Mangaluru minor girl Gang R*ape and murder case: ಬೆಂಗಳೂರು: ಮಂಗಳೂರಿನಲ್ಲಿ 2021ರಲ್ಲಿ ನಡೆದಿದ್ದ ಎಂಟು ವರ್ಷದ ಬಾಲಕಿಯ ಭೀಕರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ‘ಅಪರೂಪದಲ್ಲಿ ಅಪರೂಪದ ಪ್ರಕರಣ’ ಎಂದು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಮೂವರು ಅಪರಾಧಿಗಳಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿದೆ.
2021ರ ನವೆಂಬರ್ 21ರಂದು ಮಂಗಳೂರಿನ ಟೈಲ್ಸ್ ಕಾರ್ಖಾನೆಯೊಂದರ ಆವರಣದಲ್ಲಿ ಈ ಘೋರ ಕೃತ್ಯ ನಡೆದಿತ್ತು. ಸಂತ್ರಸ್ತ ಬಾಲಕಿಯ ಪೋಷಕರು ಮತ್ತು ಆರೋಪಿಗಳು ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಪ್ರದೇಶ ಮೂಲದ ಜೈಬನ್ ಆದಿವಾಸಿ, ಮುಖೇಶ್ ಸಿಂಗ್ ಮತ್ತು ಜಾರ್ಖಂಡ್ ಮೂಲದ ಮನೀಶ್ ತಿರ್ಕಿ ಎಂಬುವವರು ಬಾಲಕಿಗೆ ಸಿಹಿತಿಂಡಿಯ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಪೈಶಾಚಿಕ ಕೃತ್ಯ ಎಸಗಿದ್ದರು.
ಸಾಕ್ಷ್ಯಾಧಾರಗಳ ಬಲ: ಡಿಎನ್‌ಎ ವರದಿ, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಬಾಲಕಿಯ ಹಲ್ಲಿನಲ್ಲಿ ಸಿಕ್ಕ ಸಿಹಿತಿಂಡಿಯ ಕಣಗಳು ಆರೋಪಿಗಳ ಕೃತ್ಯವನ್ನು ಸಾಬೀತುಪಡಿಸಿವೆ ಎಂದು ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ವೆಂಕಟೇಶ್ ನಾಯಕ್ ಟಿ. ಅವರಿದ್ದ ಪೀಠ ತಿಳಿಸಿದೆ.
ಕ್ರೌರ್ಯದ ಪರಮಾವಧಿ: ಅತ್ಯಾಚಾರದ ವೇಳೆ ಬಾಲಕಿ ನೋವಿನಿಂದ ಕಿರುಚಾಡಿದಾಗ, ಅವಳನ್ನು ಉಸಿರುಗಟ್ಟಿಸಿ ಕೊಂದು ಶವವನ್ನು ಚರಂಡಿಯಲ್ಲಿ ಎಸೆಯಲಾಗಿತ್ತು. ಇದು ಪೂರ್ವಯೋಜಿತ ಮತ್ತು ಕ್ರೂರ ಕೃತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸಮಾಜಕ್ಕೆ ಸಂದೇಶ: “ಇಂತಹ ಪ್ರಕರಣಗಳಲ್ಲಿ ಕಡಿಮೆ ಶಿಕ್ಷೆ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಕಾಮುಕ ಮನಸ್ಥಿತಿಯನ್ನು ಹತ್ತಿಕ್ಕಲು ಇಂತಹ ಕೃತ್ಯಗಳನ್ನು ಕಠಿಣವಾಗಿ ದಂಡಿಸುವುದು ಅನಿವಾರ್ಯ,” ಎಂದು ಪೀಠ ಹೇಳಿದೆ.
ಬೆಂಗಳೂರು-ಮಂಗಳೂರು ನಡುವೆ ಶೀಘ್ರದಲ್ಲೇ ವಂದೇ ಭಾರತ್ ರೈಲು; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ
ಶಿಕ್ಷೆಯ ವಿವರ:
ಮಂಗಳೂರಿನ ವಿಶೇಷ ಪೋಕ್ಸೋ (POCSO) ನ್ಯಾಯಾಲಯವು 2024ರ ನವೆಂಬರ್‌ನಲ್ಲಿ ನೀಡಿದ್ದ ಮರಣದಂಡನೆ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಆ ಮನವಿಯನ್ನು ತಿರಸ್ಕರಿಸಿ, ಕೆಳಹಂತದ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನೇ ಖಾಯಂಗೊಳಿಸಿದೆ. ಇದೇ ಪ್ರಕರಣದ ನಾಲ್ಕನೇ ಆರೋಪಿ ಮುನಿಮ್ ಸಿಂಗ್ ಜಾಮೀನು ಪಡೆದು ತಲೆಮರೆಸಿಕೊಂಡಿದ್ದು, ಆತನ ವಿರುದ್ಧದ ವಿಚಾರಣೆ ಬಾಕಿ ಉಳಿದಿದೆ.


