Supreme Court : ವೆಬ್​ ಪೋರ್ಟಲ್​, ಯುಟ್ಯೂಬ್​ ಚಾನೆಲ್ ಗಳಲ್ಲಿ ಸುಳ್ಳು ಸುದ್ದಿ ಪ್ರಸಾರ : ಸುಪ್ರೀಂ ಕೋರ್ಟ್‌ ಕಳವಳ

ನವದೆಹಲಿ : ವೆಬ್​ ಪೋರ್ಟಲ್​ ಹಾಗೂ ಯುಟ್ಯೂಬ್​​ನಂತಹ ಆನ್​ಲೈನ್​ ಚಾನೆಲ್​ಗಳಲ್ಲಿ ಬಿತ್ತರವಾಗುವ ಸುದ್ದಿಗಳನ್ನು ನಿಯಂತ್ರಿಸಲು ಯಾವುದೇ ಪರಿಣಾಮಕಾರಿ ಕಾರ್ಯವಿಧಾನ ಇಲ್ಲದಿರುವುದರ ಬಗ್ಗೆ ಸುಪ್ರೀಂ ಕೋರ್ಟ್​ ಕಳವಳ ವ್ಯಕ್ತಪಡಿಸಿದೆ. ಕಳೆದ ವರ್ಷ ದೇಶದಲ್ಲಿ ಕೊರೊನಾ ಸೋಂಕು ಪಸರಿಸಲು ತಬ್ಲಿಘಿ ಜಮಾತ್​ ಕಾರಣ ಎಂದು ವರದಿ ಬಿತ್ತರಿಸಿದ್ದ ಮಾಧ್ಯಮಗಳ ವಿರುದ್ಧ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್​ ಇಂದು ವಿಚಾರಣೆ ಕೈಗೆತ್ತಿಕೊಂಡಿತ್ತು.

ನ್ಯಾಯಮೂರ್ತಿ ರಮಣ, ಸಾಲಿಸಿಟರ್​ ಜನರಲ್​​ ತುಷಾರ್​ ಮೆಹ್ತಾ ಬಳಿ, ಮಾಧ್ಯಮಗಳ ವರ್ಗವೊಂದು ಎಲ್ಲಾ ಸುದ್ದಿಗಳಿಗೆ ಕೋಮು ಬಣ್ಣವನ್ನು ಹಚ್ಚುತ್ತಿದೆ. ಇದರಿಂದ ಕೊನೆಗೆ ದೇಶಕ್ಕೆ ಕೆಟ್ಟ ಹೆಸರು ಬರಲಿದೆ. ನೀವು ಎಂದಾದರೂ ಇದನ್ನು ನಿಯಂತ್ರಿಸಲು ಯತ್ನಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮೆಹ್ತಾ, ಕೇಂದ್ರ ಸರ್ಕಾರವು ಈಗಾಗಲೇ ಹೊಸ ಐಟಿ ನಿಯಮವನ್ನು ಜಾರಿಗೆ ತಂದಿದೆ. ಆದರೆ ಹೈಕೋರ್ಟ್​ಗಳಲ್ಲಿ ಹೊಸ ಐಟಿ ನಿಯಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದೆ ಎಂದು ಹೇಳಿದ್ರು. ಇದಕ್ಕೆ ಸಿಜೆಐ ಈ ವಿವರವಾಗಿ ಚರ್ಚೆಯ ಅಗತ್ಯವಿದೆ ಎಂದಿದ್ದಾರೆ.

ಇದನ್ನೂ ಓದಿ: ಕೊಲೆಯ ಸುಳಿವು ನೀಡಿತ್ತು ಒಂದು ಸೆಲ್ಫಿ : ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಜಮಾಯತ್​ ಉಲೇಮಾ ಇ ಹಿಂದ್​ ಹಾಗೂ ಪೀಸ್​ ಪಾರ್ಟಿ ಆಫ್​ ಇಂಡಿಯಾ ಸುಪ್ರಿಂಕೋರ್ಟ್ ಅರ್ಜಿ ಸಲ್ಲಿಸಿದ್ದು ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಕೋಮುವಾದ ಹೆಚ್ಚಲು ಕಾರಣವಾಗುತ್ತಿರುವ ಮಾಧ್ಯಮದ ಒಂದು ವರ್ಗದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ವೆಬ್​ ಪೋರ್ಟಲ್​ಗಳು ಹಾಗೂ ಯುಟ್ಯೂಬ್​ ಚಾನೆಲ್​ಗಳಲ್ಲಿ ಯಾರು ಬೇಕಿದ್ದರೂ ಚಾನೆಲ್​ ತೆರೆಯಬಹುದು. ಹಾಗೂ ಸುಳ್ಳು ಸುದ್ದಿಗಳು ಮುಕ್ತವಾಗಿ ಕಾಣಸಿಗುತ್ತಿದೆ ಎಂದು ನ್ಯಾ. ರಮಣ ಕಳವಳ ವ್ಯಕ್ತಪಡಿಸಿದ್ರು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ

ವೆಬ್​ ಪೋರ್ಟಲ್​ಗಳ ಮೇಲಾಗಲಿ, ಅಲ್ಲಿ ಯಾವ ರೀತಿಯ ಸುದ್ದಿಗಳು ಬಿತ್ತರವಾಗ್ತಿದೆ ಎಂಬುದನ್ನು ನಿಯಂತ್ರಿಸಲು ಯಾವುದೇ ಆಡಳಿತ ಮಂಡಳಿಯೇ ಇಲ್ಲ. ಅವರು ಮನಸ್ಸಿಗೆ ಬಂದ ಸುದ್ದಿಗಳನ್ನು ಬಿತ್ತರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಯುಟ್ಯೂಬ್​ ಚಾನೆಲ್​​ಗಳನ್ನು ಯಾರೂ ಬೇಕಾದರೂ ತೆರೆಯಬಹುದಾಗಿದೆ. ಯುಟ್ಯೂಬ್​ಗಳನ್ನು ತೆರೆದರೆ ಸಾಕು ಸುಳ್ಳು ಸುದ್ದಿಗಳು ಮುಕ್ತವಾಗಿ ಕಾಣಸಿಗುತ್ತದೆ. ಈ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಲೇಬೇಕಿದೆ ಎಂದು ಸಿಜೆಐ ಹೇಳಿದ್ದಾರೆ.

( Fake news coverage on web portal, Youtube channels: Supreme Court concerns)

Comments are closed.