ಪಾಕ್ ಬೆನ್ನಲ್ಲೇ ನೇಪಾಳಕ್ಕೂ ತಟ್ಟಿದ ಇಂಧನ ಬಿಕ್ಕಟ್ಟು..! ನೇಪಾಳದಲ್ಲಿ 2 ದಿನ ಸರ್ಕಾರಿ ರಜೆ..!
Fuel Crisis: ಇರಾನ್ ಹಾಗೂ ಇಸ್ರೇಲ್, ಅಮೆರಿಕದ ನಡುವೆ ನಡೆಯುತ್ತಿರುವ ಯುದ್ಧವು ಸಂಪೂರ್ಣ ವಿಶ್ವದಲ್ಲಿ ತೈಲ ಬಿಕ್ಕಟ್ಟು ಸೃಷ್ಠಿಸಿದೆ. ಭಾರತದ ನೆರೆ ರಾಷ್ಟ್ರವಾದ ಪಾಕಿಸ್ತಾನ ಈಗಾಗಲೇ 1 ಲೀಟರ್ ಪೆಟ್ರೋಲ್ ದರವನ್ನು 500 ಗಡಿ ತಲುಪಿಸಿದ್ದು ಮಾತ್ರವಲ್ಲದೇ ಸಚಿವರ ಸಂಬಳಕ್ಕೂ ಕತ್ತರಿ ಹಾಕಿದೆ. ಇತ್ತ ನೇಪಾಳ ಕೂಡ ತೈಲ ಬಿಕ್ಕಟ್ಟು ಎದುರಿಸುತ್ತಿದ್ದು, ಇಂಧನ ಉಳಿತಾಯಕ್ಕಾಗಿ ಹೊಸ ಕ್ರಮಗಳನ್ನು ಕೈಗೊಂಡಿದೆ. ಈ ಸಂಬಂಧ ಸಚಿವ ಸಂಪುಟ ಸಭೆ ನಡೆಸಿದ ನೇಪಾಳ ಸರ್ಕಾರ ಇನ್ಮುಂದೆ ದೇಶದ ಎಲ್ಲಾ ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಶನಿವಾರ ಹಾಗೂ ಭಾನುವಾರ ರಜೆ ನೀಡುವುದಾಗಿ ಘೋಷಿಸಿದೆ.
ಈ ಮೊದಲು ನೇಪಾಳದ ಸರ್ಕಾರಿ ಕಚೇರಿಗಳಿಗೆ ಶನಿವಾರ ಮಾತ್ರ ರಜೆ ನೀಡಲಾಗುತ್ತಿತ್ತು . ಆದರೆ ಇನ್ಮುಂದೆ ಈ ರಜೆಯನ್ನು ಭಾನುವಾರಕ್ಕೂ ವಿಸ್ತರಿಸಲಾಗಿದೆ. ಇದರಿಂದ ಸರ್ಕಾರಿ ವಾಹನಗಳ ಸಂಚಾರ, ಕಚೇರಿಗಳ ವಿದ್ಯುತ್ ಮತ್ತು ಇಂಧನ ಬಳಕೆಯಲ್ಲಿ ಗಣನೀಯ ಉಳಿತಾಯವಾಗಲಿದೆ ಎಂಬುದು ನೇಪಾಳ ಸರ್ಕಾರದ ಲೆಕ್ಕಾಚಾರವಾಗಿದೆ. ಅಲ್ಲದೇ ಶಾಲಾ – ಕಾಲೇಜುಗಳಿಗೆ ಎರಡು ದಿನಗಳ ರಜೆ ಅನ್ವಯವಾಗಲಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಇಂದಿನಿಂದ ರಾಜ್ಯದಲ್ಲಿ ಮತ್ತೆ ಶುರು ವರುಣನ ಅಬ್ಬರ..! 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಇನ್ನು ಈ ವಿಚಾರವಾಗಿ ಮಾತನಾಡಿದ ನೇಪಾಳ ಸರ್ಕಾರದ ವಕ್ತಾರೆ ಸಸ್ಮಿತಾ ಪೋಬ್ರೇಲ್, ಪ್ರಸ್ತುತ ನೇಪಾಳ ಸರ್ಕಾರವು ತೀವ್ರ ತೈಲ ಬಿಕ್ಕಟ್ಟು ಎದುರಿಸುತ್ತಿದೆ. ತೈಲ ಬಿಕ್ಕಟ್ಟು ನಿರ್ವಹಣೆಗಾಗಿ ಈ ನಿರ್ಧಾರ ಅನಿವಾರ್ಯವಾಗಿದೆ. ಹೊಸ ನಿಯಮದ ಪ್ರಕಾರ ಸರ್ಕಾರಿ ಕಚೇರಿಗಳು 10 ರಿಂದ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲಿವೆ.ಹಗಲು ವೇಳೆ ಸೂರ್ಯನ ಬೆಳಕು ಜಾಸ್ತಿ ಇರುವುದರಿಂದ ಕಚೇರಿಗಳಲ್ಲಿ ವಿದ್ಯುತ್ ಬಳಕೆ ಕಡಿಮೆಯಾಗಲಿದೆ. ಹೀಗಾಗಿ ಸರ್ಕಾರಿ ಕಚೇರಿಗಳ ಸಮಯದಲ್ಲಿಯೂ ಬದಲಾವಣೆ ಮಾಡಿದ್ದೇವೆ ಎಂದಿದ್ದಾರೆ.
ಇನ್ನು ಇದು ಮಾತ್ರವಲ್ಲದೇ ಇಂಧನ ಬಿಕ್ಕಟ್ಟಿನಿಂದಾಗಿ ನೇಪಾಳದಲ್ಲಿ ವಿಮಾನಯಾನ ಕೂಡ ದುಬಾರಿಯಾಗಿದೆ. ಅಂತಾರಾಷ್ಟ್ರೀಯ ವಿಮಾನಯಾನ ಇಂಧನದ ದರವನ್ನು ನೇಪಾಳವು ಶೇಕಡಾ 117.4 ರಷ್ಟು ಏರಿಕೆ ಮಾಡಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ಗೆ ಸಕಾಲದಲ್ಲಿ ಹಣಪಾವತಿ ಮಾಡುವ ಉದ್ದೇಶದಿಂದ ಬೆಲೆ ಏರಿಕೆಯ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದೆ.



