ಮೈಸೂರು ಪಾಲಿಕೆಯ ‘ಕನ್ನಡಿ’ ತಂತ್ರ: ಬಹಿರಂಗ ಮೂತ್ರ ವಿಸರ್ಜಿಸುವವರಿಗೆ ಇನ್ನು ‘ಮುಖದರ್ಶನ’ ಭಾಗ್ಯ!
ಸಾರ್ವಜನಿಕ ಸ್ಥಳಗಳನ್ನು ಅತ್ಯಂತ ಶುಚಿಯಾಗಿಟ್ಟುಕೊಂಡಿರುವ ಮೈಸೂರು ಮಹಾನಗರ ಪಾಲಿಕೆಗೆ ಈ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರದ್ದೇ ದೊಡ್ಡ ತಲೆನೋವಾಗಿತ್ತು.

ಮೈಸೂರು ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ಎತ್ತಿದ ಕೈ. ಸಾರ್ವಜನಿಕ ಸ್ಥಳಗಳನ್ನು ಅತ್ಯಂತ ಶುಚಿಯಾಗಿಟ್ಟುಕೊಂಡಿರುವ ಮೈಸೂರು ಮಹಾನಗರ ಪಾಲಿಕೆಗೆ ಈ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವವರದ್ದೇ ದೊಡ್ಡ ತಲೆನೋವಾಗಿತ್ತು. ಬಹಿರ್ದೆಸೆ ಮಾಡದಂತೆ ಎಷ್ಟೇ ಸೂಚನಾ ಫಲಕಗಳನ್ನು ಅಳವಡಿಸಿದರೂ, ಗೋಡೆ ಬರಹಗಳನ್ನು ಬರೆದರೂ ಅದರ ಮೇಲೆಯೇ ಮೂತ್ರ ವಿಸರ್ಜನೆ ಮಾಡುವ ಹಾಗೂ ತಂಬಾಕು ಉಗುಳುವ ಅಭ್ಯಾಸ ನಡೆಯುತ್ತಲೇ ಇತ್ತು. ಆದರೆ ಇದೀಗ ಹೊಸ ಪ್ಲಾನ್ ಒಂದನ್ನು ಮೈಸೂರು ಪಾಲಿಕೆ ಜಾರಿಗೆ ತಂದಿದ್ದು, ಕನ್ನಡಿ ತಂತ್ರಕ್ಕೆ ಮೊರೆ ಹೋಗಿದೆ.
ಗ್ರಾಮಾಂತರ ಬಸ್ ನಿಲ್ದಾಣದ ಬಳಿಯಲ್ಲಿ ಗೋಡೆಗೆ ಮೂತ್ರ ವಿಸರ್ಜನೆ ಮಾಡದಂತೆ 85 ಮೀಟರ್ ಉದ್ದದಲ್ಲಿ ಕನ್ನಡಿಯನ್ನು ಅಳವಡಿಸಲಾಗಿದೆ. ಮೋರಿಗೆ ಅಡ್ಡಲಾಗಿ ಕಟ್ಟಿದ್ದ ಕಾಂಪೌಂಡ್‌ಗೆ ಸಾರ್ವಜನಿಕರು ಮೂತ್ರ ವಿಸರ್ಜಿಸಿ, ದುರ್ವಾಸನೆ ಮೂಡುವಂತೆ ಮಾಡಿದ್ದರು. ಹೀಗಾಗಿ ಈ ಸ್ಟೀಲ್ ಕನ್ನಡಿ ಅಳವಡಿಸಲಾಗಿದ್ದು, ರಸ್ತೆಯ ಇನ್ನೊಂದು ಭಾಗದಲ್ಲಿ ನಡೆದು ಹೋಗುತ್ತಿರುವವರಿಗೂ ಮೂತ್ರ ಮಾಡುವವರ ಮುಖ ಸ್ಪಷ್ಟವಾಗಿ ಗೋಚರಿಸಲಿದೆ.
ಮೂತ್ರ ವಿಸರ್ಜಿಸುವವರು, ಪಾನ್ ಮಸಾಲ ಉಗಿಯುವವರು ಅಲ್ಲಿ ನಿಂತಾಗ ತಮ್ಮ ಮುಖವನ್ನೇ ಕಂಡು, ಇತರರಿಗೂ ಕಾಣಿಸುತ್ತದೆ ಎಂಬ ನಾಚಿಕೆಯಿಂದ ವಾಪಸು ತೆರಳುತ್ತಿದ್ದಾರೆ. ಪಾಲಿಕೆಯ ಈ ಮಾಸ್ಟರ್ ಪ್ಲಾನ್ಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ. ಸ್ಟೀಲ್ ಕನ್ನಡಿಯ ಸುತ್ತ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಹೀಗಾಗಿ ರಾತ್ರಿ ವೇಳೆ ಕೂಡ ಕನ್ನಡಿಯಲ್ಲಿ ಸ್ಪಷ್ಟ ಚಿತ್ರಣ ಕಾಣಲಿದೆ. ಬಸ್ಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಮೂಗು ಬಿಡಲು ಆಗದಂತಾ ವಾಸನೆ ಇರುತ್ತಿತ್ತು. ಪಾಲಿಕೆಯ ಈ ಮಿರರ್ ತಂತ್ರದಿಂದಾಗಿ ಕೊಂಚ ನಿರಾಳವಾಗಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ..



