ಬೆಂಗಳೂರು ಮಂದಿಗೆ ಬೇಸರದ ಸುದ್ದಿ .. ಇನ್ನರ್‌ರಿಂಗ್ ಮೆಟ್ರೋ ಯೋಜನೆಗೆ ಶೀಘ್ರ ತಿಲಾಂಜಲಿ..!
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಎಂಬಂತೆ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ.
ಅದರಲ್ಲೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಎಂಬಂತೆ ನಿರ್ಮಾಣವಾಗಬೇಕಿದ್ದ ನೂತನ ಮೆಟ್ರೋ ಮಾರ್ಗವೊಂದನ್ನು ಕೈ ಬಿಡಲು ಬಿಎಂಆರ್‌ಸಿಎಲ್ ನಿರ್ಧರಿಸಿದ್ದು ರಾಜಧಾನಿ ಮಂದಿಗೆ ಬೇಸರ ಮೂಡಿಸಿದೆ.
ಬೆಂಗಳೂರಿನ ಎಲ್ಲಾ ಮೆಟ್ರೋ ಮಾರ್ಗಗಳು ಮತ್ತು ಏರಿಯಾಗಳನ್ನು ಸಂಪರ್ಕಿಸುವ ಏಕೈಕ ಮೆಟ್ರೋ ಮಾರ್ಗವಾಗಬೇಕಿದ್ದ ಇನ್ನರ್‌ರಿಂಗ್ ಮೆಟ್ರೋ (inner ring road metro bangalore) ಯೋಜನೆಯನ್ನು ಬಿಎಂಆರ್‌ಸಿಎಲ್ ಶಾಶ್ವತವಾಗಿ ಕೈ ಬಿಡಲಿದೆ ಎನ್ನಲಾಗಿದೆ.
ಈ ಇನ್ನರ್ ರಿಂಗ್ ಮೆಟ್ರೋ ಮಾರ್ಗವು 34 ಕಿಲೋಮೀಟರ್ನಲ್ಲಿ 24 ಮೆಟ್ರೋ ಸ್ಟೇಷನ್‌ಗಳನ್ನು ಹೊಂದಿರಬೇಕಿದ್ದು. ಮಹಾಲಕ್ಷ್ಮೀ ಲೇಔಟ್ನಿಂದ ಕುವೆಂಪು ರಸ್ತೆ ಮೆಟ್ರೋ ಸ್ಟೇಷನ್‌ವರೆಗೆ ಮೆಟ್ರೋ ಮಾರ್ಗ ನಿರ್ಮಿಸಲು ತಜ್ಞರ ವರದಿ ಕೂಡ ಸಿದ್ಧವಾಗಿತ್ತು.
ಈ ಯೋಜನೆಯೊಂದು ಜಾರಿಗೆ ಬಂದಿದ್ದರೆ ಟ್ರಾಫಿಕ್ ಸಮಸ್ಯೆಗಳಿಗೆ ಬಹುತೇಕ ಬ್ರೇಕ್ ಬೀಳುತ್ತಿತ್ತು. ಐಐಎಸ್ಸಿ ಪ್ರೊ. ಆಶಿಷ್ ವರ್ಮ ನೇತೃತ್ವದಲ್ಲಿ ತಯಾರಿಸಲಾದ ಇನ್ನರ್ ರಿಂಗ್ ಮೆಟ್ರೋವನ್ನು ಹಂತ- 3 ರಿಂದ ಸದ್ಯಕ್ಕೆ ಕೈ ಬಿಡಲಾಗಿದೆ.
ಇನ್ನು ಈ ಎಲ್ಲದರ ನಡುವೆ ರಾಜ್ಯ ಸರ್ಕಾರ ನಗರದೊಳಗೆ ಇನ್ನರ್ ರಿಂಗ್ ಮೆಟ್ರೋ ಮಾಡುವ ಬದಲಿಗೆ ಬೆಂಗಳೂರು ಹೊರವಲಯದಲ್ಲಿರುವ ತುಮಕೂರು, ದೇವನಹಳ್ಳಿ, ಹಾರೋಹಳ್ಳಿ, ಅತ್ತಿಬೆಲೆ, ಬಿಡದಿ, ತಾವರೆಕೆರೆ, ಹೊಸಕೋಟೆ ಮತ್ತು ಜಿಗಣಿಗೆ ಮೆಟ್ರೋ ಮಾರ್ಗಗಳ ಫಿಸಿಬಿಲಿಟಿ ಸ್ಟಡಿ ಮಾಡಲು ಸರ್ಕಾರ ನಿರ್ದೇಶನ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಕಬ್ಬು ಬೆಳೆಗಾರರ ದಿಕ್ಕು ತಪ್ಪಿಸೋ ಕ್ರಮ; ಸಿಎಂಗೆ ಸಚಿವ ಪ್ರಲ್ಲಾದ ಜೋಶಿ ಖಡಕ್ ಪತ್ರ
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡಬೇಕಿದ್ದ ಇನ್ನರ್ ರಿಂಗ್ ಮೆಟ್ರೋ ಯೋಜನೆ ಕೈ ಬಿಡಲು ಮುಂದಾಗಿರುವ ಬಿಎಂಆರ್‌ಸಿಎಲ್ ನಿರ್ಧಾರ ಸಿಟಿ ಮಂದಿಗೆ ಬೇಸರ ಮೂಡಿಸಿದೆ.
ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುತ್ತೆ ಎಂದು ಕನಸು ಕಂಡಿದ್ದೆವು. ಆದರೆ ಈ ಯೋಜನೆ ಕೈಬಿಟ್ಟಿದ್ದು ಖಂಡಿತ ಸರಿಯಿಲ್ಲ ಎಂದು ಪ್ರಯಾಣಿಕರು ಬೇಸರ ಹೊರಹಾಕಿದ್ದಾರೆ.



