ಬೆಂಗಳೂರಿನಿಂದ ಮಂಗಳೂರು ಪ್ರಯಾಣ ಮತ್ತಷ್ಟು ಸುಲಭ : ಕೇವಲ 5 ಗಂಟೆ ಸಾಕು..!
ಇದ್ಹೇಗೆ ಸಾಧ್ಯ ? 5 ಗಂಟೆಯ ಅವಧಿಯಲ್ಲಿ ಬೆಂಗಳೂರಿನಿಂದ ಮಂಗಳೂರು ಬಂದು ತಲುಪೋಕೆ ಪುಷ್ಪಕ ವಿಮಾನವೇ ಬೇಕು ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಭಾರತೀಯ ರೈಲ್ವೆ ಇಲಾಖೆಯು ಇದನ್ನು ಸಾಧ್ಯ ಮಾಡುತ್ತಿದೆ. ಏಕೆಂದರೆ ಬಹುನಿರೀಕ್ಷಿತ ವಂದೇ ಭಾರತ್ ರೈಲು ಬೆಂಗಳೂರು ಮತ್ತು ಮಂಗಳೂರು ಮಾರ್ಗವಾಗಿ ಶೀಘ್ರದಲ್ಲಿಯೇ ತನ್ನ ಕಾರ್ಯಾಚರಣೆ ಆರಂಭಿಸಲಿದೆ. ಕರಾವಳಿಯ ಪುಣ್ಯ ಕ್ಷೇತ್ರಗಳಿಗೆ 2026ರಲ್ಲಿ ಪ್ರವಾಸ ಕೈಗೊಳ್ಳಬೇಕು ಎಂದು ಪ್ಲಾನ್ ಮಾಡಿದವರಿಗೆ ನಿಜಕ್ಕೂ ಇದೊಂದು ಸಂತಸದ ವಿಚಾರವಾಗಿದೆ.
ಸದ್ಯ ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವೆ 55 ಕಿಲೋ ಮೀಟರ್ ಘಾಟ್ ವಿಭಾಗದಲ್ಲಿ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಳ್ಳುವುದು ಮಾತ್ರ ಬಾಕಿ ಇದೆ. ಇದೊಂದು ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆಯೇ ವಂದೇ ಭಾರತ್ ರೈಲು ಕರಾವಳಿ ಪ್ರದೇಶಕ್ಕೆ ಎಂಟ್ರಿ ಕೊಡಲಿದೆ. ವಿದ್ಯುದೀಕರಣ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ರೈಲು ಸಂಚಾರ ಆರಂಭಿಸಲಿದ್ದೇವೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ವಿದ್ಯುಚ್ಛಶಕ್ತಿಯನ್ನು ಇಂಧನವನ್ನಾಗಿ ಬಳಸಿಕೊಳ್ಳುತ್ತದೆ. ಹೀಗಾಗಿ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ. ಅಲ್ಲದೇ ಸಾಮಾನ್ಯ ರೈಲಿಗಿಂತ ವೇಗ ಕೂಡ ಹೆಚ್ಚಿರುತ್ತದೆ. ಸ್ವಚ್ಛವಾದ ಗಾಳಿಯೊಂದಿಗೆ ಪಶ್ಚಿಮ ಘಟ್ಟದ ಸೌಂದರ್ಯವನ್ನು ಸವಿಯುವ ಮೂಲಕ ಕರಾವಳಿಗೆ ಎಂಟ್ರಿ ಕೊಡಬಹುದಾಗಿದೆ/



