ಫ್ಲಾಟ್ ಒಳಗೆ ಮಹಿಳಾ ಪ್ರೊಫೆಸರ್ ಕೊಲೆ! ದೆಹಲಿ ಪೊಲೀಸರಿಂದ ತನಿಖೆ ಚುರುಕು

ದೆಹಲಿ ವಸುಂಧರ ಎನ್‌ಕ್ಲೇವ್‌ನ ಅಪಾರ್ಟ್‌ಮೆಂಟ್‌ನಲ್ಲಿ ಮಹಿಳಾ ಪ್ರಾಧ್ಯಾಪಕಿ ಅನುಮಾನಾಸ್ಪದವಾಗಿ ಹತ್ಯೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದರೋಡೆ ಸುಳಿವುಗಳಿಲ್ಲದ ಕಾರಣ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ದೆಹಲಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಮಹಿಳಾ ಪ್ರಾಧ್ಯಾಪಕಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಆತಂಕ ಮೂಡಿಸಿದೆ. ಒಬ್ಬರೇ ವಾಸವಾಗಿದ್ದ ಪ್ರಾಧ್ಯಾಪಕಿಯ ಮೃತದೇಹ ಮನೆಯೊಳಗೆ ಪತ್ತೆಯಾಗಿದ್ದು, ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಶಿವಾಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ದೇವೋಸ್ಮಿತಾ ಪೌಲ್ ಅವರು ಪೂರ್ವ ದೆಹಲಿಯ ವಸುಂಧರ ಎನ್‌ಕ್ಲೇವ್‌ನ ಸತ್ಯಂ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಅವರ ಪತಿ ಬೆಂಗಳೂರಿನಲ್ಲಿ ನೆಲೆಸಿರುವುದರಿಂದ ಅವರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು.

ಗುರುವಾರ ಮಧ್ಯಾಹ್ನ ದೇವೋಸ್ಮಿತಾ ಅವರ ಸಹೋದರ ಪೊಲೀಸರಿಗೆ ಕರೆ ಮಾಡಿ, ತಂಗಿ ಮನೆಯೊಳಗೆ ಪ್ರತಿಕ್ರಿಯೆ ನೀಡದೆ ಇರುವುದಾಗಿ ಮಾಹಿತಿ ನೀಡಿದರು. ಬೆಳಗ್ಗಿನಿಂದ ಹಲವು ಬಾರಿ ಕರೆ ಮಾಡಿದರೂ ಉತ್ತರ ಸಿಗದ ಕಾರಣ ಅನುಮಾನಗೊಂಡ ಅವರು ಫ್ಲಾಟ್‌ಗೆ ತೆರಳಿದ್ದರು.

ಮನೆಯ ಬಾಗಿಲು ಒಳಗಡೆಯಿಂದ ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ಸಹೋದರ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ದೇವೋಸ್ಮಿತಾ ಪೌಲ್ ಅವರು ರಕ್ತದ ಮಡುವಿನಲ್ಲಿ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಅವರ ತಲೆಗೆ ಭಾರೀ ಪೆಟ್ಟು ಬಿದ್ದಿರುವುದು ಹಾಗೂ ಕೈ ಮಣಿಕಟ್ಟಿನ ಭಾಗದಲ್ಲಿ ಗಾಯಗಳಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಪ್ರಕರಣದಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಸುರಕ್ಷಿತವಾಗಿಯೇ ಪತ್ತೆಯಾಗಿದೆ. ದರೋಡೆ ಅಥವಾ ಕಳ್ಳತನ ನಡೆದಿರುವ ಯಾವುದೇ ಸುಳಿವುಗಳು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು, ಸ್ಥಳದಲ್ಲಿನ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಕೆಲ ಮಹತ್ವದ ಸುಳಿವುಗಳು ಲಭ್ಯವಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories