ವಿಟ್ಲ-ಮಂಗಳೂರು ಬಸ್ ಕೊರತೆ.. ಸರ್ಕಾರಿ ಎಕ್ಸ್ಪ್ರೆಸ್ ಸಾರಿಗೆಗಾಗಿ ಹೆಚ್ಚಿದ ಆಗ್ರಹ!
ವಿಟ್ಲ ಮತ್ತು ಮಂಗಳೂರು ನಗರಗಳ ನಡುವೆ ದಿನನಿತ್ಯ ಪ್ರಯಾಣಿಸುವ ನೂರಾರು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೆ ತೀವ್ರ ತೊಂದರೆಯಾಗುತ್ತಿದ್ದು, ತಕ್ಷಣವೇ ಸರ್ಕಾರಿ ವೇಗದೂತ ಬಸ್ ಸೇವೆಗಳನ್ನು ಆರಂಭಿಸಬೇಕೆಂಬ ಬೇಡಿಕೆ ವ್ಯಾಪಕವಾಗಿ ಕೇಳಿಬರುತ್ತಿದೆ.

ವಿಟ್ಲ ಮತ್ತು ಮಂಗಳೂರು ನಗರಗಳ ನಡುವೆ ದಿನನಿತ್ಯ ಪ್ರಯಾಣಿಸುವ ನೂರಾರು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೆ ತೀವ್ರ ತೊಂದರೆಯಾಗುತ್ತಿದ್ದು, ತಕ್ಷಣವೇ ಸರ್ಕಾರಿ ವೇಗದೂತ ಬಸ್ ಸೇವೆಗಳನ್ನು ಆರಂಭಿಸಬೇಕೆಂಬ ಬೇಡಿಕೆ ವ್ಯಾಪಕವಾಗಿ ಕೇಳಿಬರುತ್ತಿದೆ. ಪ್ರಸ್ತುತ ಸಂಚರಿಸುತ್ತಿರುವ ಸಾಮಾನ್ಯ ಬಸ್‌ಗಳು ತೀರಾ ಹಳೆಯದಾಗಿದ್ದು, ವಿಟ್ಲದಿಂದ ಮಂಗಳೂರು ತಲುಪಲು ಕನಿಷ್ಠ ಒಂದೂವರೆಯಿಂದ ಎರಡು ಗಂಟೆಗಳ ದೀರ್ಘ ಸಮಯ ತೆಗೆದುಕೊಳ್ಳುತ್ತಿವೆ. ಇದರಿಂದಾಗಿ ಶಾಲಾ-ಕಾಲೇಜು ಹಾಗೂ ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ನಿತ್ಯ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ ಮತ್ತು ಸಂಜೆಯ ಗರಿಷ್ಠ ಅವಧಿಯಲ್ಲಿ ಬಸ್‌ಗಳ ಕೊರತೆಯಿದ್ದು, ಸಂಚರಿಸುವ ಅಲ್ಪಸ್ವಲ್ಪ ಬಸ್‌ಗಳೂ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುತ್ತವೆ. ಇದರೊಂದಿಗೆ, ಈ ಮಾರ್ಗದ ಬಸ್ ಚಾಲಕರು ಮತ್ತು ನಿರ್ವಾಹಕರು ನಿಗದಿತ ನಿಲುಗಡೆಗಳಲ್ಲಿ ಬಸ್ ನಿಲ್ಲಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಉಚಿತ ಪಾಸ್, ಆಧಾರ್ ಕಾರ್ಡ್ ಅಥವಾ ಹಿರಿಯ ನಾಗರಿಕರ ಕಾರ್ಡ್ ಬಳಸಿ ಪ್ರಯಾಣಿಸುವವರನ್ನು ಸಾರಿಗೆ ಸಿಬ್ಬಂದಿ ಕೀಳಾಗಿ ಕಾಣುತ್ತಿದ್ದು, ಚಿಲ್ಲರೆ ಹಣದ ವಿಚಾರವಾಗಿ ಕೆಟ್ಟ ಪದಗಳನ್ನು ಬಳಸಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀಟುಗಳು ಮತ್ತು ಕಿಟಕಿಗಳು ಮುರಿದುಹೋಗಿರುವ ಹಳೆಯ ಬಸ್‌ಗಳು ಪ್ರಯಾಣದ ಮಧ್ಯದಲ್ಲೇ ಕೆಟ್ಟು ನಿಲ್ಲುತ್ತಿರುವುದರಿಂದ ಜನರು ಪರದಾಡುವಂತಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು..ಇಂದು ಮತ್ತು ನಾಳೆ ತೀವ್ರ ಮಳೆ ಸಾಧ್ಯತೆ!
ಪುತ್ತೂರು ಮಾರ್ಗದ ಮಾದರಿಯಲ್ಲೇ ವಿಟ್ಲದಿಂದ ಮಂಗಳೂರಿನ ಸ್ಟೇಟ್ ಬ್ಯಾಂಕ್‌ಗೆ ಬೆಳಗ್ಗೆ ಮತ್ತು ಸಂಜೆ ತಲಾ ಎರಡು ನೇರ ವೇಗದೂತ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಬೇಕು ಹಾಗೂ ಈಗಿರುವ ಬಸ್‌ಗಳು ಸಮಯ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರುವ ಚಾಲಕ ಹಾಗೂ ನಿರ್ವಾಹಕರಿಗೆ ಶಿಸ್ತು ಮೂಡಿಸಲು ಕೆಎಸ್‌ಆರ್‌ಟಿಸಿ ಮೇಲಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.



