ಕರಾವಳಿಯ ಹೈನುಗಾರರ ಪಾಲಿಗೆ ‘ನಂದಿನಿ’ ಕಾಮಧೇನು; ದ.ಕ. ಹಾಲು ಒಕ್ಕೂಟಕ್ಕೆ ₹10.61 ಕೋಟಿ ಲಾಭದ ಸುರಿಮಳೆ!
2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಡಿಕೆಎಂಯುಎಲ್ ಭರ್ಜರಿ ಪ್ರಗತಿ ಸಾಧಿಸಿದ್ದು, ಒಟ್ಟೂ 10.61 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಸದ್ಯ ಲಾಭದ ಶಕೆಯಲ್ಲಿದೆ. 2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಡಿಕೆಎಂಯುಎಲ್ ಭರ್ಜರಿ ಪ್ರಗತಿ ಸಾಧಿಸಿದ್ದು, ಒಟ್ಟೂ 10.61 ಕೋಟಿ ರೂಪಾಯಿಗಳ ನಿವ್ವಳ ಲಾಭ ಗಳಿಸಿದೆ. ಒಂದು ವರ್ಷಗಳ ಅವಧಿಯಲ್ಲಿ ಬರೋಬ್ಬರಿ 1270 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಹಿವಾಟು ನಡೆಸುವ ಮೂಲಕ ಈ ಭರ್ಜರಿ ಲಾಭವನ್ನು ದಕ್ಷಿಣ ಕನ್ನಡ ಮಿಲ್ಕ್ ಯೂನಿಯನ್ ಸಾಧಿಸಿದೆ. ಈ ಮೂಲಕ ಈ ಸಾಲಿನಲ್ಲಿ 8.18 ಪ್ರತಿಶತದಷ್ಟು ಅಭಿವೃದ್ಧಿ ಸಾಧಿಸಿದ್ದೇವೆ ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ಪ್ರತಿದಿನ 3 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ವಹಿವಾಟನ್ನು ನಡೆಸುತ್ತಿದೆ. ಕೇವಲ ಲಾಭ ಗಳಿಕೆಯಷ್ಟೇ ಅಲ್ಲದೆ, ಲಾಭದ ಪಾಲನ್ನು ರೈತರಿಗೆ ತಲುಪಿಸುವಲ್ಲಿ ಒಕ್ಕೂಟ ಯಶಸ್ವಿಯಾಗಿದೆ. ತನ್ನ ಸದಸ್ಯ ಹೈನುಗಾರರಿಗೆ ಸುಮಾರು ₹23.99 ಕೋಟಿ ಪ್ರೋತ್ಸಾಹಧನವನ್ನು ವಿತರಿಸಲಾಗಿದ್ದು, ಇದು ಜಿಲ್ಲೆಯ ಹೈನುಗಾರಿಕೆಗೆ ದೊಡ್ಡ ಉತ್ತೇಜನ ನೀಡಿದೆ.
ಇದನ್ನೂ ಓದಿ : ಸರ್ಕಾರದ ಮನವಿಗೂ ಬಗ್ಗದ ಇಂಡಿಗೋ: ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನ ಸಂಚಾರ ಸ್ಥಗಿತ
ಕಳೆದ ವರ್ಷ ಪ್ರತಿದಿನ ಹಾಲು ಶೇಖರಣೆಯ ಪ್ರಮಾಣವು ಸರಾಸರಿ 4.07 ಲಕ್ಷ ಲೀಟರ್ ಆಗಿದ್ದು ಇದು ಕೂಡ 2024-25ನೇ ಸಾಲಿಗೆ ಹೋಲಿಕೆ ಮಾಡಿದರೆ 19 ಪ್ರತಿಶತ ಪ್ರಗತಿಯಾಗಿದೆ. ಸದ್ಯ 51,693 ಸಕ್ರಿಯ ಸದಸ್ಯರನ್ನು ಹೊಂದಿರುವ ಈ ಒಕ್ಕೂಟವು ಹೈನುಗಾರರು ಸರಬರಾಜು ಮಾಡಿದ ಹಾಲಿಗೆ ಅನುಗುಣವಾಗಿ ಲೀಟರ್ ಗೆ 1.50 ರೂ. ಪ್ರೋತ್ಸಾಹಧನ ರೂಪದಲ್ಲಿ ನೀಡುತ್ತಿದೆ.
ಇನ್ನು ಹಾಲಿನ ಉತ್ಪಾದನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಹಾಲಿನ ಸಂಗ್ರಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಅತ್ಯಾಧುನಿಕ ಸೌಲಭ್ಯವುಳ್ಳ ‘ಮೆಗಾ ಡೇರಿ’ ಸ್ಥಾಪಿಸಲು ಒಕ್ಕೂಟ ಸಜ್ಜಾಗಿದೆ.ಮಾರುಕಟ್ಟೆಯಲ್ಲಿ ತನ್ನದೇ ಆದ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಲು ಸ್ವಂತ ಐಸ್ಕ್ರೀಂ ತಯಾರಿಕಾ ಘಟಕವನ್ನು ಆರಂಭಿಸುವ ಯೋಜನೆಯೂ ಪ್ರಗತಿಯಲ್ಲಿದೆ.ನೀರು ಬಾಟ್ಲಿಂಗ್ ಘಟಕಗಳ ಸ್ಥಾಪನೆಗೆ ಆಡಳಿತ ಮಂಡಳಿ ಯೋಜನೆ ಅನುಷ್ಠಾನಕ್ಕೂ ತಯಾರಿ ನಡೆದಿದೆ ಎಂದು ರವಿರಾಜ್ ಹೆಗ್ಡೆ ಮಾಹಿತಿ ನೀಡಿದ್ದಾರೆ.



