Duniya Vijay Landlord film: ಬೆಂಗಳೂರು: ಸಾಮಾಜಿಕ ಅಸಮಾನತೆ ಹಾಗೂ ಜಾತಿ ಶೋಷಣೆಯ ಕಥಾಹಂದರ ಹೊಂದಿರುವ ಕನ್ನಡದ ‘ಲ್ಯಾಂಡ್ಲಾರ್ಡ್’ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಈ ಚಿತ್ರವು ಜನವರಿ 23ರಂದು ತೆರೆಕಂಡಿದ್ದು, 1970ರ ದಶಕದ ಗ್ರಾಮೀಣ ಭಾಗದ ಜಾತಿ ಸಂಘರ್ಷ ಹಾಗೂ ರೈತರ ಭೂಮಿ ಹಕ್ಕಿನ ಹೋರಾಟವನ್ನು ಒಳಗೊಂಡಿದೆ. ಇತ್ತೀಚೆಗೆ ಚಿತ್ರತಂಡವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಸಿನಿಮಾ ವೀಕ್ಷಿಸುವಂತೆ ಆಹ್ವಾನ ನೀಡಿತ್ತು ಹಾಗೂ ತೆರಿಗೆ ವಿನಾಯಿತಿಗೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಪುರಸ್ಕರಿಸಿರುವ ಸಿಎಂ, ಚಿತ್ರದ ಸಾಮಾಜಿಕ ಸಂದೇಶವನ್ನು ಪರಿಗಣಿಸಿ ಈ ತೀರ್ಮಾನ ಕೈಗೊಂಡಿದ್ದಾರೆ.
ಭೂಮಾಲೀಕರ ದಬ್ಬಾಳಿಕೆ ಹಾಗೂ ತುಳಿತಕ್ಕೊಳಗಾದ ಸಮುದಾಯಗಳ ಪ್ರತಿರೋಧವನ್ನು ಸಿನಿಮಾ ಚಿತ್ರಿಸಿದೆ. ದುನಿಯಾ ವಿಜಯ್ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದು, ರಚಿತಾ ರಾಮ್, ರಾಜ್ ಬಿ. ಶೆಟ್ಟಿ ಹಾಗೂ ಉಮಾಶ್ರೀ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಪುತ್ರಿ ರಿತನ್ಯಾ ರಾಮ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಬಿಡುಗಡೆಯಾದ ದಿನದಿಂದ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿರುವ ಈ ಚಿತ್ರ, ಬುಕ್ ಮೈ ಶೋನಂತಹ ತಾಣಗಳಲ್ಲಿ 9.4/10 ರೇಟಿಂಗ್ ಪಡೆದಿದೆ.
ಚಿಕ್ಕಬಳ್ಳಾಪುರದಲ್ಲಿ ಚಿನ್ನದ ನಿಕ್ಷೇಪದ ಸುಳಿವು : 3 ದಿನಗಳಿಂದ ವೈಮಾನಿಕ ಸಮೀಕ್ಷೆ
ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಲಿದ್ದು, ಗಂಭೀರ ವಸ್ತುವುಳ್ಳ ಈ ಸಿನಿಮಾ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

