ಡೇ ಕೇರ್ನಲ್ಲಿ ಕಂದಮ್ಮಗಳನ್ನು ಬಿಡುವ ಪೋಷಕರೇ ಎಚ್ಚರ : ಮಕ್ಕಳು ಹಠ ಮಾಡಿದ್ದಕ್ಕೆ ವಾಷಿಂಗ್ ಮಷಿನ್ನಲ್ಲಿ ಹಾಕಿ ಹಿಂಸೆ
ಉದ್ಯೋಗಸ್ಥ ಪೋಷಕರು ತಮ್ಮ ಮಕ್ಕಳನ್ನು ಡೇಕೇರ್ನಲ್ಲಿ ಬಿಡುವುದು ಸರ್ವೇ ಸಾಮಾನ್ಯ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ಅಮಾನವೀಯ ಘಟನೆಯೊಂದು ಮಕ್ಕಳನ್ನು ಡೇ ಕೇರ್ ಸೆಂಟರ್‌ನಲ್ಲಿ ಬಿಡಲು ನೂರು ಬಾರಿ ಯೋಚಿಸುವಂತೆ ಮಾಡಿದೆ.
ಬೆಂಗಳೂರು: ಉದ್ಯೋಗಸ್ಥ ಪೋಷಕರು ತಮ್ಮ ಮಕ್ಕಳನ್ನು ಡೇಕೇರ್ನಲ್ಲಿ ಬಿಡುವುದು ಸರ್ವೇ ಸಾಮಾನ್ಯ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ಅಮಾನವೀಯ ಘಟನೆಯೊಂದು ಮಕ್ಕಳನ್ನು ಡೇ ಕೇರ್ ಸೆಂಟರ್‌ನಲ್ಲಿ ಬಿಡಲು ನೂರು ಬಾರಿ ಯೋಚಿಸುವಂತೆ ಮಾಡಿದೆ. ಹೌದು..! ರಾಜಧಾನಿ ಬೆಂಗಳೂರಿನ ಬ್ರೂಕ್‌ಫೀಲ್ಡ್ ವಲಯದಲ್ಲಿ ನಡೆದ ಅಮಾನವೀಯ ಘಟನೆಯೊಂದು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಖಾಸಗಿ ಐಟಿ ಕಂಪನಿಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡೇ ಕೇರ್ ಸೆಂಟರ್‌ನಲ್ಲಿ, ಕೇವಲ ಎರಡು ಮತ್ತು ಮೂರು ವರ್ಷದ ಪುಟ್ಟ ಮಕ್ಕಳಿಗೆ ಅಲ್ಲಿನ ಆಯಾಗಳು ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವ ಕರಾಳ ಸತ್ಯ ಇದೀಗ ಸಾರ್ವಜನಿಕವಾಗಿ ಬಯಲಾಗಿದೆ.
ತಮ್ಮ ವೃತ್ತಿಬದುಕಿನ ಅನಿವಾರ್ಯತೆಯಿಂದಾಗಿ ಪೋಷಕರು ನಂಬಿಕೆಯಿಂದ ಒಪ್ಪಿಸಿ ಹೋಗುತ್ತಿದ್ದ ಕಂದಮ್ಮಗಳನ್ನು ಈ ಕೇಂದ್ರದ ಸಿಬ್ಬಂದಿ ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದರು. ಮಕ್ಕಳು ಅತ್ತಾಗ ಅಥವಾ ಹಠ ಮಾಡಿದಾಗ ಅವರನ್ನು ವಾಷಿಂಗ್ ಮಷಿನ್‌ನೊಳಗೆ ಕೂಡಿ ಹಾಕುವುದು ಮತ್ತು ಶೌಚಾಲಯದ ಜೆಟ್ ಸ್ಪ್ರೇ ಪೈಪ್ ಅನ್ನು ಬಲವಂತವಾಗಿ ಅವರ ಬಾಯಿಗೆ ತುರುಕಿ ನೀರು ಬಿಡುವುದು ಸೇರಿದಂತೆ ಕಲ್ಪಿಸಿಕೊಳ್ಳಲಾಗದ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಮಕ್ಕಳನ್ನು ಬಾತ್‌ರೂಮ್‌ನಲ್ಲಿ ಗಂಟೆಗಟ್ಟಲೆ ಕೂಡಿ ಹಾಕಿ ಹೆದರಿಸಲಾಗುತ್ತಿತ್ತು.
ಕೇಂದ್ರದ ಮತ್ತೊಬ್ಬ ಸಿಬ್ಬಂದಿ ಈ ಭೀಕರ ದೃಶ್ಯಗಳನ್ನು ರಹಸ್ಯವಾಗಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮತ್ತು ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಸ್ಥಳಕ್ಕೆ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಐವರು ಆಯಾಗಳು ಹಾಗೂ ಸೂಪರ್‌ವೈಸರ್ ಸೇರಿ ಒಟ್ಟು ಆರು ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಬಾಲನ್ಯಾಯ ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಲಾಗಿದೆ.
ಈ ದೌರ್ಜನ್ಯವು ಪೋಷಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಕಣ್ಣಿಗೆ ಕಾಣುವ ಸುರಕ್ಷಿತ ಪರಿಸರಗಳಲ್ಲೂ ಇಂತಹ ಪೈಶಾಚಿಕ ಕೃತ್ಯಗಳು ನಡೆಯುತ್ತಿರುವುದು ಶಿಶುಪಾಲನಾ ಕೇಂದ್ರಗಳ ಮೇಲಿನ ವಿಶ್ವಾಸವನ್ನು ಕದಡಿದೆ. ಇಂತಹ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ನಿಗಾ ಇರಿಸಬೇಕು ಮತ್ತು ಸರ್ಕಾರವು ನಿಯಮಿತವಾಗಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಪುಟ್ಟ ಜೀವಗಳ ರಕ್ಷಣೆಗಾಗಿ ಇಂತಹ ಅಪರಾಧಿಗಳಿಗೆ ಕಾನೂನಿನ ಮೂಲಕ ಕಠಿಣ ಶಿಕ್ಷೆಯಾಗಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.
Parents who leave their little ones at daycares take note Children tortured by being put in a washing machine for being stubborn

