BMTC Bus Fire Tragedy : ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಪ್ರಕರಣ : ತನಿಖೆಯಲ್ಲಿ ಬಯಲಾಯ್ತು ಅಸಲಿ ಕಾರಣ

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿಗರ ಜೀವನಾಡಿ ಬಿಎಂಟಿಸಿ ಬಸ್ ಗಳು ಇತ್ತೀಚಿಗೆ ಜನರ ನಿದ್ದೆಗೆಡಿಸಿದ್ದವು. ಒಂದಾದ ಮೇಲೊಂದರಂತೆ ಬಸ್ ಗಳಲ್ಲಿ ಬೆಂಕಿ (BMTC Bus Fire Tragedy) ಕಾಣಿಸಿಕೊಂಡಿದ್ದರಿಂದ ಜನರು ಬಸ್ ಹತ್ತೋದಿಕ್ಕೂ ಯೋಚಿಸುವ ಸ್ಥಿತಿ ಎದುರಾಗಿತ್ತು. ಇದರಿಂದ ತಲೆಕೆಡಿಸಿಕೊಂಡ ಬಿಎಂಟಿಸಿ ಅಗ್ನಿ ಅನಾಹುತ ಪ್ರಕರಣಗಳ ತನಿಖೆಗೆ ಆದೇಶಿಸಿತ್ತು. ಈಗ ಪ್ರಕರಣದ ತನಿಖಾ ವರದಿ ಬಿಎಂಟಿಸಿ ಕೈಸೇರಿದ್ದು, ಅನಾಹುತಕ್ಕೆ ಕಾರಣ ಬಯಲಾಗಿದೆ.

ಇತ್ತೀಚಿಗೆ ನಗರದ ಹಲವೆಡೆ ಚಲಿಸುತ್ತಿದ್ದ ಬಸ್ ಗಳಲ್ಲಿ ಅಗ್ನಿ ಅನಾಹುತಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ತನಿಖೆಗೆ ಆದೇಶಿಸಿತ್ತು. ಅಶೋಕ್ ಲೈಲೆಂಡ್ ಕಂಪನಿ ತಜ್ಞರು, ಬಿಎಂಟಿಸಿ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ತನಿಖೆ ನಡೆದಿದ್ದು, ಬಸ್ ಗಳಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ತಿರೋದಿಕ್ಕೆ ವಿನ್ಯಾಸದೋಷವೇ ಕಾರಣ ಅನ್ನೋದು ಬೆಳಕಿಗೆ ಬಂದಿದೆ.

ಅಶೋಕ್ ಲೈಲೆಂಡ್ ಕಂಪನಿಯ ಸುಮಾರು 189 ಬಸ್ ಗಳು ಬಿಎಂಟಿಸಿಯಲ್ಲಿವೆ. 9 ಮೀಟರ್ ಉದ್ದದ ಈ ಬಸ್ ನಲ್ಲಿ ಬೆಂಕಿ ಕಾಣಿಸಿಕೊಳ್ಳೋದಿಕ್ಕೆ ಬಸ್ ನ ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಅಕ್ಕಪಕ್ಕ ಇರೋದೇ ಕಾರಣ ಎನ್ನಲಾಗಿದೆ. ಬಸ್ ಗಳು ಸಂಚರಿಸುವಾಗ ಅಥವಾ ಬಸ್ ಸ್ಟಾರ್ಟ್ ಮಾಡುವಾಗ ಸ್ಟಾರ್ಟರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆದ ತಕ್ಷಣವೇ ಪಕ್ಕ ದಲ್ಲಿರೋ ಡಿಸೇಲ್ ಪೈಪ್ ಗೆ ಕಿಡಿ ತಗುಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಸಾಮನ್ಯವಾಗಿ ದೊಡ್ಡ ಬಸ್ ಗಳಲ್ಲಿ ಪ್ರತ್ಯೇಕವಾಗಿ ಕೇಬಲ್ ಗಳು ಇರುತ್ತವೆ. ಆದರೆ ಇದು ಸಣ್ಣ ಬಸ್ ಆಗಿರೋದರಿಂದ ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಅಕ್ಕಪಕ್ಕ ಇಡಲಾಗಿದೆ.ಈ ವಿನ್ಯಾಸದ ದೋಷವೇ ಘಟನೆಗೆ ಕಾರಣ ಅನ್ನೋದು ತಜ್ಞರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇನ್ನು ಅಗ್ನಿ ಅನಾಹುತಕ್ಕೆ ಕಾರಣ ಏನು ಅನ್ನೋದರ ಬಗ್ಗೆ ತಜ್ಞರು ಕೊಟ್ಟ ವರದಿಯಿಂದ ಎಚ್ಚೆತ್ತ ಬಿಎಂಟಿಸಿ ತಾಂತ್ರಿಕ ವಿಭಾಗ ಇದೀಗ ಬಿಎಂಟಿಸಿಯಲ್ಲಿರೋ ಈ ಬಸ್ ಗಳ ವಿನ್ಯಾಸ ಬದಲಾವಣೆ ಮಾಡೋಕೆ ಮುಂದಾಗಿದೆ. ಬಿಎಂಟಿಸಿಯಲ್ಲಿ ಪ್ರಸ್ತುತ ಇರುವ 189 ಮಿನಿ ಬಸ್ ಗಳಲ್ಲೂ ವಿನ್ಯಾಸ ಬದಲಾವಣೆ ಮಾಡೋಕೆ ಬಿಎಂಟಿಸಿ ಸಿದ್ಧತೆ ನಡೆಸಿದೆ. ಈಗಾಗಲೇ 40 ಬಸ್ ಗಳ ವಿನ್ಯಾಸ ಬದಲಾವಣೆ ಮಾಡಿರುವ ಬಿಎಂಟಿಸಿ ಆ ಬಸ್ ಗಳನ್ನು ರಸ್ತೆಗೆ ಇಳಿಸಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಇನ್ನೂ ಲಸಿಕೆ ಪಡೆದಿಲ್ಲ ಲಕ್ಷಾಂತರ ಜನರು: ಲಸಿಕೆ ಪಡೆಯದವರ ಪತ್ತೆಗೆ ಪೊಲೀಸರ ಮೊರೆ ಹೋದ ಬಿಬಿಎಂಪಿ

ಇದನ್ನೂ ಓದಿ : ACB RAID BBMP : ಬಿಬಿಎಂಪಿ ಕೇಂದ್ರ ಕಚೇರಿ, ಸೇರಿ 27 ಕಚೇರಿ ಮೇಲೆ ಎಸಿಬಿ ದಾಳಿ

Fire tragedy on BMTC bus, the investigation found that the design of the bus was the cause of the accident

Comments are closed.