Astrologer Kamalakara Bhat and Suchitra Naik: ಸಿದ್ದಾಪುರ (ಉತ್ತರ ಕನ್ನಡ): ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಸಾರ್ವಜನಿಕ ಆಕ್ರೋಶ ಕಟ್ಟೆಯೊಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್ ಹಾಗೂ ಇತರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ರೊಚ್ಚಿಗೆದ್ದ ಜನರು ಅವರ ಮೇಲೆ ಮುಗಿಬಿದ್ದು ಮನಬಂದಂತೆ ಥಳಿಸಿದ್ದಾರೆ.
ನಡುರಸ್ತೆಯಲ್ಲೇ ನಡೆದ ಹಲ್ಲೆ:
ಬುಧವಾರದಂದು ಪೊಲೀಸರು ಎ1 ಆರೋಪಿ ಸುಚಿತ್ರಾ, ಎ2 ಲೋಕನಾಥ್, ಎ3 ಜ್ಯೋತಿಷಿ ಕಮಲಾಕರ ಭಟ್ ಮತ್ತು ಎ4 ಆಕಾಶ್‌ನನ್ನು ಸಿದ್ದಾಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆತರುತ್ತಿದ್ದರು. ಈ ವಿಷಯ ತಿಳಿದ ನೂರಾರು ಜನರು ಕೋರ್ಟ್ ಆವರಣದಲ್ಲಿ ಜಮಾಯಿಸಿದ್ದರು. ಆರೋಪಿಗಳನ್ನು ಹೊತ್ತ ಪೊಲೀಸ್ ಜೀಪ್ ಬರುತ್ತಿದ್ದಂತೆ ಅಡ್ಡಗಟ್ಟಿದ ಜನರು, ಪೊಲೀಸರ ಭದ್ರತೆಯ ನಡುವೆಯೇ ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅದರಲ್ಲೂ ಸುಚಿತ್ರಾ ಮತ್ತು ಆಕೆಯ ತಂದೆಗೆ ಚಪ್ಪಲಿಯಿಂದ ಹೊಡೆದು ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ನ್ಯೂಸ್ 18 ಕನ್ನಡ ವರದಿ ಮಾಡಿದೆ.
ಜ್ಯೋತಿಷಿ ಕಮಲಾಕರ್ ಅಕ್ರಮ ಸಂಬಂಧ ಪ್ರಕರಣ: ಶಾಸಕ ಸುರೇಶ್ ಕುಮಾರ್- ಬಿಕೆ ಹರಿಪ್ರಸಾದ್ ನಡುವೆ ತೀವ್ರ ಜಟಾಪಟಿ
ಕೊಲೆಗೆ ಕಾರಣವಾದ ‘ಅಕ್ರಮ ಸಂಬಂಧ’?
ಈ ಹತ್ಯೆ ಪ್ರಕರಣದ ಹಿಂದೆ ಅಕ್ರಮ ಸಂಬಂಧದ ಕರಾಳ ಮುಖವಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಇಬ್ಬರು ಮಕ್ಕಳ ತಾಯಿಯಾದ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ ಭಟ್ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ಸುಚಿತ್ರಾಳ ಪತಿ ವಸಂತ ನಾಯ್ಕ್‌ಗೆ ತಿಳಿದಿತ್ತು. ದಾಂಪತ್ಯದ ನಡುವೆ ಅಡ್ಡಿಯಾಗಿದ್ದ ಪತಿಯನ್ನು ದಾರಿಯಿಂದ ತಪ್ಪಿಸಲು ಸುಚಿತ್ರಾ ಮತ್ತು ಆಕೆಯ ಪ್ರಿಯಕರ ಸೇರಿ ಈ ಭೀಕರ ಕೃತ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಠಾಣೆ ಎದುರು ತಡರಾತ್ರಿ ಪ್ರತಿಭಟನೆ:
ಸಿದ್ದಾಪುರದಲ್ಲಿ ಶಾಂತಿ ಕದಡಿದ ಈ ಘಟನೆಯಿಂದ ಸ್ಥಳೀಯರು ತೀವ್ರವಾಗಿ ಕೆರಳಿದ್ದಾರೆ. ಮಂಗಳವಾರ ತಡರಾತ್ರಿಯವರೆಗೂ ಸಿದ್ದಾಪುರ ಪೊಲೀಸ್ ಠಾಣೆಯ ಎದುರು ನೂರಾರು ಜನರು ಜಮಾಯಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಸದ್ಯ ಪರಿಸ್ಥಿತಿ ಉದ್ವಿಗ್ನವಾಗಿದ್ದು, ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.


