Gruhalakshmi scheme : ಗೃಹಲಕ್ಷ್ಮೀಯರೇ ಗಮನಿಸಿ… ಗೃಹಲಕ್ಷ್ಮೀ ಯೋಜನೆಗೆ ಮತ್ತೊಂದು ಹೊಸ ನಿಯಮ

ಮನೆ ಯಜಮಾನಿಯ ಸಕ್ರಿಯ ಮೊಬೈಲ್ ಸಂಖ್ಯೆಯು ಆಕೆಯ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಲಿಂಕ್ ಆಗಿದ್ದರೆ ಮಾತ್ರ ಮಾಸಿಕ ₹2,000 ಪ್ರೋತ್ಸಾಹಧನ ನೇರವಾಗಿ ಜಮೆಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು : ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ (Gruhalakshmi scheme ) ಯಲ್ಲಿ ಪಾರದರ್ಶಕತೆ ತರಲು ಹಾಗೂ ಹಣದ ದುರುಪಯೋಗವನ್ನು ಸಂಪೂರ್ಣವಾಗಿ ತಡೆಯಲು ನೂತನ ಕಠಿಣ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.

ಮನೆ ಯಜಮಾನಿಯ ಸಕ್ರಿಯ ಮೊಬೈಲ್ ಸಂಖ್ಯೆಯು ಆಕೆಯ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಲಿಂಕ್ ಆಗಿದ್ದರೆ ಮಾತ್ರ ಮಾಸಿಕ ₹2,000 ಪ್ರೋತ್ಸಾಹಧನ ನೇರವಾಗಿ ಜಮೆಯಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಹೊಸ ನಿಯಮಾವಳಿಯ ಪ್ರಕಾರ, ಗೃಹಲಕ್ಷ್ಮೀ ಹಣ ಜಮೆಯಾಗಲಿರುವ ಬ್ಯಾಂಕ್​ ಖಾತೆಗೆ ಯಜಮಾನಿಯ ಹೆಸರಲ್ಲಿ ಲಿಂಕ್​ ಆಗಿರುವ ಮೊಬೈಲ್​ ಸಂಖ್ಯೆ ಜೋಡಣೆಯಾಗಿರುವುದು ಕಡ್ಡಾಯವಾಗಿದೆ.ಫಲಾನುಭವಿ ಮಹಿಳೆಯ ಬದಲಾಗಿ ಆಕೆಯ ಪತಿ, ಮಕ್ಕಳು ಅಥವಾ ಸೊಸೆಯ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ಅವಕಾಶ ನೀಡುವುದಿಲ್ಲ.

ನಕಲಿ ಖಾತೆಗಳನ್ನು ಹಾಗೂ ಮರಣ ಹೊಂದಿದವರ ಹೆಸರಿನಲ್ಲಿ ಹಣ ಲೂಟಿಯಾಗುವುದನ್ನು ತಡೆಯಲು ಶೀಘ್ರದಲ್ಲೇ ಬಯೋಮೆಟ್ರಿಕ್ ಅಥವಾ ಮುಖದ ಗುರುತು ದೃಢೀಕರಣ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಎಲ್ಲಾ ಪರಿಷ್ಕೃತ ಸುರಕ್ಷತಾ ನಿಯಮಗಳನ್ನು ಒಳಗೊಂಡ ಹೊಸ ಅರ್ಜಿ ನಮೂನೆಗಳನ್ನು ಸರ್ಕಾರವು ಶೀಘ್ರದಲ್ಲೇ ವಿತರಿಸಲಿದೆ ಎಂದು ಸ್ವತಃ ಸಿಎಂ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

ಇನ್ನು ಗೃಹಲಕ್ಷ್ಮೀ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ತಮ್ಮ ಗೃಹಲಕ್ಷ್ಮೀ ಯೋಜನೆಯ ಸ್ಟೇಟಸ್​ನ್ನು ಸ್ವತಃ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ. ಸೇವಾ ಸಿಂಧು ಗ್ಯಾರಂಟಿ ಯೋಜನೆಗಳ ಪೋರ್ಟಲ್​ಗೆ ಭೇಟಿ ನೀಡಿ, ನಿಮ್ಮ ರೇಷನ್​ ಕಾರ್ಡ್ ಸಂಖ್ಯೆ ಬಳಸಿ ಅರ್ಹತೆ ಪರಿಶೀಲನೆ ಮಾಡಬಹುದಾಗಿದೆ.

ಇದನ್ನು ಹೊರತುಪಡಿಸಿ, ಕರ್ನಾಟಕ ಡಿಬಿಟಿ ಆ್ಯಪ್​ನ್ನು ಪ್ಲೇ ಸ್ಟೋರ್​ನಲ್ಲಿ ಡೌನ್​ಲೋಡ್​ ಮಾಡಿಕೊಂಡು, ನಿಮ್ಮ ಆಧಾರ್​ ಸಂಖ್ಯೆಯನ್ನು ನಮೂದಿಸುವ ಮೂಲಕವೂ ಪತ್ತೆ ಹಚ್ಚಬಹುದಾಗಿದೆ. ಇನ್ನು ಉಚಿತ ಎಸ್​ಎಂಎಸ್​ ಸೇವೆ ಕೂಡ ಚಾಲ್ತಿಯಲ್ಲಿದ್ದು, 12 ಅಂಕಿಯ ಪಡಿತರ ಚೀಟಿ ಸಂಖ್ಯೆಯನ್ನು 8147500500 ಅಥವಾ 8277000555 ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಪ್ರಸ್ತುತ ಸ್ಟೇಟಸ್ ತಿಳಿದುಕೊಳ್ಳಬಹುದಾಗಿದೆ.

Gruhalakshmi scheme new rules and regulations

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »