‘ಗೃಹಿಣಿಯರು ಮನೆಗೆಲಸದವರಲ್ಲ, ರಾಷ್ಟ್ರ ನಿರ್ಮಾತೃರು!’ ಅಪಘಾತ ಪರಿಹಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಗೃಹಿಣಿಯರನ್ನು ಕೇವಲ ಮನೆಕೆಲಸ ನೋಡಿಕೊಳ್ಳುವವರಾಗಿ ನೋಡದೆ, ಅವರನ್ನು 'ರಾಷ್ಟ್ರ ನಿರ್ಮಾತೃಗಳು' ಎಂದು ನ್ಯಾಯಾಲಯ ಬಣ್ಣಿಸಿದೆ.

ದೇಶದ ಕೋಟ್ಯಂತರ ಗೃಹಿಣಿಯರ ನಿರಂತರ ಶ್ರಮ ಮತ್ತು ತ್ಯಾಗಕ್ಕೆ ಸುಪ್ರೀಂಕೋರ್ಟ್ ಅತ್ಯುನ್ನತ ಗೌರವ ನೀಡಿದೆ. ಗೃಹಿಣಿಯರನ್ನು ಕೇವಲ ಮನೆಕೆಲಸ ನೋಡಿಕೊಳ್ಳುವವರಾಗಿ ನೋಡದೆ, ಅವರನ್ನು ‘ರಾಷ್ಟ್ರ ನಿರ್ಮಾತೃಗಳು’ ಎಂದು ನ್ಯಾಯಾಲಯ ಬಣ್ಣಿಸಿದೆ. ವಾಹನ ಅಪಘಾತದಂತಹ ದುರ್ಘಟನೆಗಳಲ್ಲಿ ಗೃಹಿಣಿಯರು ಸಾವನ್ನಪ್ಪಿದಾಗ ಅಥವಾ ಅಂಗವೈಕಲ್ಯಕ್ಕೆ ಒಳಗಾದಾಗ, ಅವರಿಗೆ ನೀಡಬೇಕಾದ ವಿಮಾ ಪರಿಹಾರವನ್ನು ನಿರ್ಧರಿಸುವಾಗ ಗೃಹಿಣಿಯ ಕನಿಷ್ಠ ಮಾಸಿಕ ವೇತನವನ್ನು 30,000 ರೂಪಾಯಿ ಎಂದು ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.
ವಾಹನ ಅಪಘಾತವೊಂದರಲ್ಲಿ ಪತ್ನಿಯನ್ನು ಕಳೆದುಕೊಂಡ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠವು ಈ ಮಹತ್ತರ ತೀರ್ಪನ್ನು ಪ್ರಕಟಿಸಿದೆ. ಮೋಟಾರು ವಾಹನ ಕಾಯ್ದೆಯಡಿ ಅಪಘಾತ ಪರಿಹಾರ ನಿಗದಿ ಮಾಡುವಾಗ ಗೃಹಿಣಿಯರ ಶ್ರಮವನ್ನು ಕಡೆಗಣಿಸುವಂತಿಲ್ಲ. ಅಪಘಾತದ ಸಂದರ್ಭದಲ್ಲಿ ಗೃಹಿಣಿ ಮರಣ ಹೊಂದಿದರೆ, ಕೇವಲ ಆದಾಯದ ನಷ್ಟ ಮಾತ್ರವಲ್ಲದೆ, ಇಡೀ ಕುಟುಂಬಕ್ಕೆ ಆಗುವ ಮನೆ ಆರೈಕೆಯ ನಷ್ಟ ಎಂಬ ಪ್ರತ್ಯೇಕ ವಿಭಾಗದ ಅಡಿಯಲ್ಲಿಯೂ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮನುಕುಲ ಹಾಗೂ ದೇಶದ ಏಳಿಗೆಗಾಗಿ ಪ್ರತಿಯೊಬ್ಬ ಗೃಹಿಣಿಯ ಕೊಡುಗೆ ಅಪಾರವಾಗಿದೆ. ದುಡಿಯುವ ಸದಸ್ಯರ ಮೇಲೆ ಗೃಹಿಣಿ ಅವಲಂಬಿತಳಾಗಿದ್ದಾಳೆ ಎಂದು ಭಾವಿಸುವುದು ತಪ್ಪು. ವಾಸ್ತವದಲ್ಲಿ ಇಡೀ ಮನೆಯ ದಿನನಿತ್ಯದ ಕೆಲಸಗಳು ಮತ್ತು ಕುಟುಂಬದ ನೆಮ್ಮದಿ ಗೃಹಿಣಿಯ ಮೇಲೆಯೇ ಅವಲಂಬಿತವಾಗಿರುತ್ತದೆ. ಕುಟುಂಬದ ದುಡಿಯುವ ಸದಸ್ಯರು ಸಹ ಆಕೆಯ ನಿರಂತರ ಕಾಳಜಿಯ ಮೇಲೆಯೇ ಅವಲಂಬಿತರಾಗಿರುತ್ತಾರೆ. ಆದರೆ ಸಮಾಜದಲ್ಲಿ ಇಷ್ಟೆಲ್ಲಾ ಶ್ರಮವಹಿಸುವ ಗೃಹಿಣಿಗೆ ಸಿಗಬೇಕಾದ ಸೂಕ್ತ ಗೌರವ ಮತ್ತು ಮಾನ್ಯತೆ ಸಿಗುತ್ತಿಲ್ಲ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಮನೆಕೆಲಸ ನಿರ್ವಹಿಸುವವರನ್ನು ಕೇವಲ ಗೃಹಿಣಿ ಎಂದು ಕರೆದು ಆಕೆಯ ಕೊಡುಗೆಯನ್ನು ಕೀಳಾಗಿ ಕಾಣುವ ಪ್ರವೃತ್ತಿಗೆ ಸುಪ್ರೀಂಕೋರ್ಟ್ ಈ ತೀರ್ಪಿನ ಮೂಲಕ ಬ್ರೇಕ್ ಹಾಕಿದೆ. ಆಕೆಯ ಶ್ರಮ ಕೇವಲ ಮನೆಗಷ್ಟೇ ಸೀಮಿತವಾಗಿರದೆ, ಉತ್ತಮ ಕುಟುಂಬವನ್ನು ರೂಪಿಸುವ ಮೂಲಕ ಭವಿಷ್ಯದ ತಲೆಮಾರನ್ನು ಬೆಳೆಸುವ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡುವ ಅತ್ಯಂತ ಜವಾಬ್ದಾರಿಯುತ ಪಾತ್ರವಾಗಿದೆ ಎಂದು ನ್ಯಾಯಾಲಯ ಹೇಳಿದೆ.



