ಬೆಂಗಳೂರು ನಮ್ಮ ಮೆಟ್ರೋದಲ್ಲಿ ಮದ್ಯದ ಬಾಟಲಿ ಕೊಂಡೊಯ್ಯಲು ಅನುಮತಿ!

Bengaluru Namma Metro | Liquor in Metro: ಬೆಂಗಳೂರು: ಮೆಟ್ರೋದಲ್ಲಿ ಮದ್ಯದ ಬಾಟಲಿಗಳನ್ನು ಸಾಗಿಸಲು ಕಾಯುತ್ತಿರುವ ಬೆಂಗಳೂರಿನ ಪ್ರಯಾಣಿಕರಿಗೆ ಶೀಘ್ರದಲ್ಲೇ ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆ. ನಮ್ಮ ಮೆಟ್ರೋ ರೈಲುಗಳಲ್ಲಿ ಸೀಲ್ ಮಾಡಲಾದ (Sealed) ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲು ಅನುಮತಿ ನೀಡುವ ಕುರಿತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಗಂಭೀರವಾಗಿ ಆಲೋಚಿಸುತ್ತಿದೆ.

ದೆಹಲಿ ಮೆಟ್ರೋ ಮಾದರಿ ಪಾಲನೆ

ಪ್ರಸ್ತುತ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರಿಗೆ ಎರಡು ಸೀಲ್ಡ್ ಮದ್ಯದ ಬಾಟಲಿಗಳನ್ನು ಸಾಗಿಸಲು ಅವಕಾಶ ನೀಡಲಾಗಿದೆ. ಅದೇ ಮಾದರಿಯನ್ನು ಬೆಂಗಳೂರಿನಲ್ಲೂ ಜಾರಿಗೆ ತರುವ ಬಗ್ಗೆ ಇತ್ತೀಚಿನ ಸಭೆಯಲ್ಲಿ ಚರ್ಚೆ ನಡೆದಿದೆ. ವಿಶೇಷವಾಗಿ ಏರ್‌ಪೋರ್ಟ್ ಮಾರ್ಗ (ಬೆಂಗಳೂರು ಉತ್ತರ) ಪೂರ್ಣಗೊಂಡ ನಂತರ, ವಿಮಾನ ನಿಲ್ದಾಣದಿಂದ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ನಿಯಮ ಜಾರಿಗೆ ತರುವುದು ಅನಿವಾರ್ಯವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ನಿಯಮದಲ್ಲಿ ಏನಿದೆ ಬದಲಾವಣೆ?

  • ಸಾಗಾಟಕ್ಕೆ ಮಾತ್ರ ಅವಕಾಶ: ರೈಲಿನೊಳಗೆ ಮದ್ಯ ಸೇವಿಸಲು ಅಥವಾ ಬಾಟಲಿ ತೆರೆಯಲು ಕಟ್ಟುನಿಟ್ಟಿನ ನಿಷೇಧವಿರುತ್ತದೆ. ಕೇವಲ ಪ್ಯಾಕ್ ಮಾಡಲಾದ ಬಾಟಲಿಗಳನ್ನು ಸರಕಿನ ರೂಪದಲ್ಲಿ ಸಾಗಿಸಲು ಮಾತ್ರ ಅವಕಾಶ ನೀಡಲು ಉದ್ದೇಶಿಸಲಾಗಿದೆ.
  • ಅಸಭ್ಯ ವರ್ತನೆಗೆ ಕಡಿವಾಣ: ಮದ್ಯ ಸೇವಿಸಿ ಮೆಟ್ರೋ ಹತ್ತುವವರಿಗೆ ಸದ್ಯ ನಿಷೇಧವಿಲ್ಲದಿದ್ದರೂ, ಮಿತಿ ಮೀರಿದ ಅಮಲಿನಲ್ಲಿ ಇತರ ಪ್ರಯಾಣಿಕರಿಗೆ ತೊಂದರೆ ನೀಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಯಮ ಮುಂದುವರಿಯಲಿದೆ.
  • ತಾಂತ್ರಿಕ ತಿದ್ದುಪಡಿ: ಬಿಎಂಆರ್​​ಸಿಎಲ್ ಮಂಡಳಿಯಿಂದ ಈ ಪ್ರಸ್ತಾವನೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು, ಶೀಘ್ರದಲ್ಲೇ ಮೆಟ್ರೋ ಭದ್ರತಾ ನಿಯಮಾವಳಿಗಳಲ್ಲಿ ಅಧಿಕೃತವಾಗಿ ತಿದ್ದುಪಡಿ ತರಲಾಗುವುದು ಎನ್ನಲಾಗಿದೆ.

    ಹಾಸನದಲ್ಲಿ ಹನಿಟ್ರ್ಯಾಪ್ ಜಾಲ ಭೇದಿಸಿದ ಪೊಲೀಸರು; ಉಪನ್ಯಾಸಕಿಯೇ ದಂಧೆಯ ಕಿಂಗ್‌ಪಿನ್!

ಸಾರ್ವಜನಿಕರ ಅಭಿಪ್ರಾಯ

ಬಸ್ ಹಾಗೂ ರೈಲುಗಳಲ್ಲಿ ಮದ್ಯದ ಬಾಟಲಿ ಸಾಗಿಸಲು ಅವಕಾಶವಿರುವಾಗ ಮೆಟ್ರೋದಲ್ಲಿ ಮಾತ್ರ ಏಕೆ ನಿಷೇಧ ಎಂಬ ಪ್ರಶ್ನೆ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಸಾರ್ವಜನಿಕ ಸಾರಿಗೆಯಲ್ಲಿ ಸೀಲ್ಡ್ ಬಾಟಲಿಗಳನ್ನು ಸಾಮಾನ್ಯ ವಸ್ತುಗಳಂತೆ ಪರಿಗಣಿಸಬೇಕು ಎಂಬ ವಾದಕ್ಕೆ ಈಗ ಬಿಎಂಆರ್​​ಸಿಎಲ್ ಮನ್ನಣೆ ನೀಡಿದಂತಿದೆ.

ಒಟ್ಟಿನಲ್ಲಿ, ಈ ನಿಯಮ ಜಾರಿಗೆ ಬಂದಲ್ಲಿ ಸಂಜೆ ವೇಳೆ ಆಫೀಸ್ ಮುಗಿಸಿ ಮನೆಗೆ ಮದ್ಯ ಕೊಂಡೊಯ್ಯುವ ಮೆಟ್ರೋ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ಸಿಗಲಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories