Rare Blanket Octopus : 20 ವರ್ಷಗಳ ನಂತರ ಆಸ್ಟ್ರೇಲಿಯಾದಲ್ಲಿ ಪತ್ತೆಯಾದ ಕಂಬಳಿ ಆಕ್ಟೋಪಸ್

ಪ್ರಪಂಚದಿಂದಲೇ ನಾಮಾವಶೇಷವಾಗಿದೆ (Extinct from the World) ಎಂದು ಕೊಂಡಿದ್ದ ಕಂಬಳಿ ಆಕ್ಟೋಪಸ್ (Rare Blanket Octopus ) ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಡಿಸೆಂಬರ್ ಅಂತ್ಯದ ಕ್ರಿಸ್ಮಸ್ ಮತ್ತು ಹೊಸ ವರ್ಷ ಸಂಭ್ರಮದಲ್ಲಿ ಇದ್ದಾಗ ಜೀವ ವೈವಿಧ್ಯ ವಲಯದಲ್ಲೂ ಅಚ್ಚರಿ ಮತ್ತು ಸಂಭ್ರಮಿಸುವಂತಹ ಬೆಳವಣಿಗೆಗಳು ನಡೆಯಿತು. ಜಗತ್ತಿನಿಂದಲೇ ನಾಮಾವಶೇಷವಾಗಿದೆ ಎನ್ನಲಾಗಿದ್ದ, ಕಂಬಳಿ ಆಕ್ಟೋಪಸ್ (Blanket Octopus) ಪತ್ತೆಯಾಗಿದೆ. ಜೀವವಿಜ್ಞಾನಿಗಳನ್ನು ಕಡಲ ತಡಿಗೆ ಓಡುವಂತೆ ಮಾಡಿದೆ.

ಗ್ರೇಟ್ ಬ್ಯಾರಿಯರ್ ರೀಫ್ನಲ್ಲಿರುವ ಲೇಡಿ ಎಲಿಯಟ್ ದ್ವೀಪದಲ್ಲಿ ಮಿರಮಿರನೆ ಮಿಂಚುತ್ತಿದ್ದ ಆಕ್ಟೋಪಸ್ ಅನ್ನು ಕಂಟೆಂಟ್ ಬರಹಗಾರ್ತಿ ಮತ್ತು ಕಡಲ ಜೀವಿಗಳ ಬಗ್ಗೆ ಅಧ್ಯಯನ ನಡೆಸುವ ಅನ್ವೇಷಕಿ ಜೆಸಿಂತಾ ಶಾಕಲ್ಟನ್ ಕಂಡರು. ಇದು ಟೆಕ್ನಿಕಲರ್ ಪ್ರಾಣಿಯಾಗಿತ್ತು. ಇದರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡರು.

ಆಗಲೇ ಇದು ಕಂಬಳಿ ಆಕ್ಟೋಪಸ್ ಎಂದು ತಿಳಿದುಬಂತು. ಜೀವ ವಿಜ್ಞಾನಿಗಳು, ಕಡಲ ವನ್ಯಜೀವಿ ಅಧ್ಯಯನಕಾರರು ಲೇಡಿ ಎಲಿಯಟ್ ದ್ವೀಪದತ್ತ ಮುಖಮಾಡಿದರು.
“ಮೊದಲು ಇದನ್ನು ನೋಡಿದಾಗ ದೊಡ್ಡ ರೆಕ್ಕೆಗಳನ್ನು ಹೊಂದಿದ ಜುವೆನಿಲ್ ಫಿಶ್ ಎಂದುಕೊಂಡೆ. ಆದರೆ, ಅದು ಹತ್ತಿರವಾಗುತ್ತಿದ್ದಂತೆ ಇದು ಬೇರೆಯದ್ದೇ ಏನೋ ಇದೆ ಎನಿಸಿತು. ನಂತರ ಇದು ಕಂಬಳಿ ಆಕ್ಟೋಪಸ್ ಇರಬಹುದೇ ಎಂಬ ಸಂಶಯ ಕಾಡತೊಡಗಿತು. ಸಾಮಾಜಿಕ ಜಾಲತಾಣದಲ್ಲಿ ಇದರ ಫೋಟೋ ಹಾಕಿದೆ. ನನ್ನ ಶಂಕೆ ನಿಜವಾಯಿತು. ಇದು ಹೆಣ್ಣು ಕಂಬಳಿ ಆಕ್ಟೋಪಸ್ ಆಗಿತ್ತು. ಎರಡು ದಶಕದ ನಂತರ ಇದು ಕಂಡು ಬಂದಿದೆ ಎಂದು ತಿಳಿದು ಅತೀವ ಸಂತೋಷ ಆಯಿತು” ಎಂದು ಜೆಸಿಂತಾ ಶಾಕಲ್ಟನ್ ಹೇಳಿದ್ದಾರೆ.
“ಇದನ್ನು ಪ್ರತ್ಯಕ್ಷವಾಗಿ ನೋಡಿದಾಗ ಅವ್ಯಕ್ತ ಸಂತೋಷವಾಯಿತು. ಅದರ ಚಲನೆ ಕೂಡ ಆಕರ್ಷಕ, ಬಹು ವರ್ಣದಲ್ಲಿ ಹೊಳೆಯುವ ಆಕ್ಟೋಪಸ್ ಅದು. ಅದರಿಂದ ಕಣ್ಣು ಕೀಳಲು ಆಗದಷ್ಟು ಆಕರ್ಷಕವಾಗಿತ್ತು. ಕಡಲಾಳದಲ್ಲಿ ಇಂಥದೊಂದು ಜೀವಿಯನ್ನು ನಾನು ಇದುವರೆಗೆ ಕಂಡಿರಲಿಲ್ಲ” ಎಂದಿದ್ದಾರೆ.

ಜೆಸಿಂತಾ ಕಳೆದ ಮೂರು ವರ್ಷದಿಂದ ಗ್ರೇಟ್ ಬಾರಿಯ್ ರೀಫ್ನಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಜೆಸಿಂತಾ ಕಂಬಳಿ ಆಕ್ಟೋಪಸ್ ನೋಡುವುದಕ್ಕೂ ಹಿಂದೆ ಕೇವಲ ಮೂರು ಸಾರಿ ಇದರ ದರ್ಶನ ಆಗಿತ್ತು ಎಂದು ನ್ಯೂಜಿಲೆಂಡ್‌ನ ಸಮುದ್ರಜೀವಿ ಮತ್ತು ಫ್ರೆಶ್ ವಾಟರ್ ಸಂಶೋಧನೆಗಳ ಕುರಿತ ಜರ್ನಲ್ ಹೇಳಿದೆ. ಹೆಣ್ಣು ಕಂಬಳಿ ಆಕ್ಟೋಪಸ್ ಆರು ಅಡಿಗಳವರೆಗೆ ಬೆಳೆಯುತ್ತದೆ. ಆದರೆ ಗಂಡು ಕಂಬಳಿ ಆಕ್ಟೋಪಸ್ 2.4 ಸೆಂಟಿಮೀಟರ್ ಅಷ್ಟೆ ಬೆಳೆಯುತ್ತದೆ. ಹೆಣ್ಣು ಪ್ರಾಣಿಯು ಗಂಡಿಗಿಂತ 40 ಸಾವಿರ ಪಟ್ಟು ಹೆಚ್ಚು ತೂಕದ್ದಾಗಿರುತ್ತದೆ ಎಂದು ಜರ್ನಲ್ ಹೇಳಿದೆ.

ಇದನ್ನೂ ಓದಿ: Octopus Hearts: ಆಕ್ಟೋಪಸ್‌ಗೆ ಮೂರು ಹೃದಯಗಳಿರುವುದು ಏಕೆ?

(Rare blanket octopus spotted after 20 years in Australia)

Comments are closed.