ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿ ಬಿಲ್ ಕೊಡದೆ ಎಸ್ಕೇಪ್: ಉಡುಪಿಯಲ್ಲಿ ಹೈಟೆಕ್ ವಂಚನೆ, ಕಾರಿನ ನಂಬರ್ ಪತ್ತೆ 

ಪೆಟ್ರೋಲ್‌ ಬಂಕ್‌ಗೆ ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ಸ್ (Ford EcoSport) ಕಾರಿನಲ್ಲಿ ಮೂವರು ವ್ಯಕ್ತಿಗಳು ಬಂದಿದ್ದಾರೆ. ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ಬಂಕ್ ಸಿಬ್ಬಂದಿ ಶಶಾಂಕ್ ಎಂಬುವವರಲ್ಲಿ ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸುವಂತೆ ತಿಳಿಸಿದ್ದಾನೆ.

ಶಿರ್ವ : ಪೆಟ್ರೋಲ್ ಬಂಕ್‌ಗೆ ಬಂದು ಫುಲ್ ಟ್ಯಾಂಕ್ ಇಂಧನ ತುಂಬಿಸಿಕೊಂಡು, ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡುವ ನಾಟಕ ಆಡಿ, ಹಣವನ್ನು ಪಾವತಿ ಮಾಡದೆ ಎಸ್ಕೇಪ್‌ ಆಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜುಲೈ 27ರಂದು ರಂದು ರಾತ್ರಿ 9:10 ಗಂಟೆಗೆ ಕಾರ್ಕಳ ತಾಲೂಕು ಕುರ್ಕಾಲು ಗ್ರಾಮದ ಸುಭಾಸ್ ನಗರದಲ್ಲಿರುವ ಪೆಟ್ರೋಲ್‌ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲ್‌ ಬಂಕ್‌ಗೆ ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ಸ್ (Ford EcoSport) ಕಾರಿನಲ್ಲಿ ಮೂವರು ವ್ಯಕ್ತಿಗಳು ಬಂದಿದ್ದಾರೆ. ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ಬಂಕ್ ಸಿಬ್ಬಂದಿ ಶಶಾಂಕ್ ಎಂಬುವವರಲ್ಲಿ ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸುವಂತೆ ತಿಳಿಸಿದ್ದಾನೆ.

ಕ್ಯೂಆರ್ ಕೋಡ್ ಸ್ಕ್ಯಾನ್ ನಾಟಕ, ಬಿಲ್ ನೀಡುವಷ್ಟರಲ್ಲಿ ಪರಾರಿ

ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಶಶಾಂಕ್‌ ಕಾರಿಗೆ 4711 ರೂಪಾಯಿ ಮೌಲ್ಯದ ಡಿಸೇಲ್‌ ತುಂಬಿಸಿದ್ದಾರೆ. ನಂತರದಲ್ಲಿ ಹಣ ಪಾವತಿಸಲು ಆನ್‌ಲೈನ್‌ QR Code ನೀಡುವಂತೆ ಕಾರಿನವರು ಕೇಳಿದ್ದಾರೆ. ಅಲ್ಲಿಯೇ ಇದ್ದ ಸಿಬ್ಬಂದಿ QR Code ತೋರಿಸಿದಾಗ, ಅದನ್ನು ಸ್ಕ್ಯಾನ್ ಮಾಡಿದ ಆರೋಪಿಗಳು ನಮಗೆ ಬಿಲ್ ಪ್ರಿಂಟ್ ಕೊಡಿ ಎಂದು ಹೇಳಿದ್ದಾರೆ.

ನೌಕರ ಶಶಾಂಕ್ ಅವರು ಬಿಲ್ ಪ್ರಿಂಟ್ ತೆಗೆಯಲು ತಿರುಗುವಷ್ಟರಲ್ಲಿ, ಆನ್‌ಲೈನ್‌ನಲ್ಲಿ ಹಣ ಪಾವತಿಸದೆಯೇ ಆರೋಪಿಗಳು ರಾತ್ರಿ 9:19ರ ಸುಮಾರಿಗೆ ಕಾರನ್ನು ಅತಿ ವೇಗವಾಗಿ ಚಲಾಯಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಡಿಜಿಟಲ್ ಪೇಮೆಂಟ್ ಮಾಡುವುದಾಗಿ ನಂಬಿಸಿ ಬಂಕ್ ಸಿಬ್ಬಂದಿಗೆ ವಂಚಿಸಲಾಗಿದೆ.

ಡೇನಿಯಲ್‌ ಸಿ ಅಮ್ಮಣ್ಣ ಎಂಬವರಿಗೆ ಸೇರಿದ ಈ ಪೆಟ್ರೋಲ್‌ ಬಂಕ್‌ನ ಮೇಲುಸ್ತುವಾರಿಯನ್ನು ಅಳಿಯ ಮಂಗಳೂರು ನಿವಾಸಿ ಆಶಿಶ್‌ ಅವರು ನೋಡಿಕೊಳ್ತಿದ್ದರು. ಸದ್ಯ ಆಶಿಶ್‌ ನೀಡಿದ ದೂರಿನ ಆಧಾರದ ಮೇಲೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಮುಖ್ಯಾಂಶಗಳು :

  • ಕಾರಿನ ನೋಂದಣಿ ಸಂಖ್ಯೆ: KA-14-MB-8452 (ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ಸ್)
  • ದಾಖಲಾದ ಠಾಣೆ: ಶಿರ್ವಾ ಪೊಲೀಸ್ ಠಾಣೆ (ಅಪರಾಧ ಕ್ರಮಾಂಕ: 56/2026)
  • ಕಾನೂನು ಕಲಂಗಳು: ಭಾರತೀಯ ನ್ಯಾಯ ಸಂಹಿತೆ (BNS) ಯ ಸೆಕ್ಷನ್ 316(2) [ವಿಶ್ವಾಸದ್ರೋಹ] ಮತ್ತು 318(4) [ವಂಚನೆ] ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರಿನ ನಂಬರ್ ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Udupi shirva petrol bunk cheating ford Eco Sport qr code fraud

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »