲ್ಲ. ‘ಗಿವ್ ಇಟ್ ಅಪ್’ ಆಯ್ಕೆಯಡಿ ಸರ್ಕಾರದ ಸಬ್ಸಿಡಿಯನ್ನು ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವ ಮನೆ ಮೇಲ್ಛಾವಣಿ ಸೌರಶಕ್ತಿ ಗ್ರಾಹಕರಿಗೆ ಮಾತ್ರ ಈ ಅವಕಾಶ ಲಭ್ಯವಾಗಲಿದೆ. ಸಬ್ಸಿಡಿ ಪಡೆಯುವವರು ಹಾಗೂ ಇತರ ಸೌರ ಯೋಜನೆಗಳ ಗ್ರಾಹಕರು ಹಿಂದಿನಂತೆ ದೇಶೀಯ ಉಪಕರಣಗಳ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಲೇಬೇಕು.
ಇತ್ತೀಚೆಗೆ ಎಎಲ್‌ಎಂಎಂ ನಿಯಮಗಳ ಗಡುವು ವಿಸ್ತರಣೆಯಾಗದ ಹಿನ್ನೆಲೆಯಲ್ಲಿ ಹಲವು ಗ್ರಾಹಕರಲ್ಲಿ ಗೊಂದಲ ಉಂಟಾಗಿತ್ತು. ಇದೀಗ ಸಚಿವಾಲಯ ನೀಡಿರುವ ಹೊಸ ಸ್ಪಷ್ಟನೆಯಿಂದ ಸಬ್ಸಿಡಿ ಪಡೆಯದ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳ ಅವಕಾಶ ಸಿಗಲಿದೆ.



