Caste Survey : ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿವ್ಯವಸ್ಥೆ ಸೃಷ್ಟಿ ಕೈಬಿಡಿ : ಸಿಎಂಗೆ ಕ್ರಿಶ್ಚಿಯನ್ ಸೇವಾ ಸಂಘ ಒತ್ತಾಯ

ಬೆಂಗಳೂರು : ಜಾತಿ ಸಮೀಕ್ಷೆಯ (caste survey) ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಜಾತಿ ಸಂಘರ್ಷದ ಕಿಚ್ಚು ಹಚ್ಚಿದ್ದಾರೆ ಎಂದು ಕ್ರೈಸ್ತ ಧರ್ಮೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ವ್ಯವಸ್ಥೆ ಸೃಷ್ಠಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ, ಈ ಸಂಬಂಧದ ನಿರ್ಧಾರವನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕ್ರಿಶ್ಚಿಯನ್ ಸೇವಾ ಸಂಘ (Christian Seva Sangh) ಆಗ್ರಹಿಸಿದೆ.
ಕ್ರೈಸ್ತ ಧರ್ಮ ಹಾಗೂ ಜನರು ರಾಷ್ಟ್ರೀಯ ಹಿತಾಸಕ್ತಿಯನ್ನು ಪ್ರತಿಪಾದಿಸುತ್ತಿದ್ದಾರೆ. ಇದು ಜನರ ಹಿತಾಸಕ್ತಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವ ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ. ವರ್ಗೀಸ್ ಇದೀಗ ಜಾತಿ ಸಮೀಕ್ಷೆಯಲ್ಲಿ ಹೊಸ ಜಾತಿ ಸೃಷ್ಟಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಜಿ ಟಿ.ವರ್ಗೀಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಸರಕಾರದ ಮುಖ್ಯಕಾರ್ಯದರ್ಶಿ, ರಾಜ್ಯ ಹಿಂದುಳಿದ ವರ್ಗಗಳ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಸದ್ಯ ಈ ಪತ್ರ ರಾಜ್ಯದ ಗಮನಸೆಳೆದಿದೆ.
ಸಂವಿಧಾನದ ಆಶಯಗಳನ್ನು ಗೌರವಿಸುವ ಬಗ್ಗೆ ಭರವಸೆ ನೀಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈ ರಾಜ್ಯವನ್ನು ‘ಸರ್ವ ಜನಾಂಗಗಳ ಶಾಂತಿಯ ತೋಟ’ವನ್ನಾಗಿ ಮಾಡುವ ಭರವಸೆಯನ್ನು ನೀಡಿತ್ತು.
ಆದರೆ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೀಗ ಕರ್ನಾಟಕವನ್ನು ಸರ್ವ ಜನಾಂಗಗಗಳ ನಡುವೆ ಸಂಘರ್ಷ ತಂದೊಡ್ಡಲು ಪ್ರಯತ್ನ ನಡೆಸುತ್ತಿರುವುದು ವಿಷಾದನೀಯ ಎಂದು ಶಾಜಿ ಟಿ ವರ್ಗೀಸ್ ಅವರು ತಮ್ಮ ಈ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಜಾತಿ ಸಮೀಕ್ಷೆ ಬೇಸಿಗೆಯಲ್ಲಿ ನಡೆಸಿ, ಸೋನಿಯಾ ಓಲೈಕೆಗೆ ಸಿದ್ದು ಸಮೀಕ್ಷೆ : ಸುನಿಲ್ ಕುಮಾರ್
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವಿವಿಧ ಕ್ರಿಶ್ಚಿಯನ್ ಜಾತಿಗಳನ್ನು ನಮೂದಿಸಿ, ಕ್ರೈಸ್ತ ಧರ್ಮದಲ್ಲೂ ಜಾತಿ-ವ್ಯವಸ್ಥೆ ಸೃಷ್ಟಿಸಿರುವುದು ನ್ಯಾಯಸಮ್ಮತವಲ್ಲ ಎಂದಿದ್ದಾರೆ.
ಕ್ರೈಸ್ತ ಧರ್ಮದಲ್ಲಿ ನಿರ್ದಿಷ್ಟ ಪಂಗಡದ ಸಂಪ್ರದಾಯವನ್ನು ಅನುಸರಿಸಲಾಗುತ್ತದೆಯೇ ಹೊರತು, ಜಾತಿಯ ಆಧಾರದಲ್ಲಿ ಗುರುತಿಸಲಾಗುತ್ತಿಲ್ಲ. ಜಾತಿ ವ್ಯವಸ್ಥೆಯು ಕ್ರೈಸ್ತ ಧರ್ಮದಲ್ಲಿ ಇಲ್ಲ.
ಹೀಗೆ ಇರುವಾಗ ಕರ್ನಾಟಕ ರಾಜ್ಯ ಸರ್ಕಾರವು ಕ್ರೈಸ್ತ ಧರ್ಮವನ್ನು ಒಡೆಯುವ ಸಂಚಿನ ಪ್ರಯತ್ನವಾಗಿ ಕ್ರೈಸ್ತ ಧರ್ಮದಳೊಗೆ ವಿವಿಧ ಜಾತಿಗಳನ್ನು ಸೃಷ್ಟಿಸಿದೆ. ಇದು ಧರ್ಮ ವಿರೋಧಿ ನಡೆ ಆಗಿದೆ. ಕೂಡಲೇ ಈ ಜಾತಿ-ಪದ್ದತಿಗೆ ತಿಲಾಂಜಲಿ ಹಾಕಬೇಕಿದೆ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಜಾತಿಗಣತಿ ರದ್ದಾಗುತ್ತಾ ? ಹೈಕೋರ್ಟ್‌ಗೆ ಸಲ್ಲಿಕೆ ಆಯ್ತು ಪಿಐಎಲ್
ಹಿಂದಿನಿಂದಲೂ ನಡೆದುಕೊಂಡ ವ್ಯವಸ್ಥೆಯಲ್ಲಿ ಕ್ರೈಸ್ತ ಧರ್ಮೀಯರಿಗೆ ಸ್ಥಾನಮಾನ, ಸವಲತ್ತು ಸಿಗುವಂತೆ ಮಾಡಲು ಕರ್ನಾಟಕ ಸರಕಾರ ಕ್ರಮಕೈಗೊಳ್ಳಬೇಕು ಎಂದು ಕ್ರಿಶ್ಚಿಯನ್ ಸೇವಾ ಸಂಘ ಒತ್ತಾಯಿಸಿದೆ.
caste survey Karnataka Oppose Christian Seva Sangh



