ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯ; ಮೈಕೊರೆಯುವ ಚಳಿಯಲ್ಲಿ ಬೆಂಗಳೂರಲ್ಲಿ ಮಳೆ!

Karnataka Weather Today: ಬೆಂಗಳೂರು: ರಾಜ್ಯದ ಹವಾಮಾನದಲ್ಲಿ ಶನಿವಾರ (ಜನವರಿ 10, 2026) ಒಂದು ಅಪರೂಪದ ವಿದ್ಯಮಾನ ಕಂಡುಬಂದಿದೆ. ರಾಜ್ಯದ ಒಂದೆಡೆ ಉತ್ತರ ಮತ್ತು ಒಳನಾಡು ಜಿಲ್ಲೆಗಳು ತೀವ್ರ ಶೀತಗಾಳಿಯ (Cold Wave) ಹಿಡಿತಕ್ಕೆ ಸಿಲುಕಿದ್ದರೆ, ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣದ ಕೆಲವು ಭಾಗಗಳಲ್ಲಿ ಹಗುರವಾದ ತುಂತುರು ಮಳೆಯಾಗಿದೆ.
ಬೆಂಗಳೂರು ಹವಾಮಾನ ಇಲಾಖೆಯ ನಿರ್ದೇಶಕರ ಪ್ರಕಾರ, ರಾಜ್ಯವು ಏಕಕಾಲದಲ್ಲಿ ಎರಡು ವಿಭಿನ್ನ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಈಶಾನ್ಯ ಮತ್ತು ವಾಯುವ್ಯ ದಿಕ್ಕಿನಿಂದ ಬೀಸುತ್ತಿರುವ ತಂಪು ಗಾಳಿಯ ಪ್ರಭಾವದಿಂದ ತಾಪಮಾನವು ಸಾಮಾನ್ಯಕ್ಕಿಂತ 3 ರಿಂದ 6 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಈ ಭಾಗಗಳಿಗೆ ಹವಾಮಾನ ಇಲಾಖೆ ‘ಕೋಲ್ಡ್ ವೇವ್’ ಎಚ್ಚರಿಕೆಯನ್ನು ನೀಡಿದೆ.
ಮತ್ತೊಂದೆಡೆ, ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ, ಶ್ರೀಲಂಕಾ ಕರಾವಳಿಯ ಸಮೀಪ ಉಂಟಾಗಿರುವ ವಾಯುಭಾರ ಕುಸಿತದ (Depression) ಪ್ರಭಾವದಿಂದಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಬೆಂಗಳೂರು, ಮಂಡ್ಯ, ರಾಮನಗರ ಮತ್ತು ಕರಾವಳಿಯ ಕೆಲವು ಭಾಗಗಳಲ್ಲಿ ಶನಿವಾರ ಜಿಟಿ ಜಿಟಿ ಮಳೆಯಾಗಿದೆ. ಮುಂದಿನ ಎರಡು ದಿನಗಳ ಕಾಲ ಇದೇ ರೀತಿಯ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಸುಕನ್ಯಾ ಸಮೃದ್ಧಿ ಯೋಜನೆ: ಹೆಣ್ಣುಮಕ್ಕಳ ಬಾಳು ಬಂಗಾರವಾಗಲು ಹೀಗೆ ಮಾಡಿ
ಹವಾಮಾನದಲ್ಲಿ ಉಂಟಾಗಿರುವ ಈ ದಿಢೀರ್ ಏರುಪೇರಿನಿಂದಾಗಿ ಆರೋಗ್ಯ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಚಳಿ ಮತ್ತು ಮಳೆ ಒಟ್ಟೊಟ್ಟಿಗೆ ಇರುವುದರಿಂದ ಜ್ವರ, ಶೀತ ಮತ್ತು ವೈರಲ್ ಸೋಂಕುಗಳು ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರು ಬೆಚ್ಚಗಿನ ಬಟ್ಟೆ ಧರಿಸುವಂತೆ ಹಾಗೂ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.



