ರಾಜ್ಯ ಸರ್ಕಾರದ ಎರಡನೇ ಅವಧಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರುವ ಕನಸು ಕಂಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ಗೆ ಸದ್ಯ ನಿರಾಶೆಯೊಂದನ್ನು ಬಿಟ್ಟು ಮತ್ತೇನು ಸಿಗುತ್ತಿಲ್ಲ. ಹೀಗಾಗಿ ಆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಡಿಸಿಎಂ ಡಿಕೆಶಿ ಹೊರ ಹಾಕುತ್ತಲೇ ಇರ್ತಾರೆ. ಕೆಲವು ದಿನಗಳ ಹಿಂದೆಯಷ್ಟೇ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗದು ಎಂಬ ಪೋಸ್ಟ್ ಹಾಕಿದ್ದರು. ಇದೀಗ ಈ ಬೆನ್ನಲ್ಲೇ ಎಲ್ಲಾ ನಾಯಕರ ಭೇಟಿಗೆ ಡಿಕೆಶಿ ಇಂದು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ಆಸ್ಸಾಂ ವಿಧಾನಸಭಾ ಚುನಾವಣೆಯ ವೀಕ್ಷಕರಾಗಿ ನೇಮಕಗೊಂಡಿರುವ ಡಿಕೆಶಿ ಈ ಸಂಬಂಧ ಚರ್ಚೆಗಾಗಿ ದೆಹಲಿಗೆ ಭೇಟಿ ನೀಡುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ. ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಚುನಾವಣಾ ಸಂಬಂಧ ಚರ್ಚೆಗಾಗಿ ದೆಹಲಿಗೆ ಪ್ರಯಾಣ ಬೆಳೆಸುತ್ತಿರುವೆ. ಮೊನ್ನೆ ಕೂಡ ಮೈಸೂರಿನಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದರು. ಅವರು ನಮ್ಮ ನಾಯಕರು. ನಮ್ಮ ಭೇಟಿ ಹೊಸತೇನಲ್ಲ. ಭೇಟಿ ವೇಳೆ ಯಾವೆಲ್ಲ ವಿಷಯ ಚರ್ಚಿಸಿದ್ವಿ ಎಂಬುದನ್ನು ಸಾರ್ವಜನಿಕ ಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದೇ ವೇಳೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗದು ಎಂಬ ತಮ್ಮ ಪೋಸ್ಟ್ ಬಗ್ಗೆಯೂ ಸಮರ್ಥನೆ ನೀಡಿದ ಅವರು, ಇದಕ್ಕೆ ಬೇರೆ ವ್ಯಾಖ್ಯಾನ ಕಲ್ಪಿಸಬೇಡಿ. ನಾನು ಮೇಕೆದಾಟು ಯೋಜನೆ ಕುರಿತಂತೆ ವ್ಯಕ್ತಪಡಿಸಿದ ಅಭಿಪ್ರಾಯವದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಮುಂಚೂಣಿಯಲ್ಲಿರುವ ಹೆಸರು ಇವರದ್ದೇ ನೋಡಿ
ರಾಜ್ಯದಲ್ಲಿ ಅಧಿಕಾರ ಬದಲಾವಣೆ ಜಟಾಪಟಿ ಆರಂಭವಾದಾಗಿನಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಒಂದಿಲ್ಲೊಂದು ಮಾರ್ಮಿಕ ಪೋಸ್ಟ್ಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಹೇಗಾದರೂ ಮಾಡಿ ಮುಖ್ಯಮಂತ್ರಿಗಾದಿಯಲ್ಲಿ ಕೂರಬೇಕು ಎಂಬ ಹಠ ತೊಟ್ಟಿರುವ ಡಿ.ಕೆ ಶಿವಕುಮಾರ್ಗೆ ಈ ಬಾರಿಯ ದೆಹಲಿ ಭೇಟಿಯಿಂದಾದರೂ ಸಾಕಾರವಾಗುತ್ತಾ ಎಂದು ಕಾದು ನೋಡಬೇಕಿದೆ.


