BBMP Renovation : ಬಿಬಿಎಂಪಿ ಚುನಾವಣೆಗೆ ಭರದ ಸಿದ್ಧತೆ: ಕಟ್ಟಡ ನವೀಕರಣಕ್ಕೆ ಪ್ಲ್ಯಾನ್ ಫೈನಲ್

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಜೊತೆಗೆ ಚುನಾವಣೆ ಬಿಸಿಯೂ ಏರತೊಡಗಿದ್ದು, ಬಿಬಿಎಂಪಿ ಗದ್ದುಗೆ ಹಿಡಿಯಲು ಬಿಜೆಪಿ,ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸರ್ಕಸ್ ನಡೆಸಿದ್ದು, ಶತಾಯ ಗತಾಯ ಬಿಜೆಪಿ ಮತ್ತೊಮ್ಮೆ ಪಾಲಿಕೆ ಗದ್ದುಗೆ ಹಿಡಿಯಲೇಬೇಕೆಂಬ ಪ್ರಯತ್ನ ಆರಂಭಿಸಿದೆ. ಈ ಮಧ್ಯೆ ಕಳೆದ ಒಂದು ವರ್ಷದಿಂದ ಕಾರ್ಪೋರೇಟರ್ ಗಳು ಹಾಗೂ ಮೇಯರ್ ಇಲ್ಲದೇ ಅಧಿಕಾರಿಗಳ ಆಡಳಿತದಲ್ಲಿರುವ ಬಿಬಿಎಂಪಿಯಲ್ಲೂ ಚುನಾವಣೆಗೆ ಭರದ ಸಿದ್ದತೆ ನಡೆದಿದೆ. ಈಗಾಗಲೇ ಪಾಲಿಕೆಯ ವಾರ್ಡ್ ಗಳ ಸಂಖ್ಯೆಯನ್ನು 198 ರಿಂದ 243 ಕ್ಕೆ ಹೆಚ್ಚಿಸಲಾಗಿದ್ದು ಈ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಬದಲಾವಣೆ (BBMP Renovation) ಗೆ ಬಿಬಿಎಂಪಿ ಆಯುಕ್ತರು ಯೋಜನೆ ಸಿದ್ಧ ಪಡಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಕಟ್ಟಡವನ್ನು ನವೀಕರಿಸುವ ಸಲುವಾಗಿ ಪ್ರಸ್ತಾವನೆ ನೀಡುವಂತೆ ಪಾಲಿಕೆಯ MPED ವಿಭಾಗಕ್ಕೆ ಸೂಚನೆ ನೀಡಿದ್ದಾರೆ. ಸದ್ಯ ಬಿಬಿಎಂಪಿ ಕೌನ್ಸಿಲ್ ಕಟ್ಟಡ 300 ಆಸನ ವ್ಯವಸ್ಥೆ ಮಾತ್ರ ಹೊಂದಿದೆ. ಆದರೆ ಈಗ ಸದಸ್ಯರ ಸಂಖ್ಯೆ 198 ರಿಂದ 243 ಕ್ಕೇ ಏರಿಕೆಯಾಗೋದರಿಂದ ಆಸನ ವ್ಯವಸ್ಥೆಯನ್ನು ಏರಿಸುವ ಅಗತ್ಯವಿದೆ.

ಈ ನಿಟ್ಟಿನಲ್ಲಿ MPED ವಿಭಾಗಕ್ಕೆ ಈ ಬಗ್ಗೆ ನಕಾಶೆ ಸಿದ್ಧ ಪಡಿಸಿಕೊಡುವಂತೆ ಆಯುಕ್ತರು ಸೂಚನೆ ನೀಡಿದ್ದು, 243 ಕಾರ್ಪೊರೇಟರ್ಸ್, 24 ನಾಮನಿರ್ದೇಶಿತ ಕೌನ್ಸಿಲರ್ಸ್, 28 ಶಾಸಕರು, 4 ಸಂಸದರು ಹಾಗೂ 75ಕ್ಕೂ ಅಧಿಕ ಬಿಬಿಎಂಪಿ ಅಧಿಕಾರಿಗಳಿಗೆ ಆಸನ ವ್ಯವಸ್ಥೆಯ ಕಲ್ಪಿಸುವಂತೆ ಕಟ್ಟಡವನ್ನು ರಿನೋವೇಟ್ ಮಾಡಲು ಉದ್ದೇಶಿಸಲಾಗಿದೆ. ಈಗಿರುವುದನ್ನು ಹೊರತು ಪಡಿಸಿ ಇನ್ನೂ ಸುಮಾರು 80 ಆಸನ ಹೆಚ್ಚುವರಿಯಾಗಿ ನಿರ್ಮಿಸಿಸುವ ಅಗತ್ಯವಿದ್ದು, ಚುನಾವಣೆಗೂ ಮುನ್ನ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲು ಬಿಬಿಎಂಪಿ ಆಯುಕ್ತರು ಪ್ಲ್ಯಾನ್ ಮಾಡಿದ್ದಾರೆ.

ಎಲ್ಲ ಅಂದುಕೊಂಡಂತೆ ಆದರೇ ಏಪ್ರಿಲ್ ಹೊತ್ತಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ರಾಜಕೀಯವಾಗಿ ಬಿಬಿಎಂಪಿ ಚುನಾವಣೆ ಸಿದ್ಧತೆಗಳು ಆರಂಭಗೊಂಡಿದೆ. ಹೀಗಾಗಿ ಚುನಾವಣೆ ಘೋಷಣೆಗೂ ಮುನ್ನವೇ ಮೌನ ಗಡಿ ಪರ ಕಟ್ಟಡವನ್ನು ವಿಶಾಲಗೊಳಿಸಲು ಆಯುಕ್ತರು ಸಿದ್ಧತೆ ಆರಂಭಿಸಿದ್ದಾರೆ. ಈ ಮಧ್ಯೆ ಸರ್ಕಾರ ಅನಗತ್ಯವಾಗಿ ಚುನಾವಣೆಯನ್ನು ಮುಂದೂಡುತ್ತಿದೆ ಎಂದು ಆರೋಪಿಸಿ ಮಾಜಿ ಕಾರ್ಪೋರೇಟರ್ ಶಿವರಾಜ್ ಸುಪ್ರೀಂ‌ಕೋರ್ಟ್ ಮೊರೆ ಹೋಗಿದ್ದಾರೆ.

ಸರ್ಕಾರಕ್ಕೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡುವಂತೆ ಅರ್ಜಿ ಹಾಕಿದ್ದು, ತುರ್ತು ವಿಚಾರಣೆಗೂ ಮನವಿ ಮಾಡಿದ್ದಾರೆ. ಇನ್ನೂ ಚುನಾವಣಾ ಆಯೋಗ ಅಧಿಕೃತವಾಗಿ ಚುನಾವಣೆ ಘೋಷಿಸಿಲ್ಲ.

ಇದನ್ನೂ ಓದಿ :  ಸುಪ್ರೀಂ ಅಂಗಳದಲ್ಲಿ ಬಿಬಿಎಂಪಿ ಚುನಾವಣೆ ಭವಿಷ್ಯ: ಸರ್ಕಾರದ ವಿರುದ್ಧ ಮಾಜಿ ಕಾರ್ಪೋರೇಟರ್ ಶಿವರಾಜ್ ದೂರು

ಇದನ್ನೂ ಓದಿ : ಬೆಂಗಳೂರಿನಲ್ಲಿ ಇನ್ಮೇಲೆ ಈ ರೀತಿಯ ಹೆಲ್ಮೆಟ್​ ಧರಿಸಿದರೆ ಬೀಳುತ್ತೆ ದಂಡ

( Preparation for BBMP elections, Plan Final for building renovation )

Comments are closed.