‘ಯತೀಂದ್ರ ಅವರೇ ನಮ್ಮ ಹೈಕಮಾಂಡ್’: ಡಿಕೆ ಶಿವಕುಮಾರ್ ಖಡಕ್ ತಿರುಗೇಟು
DK Shivakumar | Yathindra Siddaramaiah | Karnataka Politics: ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೆ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಚರ್ಚೆ ಈಗ ಬಹಿರಂಗ ವಾಕ್ಸಮರಕ್ಕೆ ನಾಂದಿ ಹಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪೂರ್ಣಾವಧಿ (5 ವರ್ಷ) ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂಬ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ್ದ ಯತೀಂದ್ರ ಸಿದ್ದರಾಮಯ್ಯ, “ಹೈಕಮಾಂಡ್ ಈಗಾಗಲೇ ಹಸಿರು ನಿಶಾನೆ ನೀಡಿದೆ. ಐದು ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಇದರಲ್ಲಿ ಯಾವುದೇ ಗೊಂದಲವಿಲ್ಲ,” ಎಂದು ಹೇಳುವ ಮೂಲಕ ಡಿಕೆಶಿ ಬಣಕ್ಕೆ ನೇರ ಸಂದೇಶ ರವಾನಿಸಿದ್ದರು.
ಡಿಕೆಶಿ ನೀಡಿದ ಟಾಂಗ್:
ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಯತೀಂದ್ರ ಅವರ ಹೆಸರೆತ್ತದೆ ಮಾರ್ಮಿಕವಾಗಿ ಟೀಕಿಸಿದರು:
ಹೈಕಮಾಂಡ್ ವ್ಯಂಗ್ಯ: “ಯತೀಂದ್ರ ಅವರೇ ನಮ್ಮ ಹೈಕಮಾಂಡ್. ಅವರು ಹೇಳಿದ್ದನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ. ಅವರೇ ಹೈಕಮಾಂಡ್ ತರಹ ಮಾತನಾಡುತ್ತಿರುವುದರಿಂದ, ಅವರನ್ನೇ ಹೈಕಮಾಂಡ್ ಎಂದು ಒಪ್ಪಿಕೊಳ್ಳೋಣ,” ಎಂದು ಕುಟುಕಿದ್ದಾರೆ.
ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ನಿಧನ
ದೆಹಲಿ ತೀರ್ಮಾನ: “ಅಧಿಕಾರ ಹಂಚಿಕೆ ಅಥವಾ ನಾಯಕತ್ವದ ಬಗ್ಗೆ ಏನಾದರೂ ಹೇಳಬೇಕಿದ್ದರೆ ದೆಹಲಿಯ ನಾಯಕರು ಹೇಳಬೇಕು. ಬೇರೆಯವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಪ್ರಾರ್ಥನೆ ಮತ್ತು ಪ್ರಯತ್ನ: “ಆಸೆ ಪಡುವುದು ತಪ್ಪಲ್ಲ, ಅದು ಅವರ ಪ್ರಾರ್ಥನೆ. ಪ್ರಯತ್ನಗಳು ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗಲ್ಲ,” ಎನ್ನುವ ಮೂಲಕ ತಮ್ಮ ಸಿಎಂ ಕನಸು ಇನ್ನೂ ಜೀವಂತವಾಗಿದೆ ಎಂಬ ಸುಳಿವು ನೀಡಿದ್ದಾರೆ.
ತಮ್ಮ ಪುತ್ರನ ಹೇಳಿಕೆಯಿಂದ ಉಂಟಾದ ವಿವಾದದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ‘ನೋ ರಿಯಾಕ್ಷನ್’ ಎಂದು ಸನ್ನೆ ಮಾಡುವ ಮೂಲಕ ಸುಮ್ಮನಾಗಿದ್ದಾರೆ.



