10 ದಿನದಲ್ಲಿ 500 ಮಕ್ಕಳಿಗೆ ಕೊರೊನಾ : ಬೆಂಗಳೂರಲ್ಲಿ ಶುರುವಾಯ್ತಾ 3ನೇ ಅಲೆ

ಬೆಂಗಳೂರು : ಕರ್ನಾಟಕದಲ್ಲೀಗ ಕೊರೊನಾ ಮೂರನೇ ಅಲೆಯ ಆತಂಕ ಶುರುವಾಗಿದೆ. ಈ ನಡುವಲ್ಲೇ ಬೆಂಗಳೂರಲ್ಲಿ ಕಳೆದ 10 ದಿನದಲ್ಲಿ 500 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಮೂರನೇ ಅಲೆಯ ವೇಳೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆ ಅನ್ನುವ ಮಾತು ಕೇಳಿಬಂದಿತ್ತು. ಕಳೆದ ಹತ್ತು ದಿನಗಳ ಅಂಕಿ ಅಂಶವನ್ನು ಲೆಕ್ಕಾ ಹಾಕಿದ್ರೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿರುವುದು ಬಯಲಾಗಿದೆ. ಕಳೆದ ಹತ್ತು ದಿನಗಳಲ್ಲಿ 0-9 ವಯಸ್ಸಿನ 194 ಮಕ್ಕಳು ಹಾಗೂ 10-19 ವಯಸ್ಸಿನ 305 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಇದುವರೆಗೆ ಒಟ್ಟು 15,919 ಮಂದಿ ಕೊರೊನಾ ವೈರಸ್‌ ಸೋಂಕಿಗೆ ಬಲಿಯಾಗಿದ್ದಾರೆ. ಇದರಲ್ಲಿ ಮಕ್ಕಳ ಸಾವಿನ ಲೆಕ್ಕ ಹಾಕಿದ್ರೆ 9 ವರ್ಷದೊಳಗಿನ 19 ಮಕ್ಕಳು, 10 ರಿಂದ 19 ವರ್ಷದ ಒಳಗಿನ 26 ಮಕ್ಕಳು, ಅಲ್ಲದೇ 20 ರಿಂದ 30 ವರ್ಷದ 279 ಮಂದಿ ಸಾವನ್ನಪ್ಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆಯ ಇನ್ನಷ್ಟು ಹೆಚ್ಚಳವಾಗುವ ಆತಂಕ ವ್ಯಕ್ತವಾಗಿದೆ.

ರಾಜ್ಯದಲ್ಲಿ ಈಗಾಗಲೇ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯನ್ನು ಕಾಣುತ್ತಿದ್ದು, ಸಿಲಿಕಾನ್‌ ಸಿಟಿಯಲ್ಲಿಯೂ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಇನ್ನೊಂದೆಡೆ ಅಗಸ್ಟ್‌ ಕೊನೆಯ ವಾರದಲ್ಲಿ ರಾಜ್ಯದಾದ್ಯಂತ ಶಾಲೆಗಳನ್ನು ಆರಂಭಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ನಡುವಲ್ಲೇ ಕೊರೊನಾ ವೈರಸ್‌ ಸೋಂಕು ಮಕ್ಕಳಿಗೆ ವ್ಯಾಪಿಸಿದ್ದು, ಹಲವು ಮಕ್ಕಳನ್ನೂ ಬಲಿ ಪಡೆದಿದೆ. ಇದು ಪೋಷಕರು ಹಾಗೂ ಆರೋಗ್ಯಾಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ.

( Corona for 500 children in 10 days: 3rd wave fear in Bangalore )

Comments are closed.