Covid vaccine death: ಕೋವಿಡ್ ಲಸಿಕೆಯಿಂದ ಆಗುವ ಸಾವುಗಳಿಗೆ ಸರ್ಕಾರ ಹೊಣೆಯಲ್ಲ: ಸುಪ್ರೀಂಕೋರ್ಟ್ ಗೆ ಕೇಂದ್ರ ಸ್ಪಷ್ಟನೆ

ನವದೆಹಲಿ: Covid vaccine death: ಕೋವಿಡ್ ಲಸಿಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಗೆ ಸರ್ಕಾರ ಹೊಣೆ ಆಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಒಂದು ವೇಳೆ ಕೋವಿಡ್ ಲಸಿಕೆಯಿಂದಾಗಿ ಸಾವು ಸಂಭವಿಸಿದರೆ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡುವ ಮೂಲಕ ಪರಿಹಾರ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೊರೋನಾ ಬರದಂತೆ ತಡೆಯಲು ದೇಶದಲ್ಲಿ ಪ್ರಮುಖವಾಗಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಈ ಲಸಿಕೆಗಳಿಂದ ಹೃದಯಾಘಾತ ಹಾಗೂ ಇತರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಈ ಲಸಿಕೆಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ ಕೆಲವರ ಪ್ರಾಣಕ್ಕೂ ಸಂಚಕಾರ ತಂದೊಡ್ಡಿದೆ ಎಂಬ ಆರೋಪಗಳು ಕೇಳಿಬಂದಿತ್ತು.

ಇದನ್ನೂ ಓದಿ: Covid in China: ಚೀನಾದಲ್ಲಿ ಕೋವಿಡ್ ಮತ್ತಷ್ಟು ಉಲ್ಬಣ: ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್ ಸಿಗದೆ ನರಳಾಟ; ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ

ಕಳೆದ ವರ್ಷ ಇಬ್ಬರು ಯುವತಿಯರು ಕೋವಿಡ್-19 ಲಸಿಕೆ ತೆಗೆದುಕೊಂಡ ಕೆಲ ದಿನಗಳ ಬಳಿಕ ಮೃತಪಟ್ಟಿದ್ದರು. ಆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೃತಪಟ್ಟವರ ಪೋಷಕರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕೋವಿಡ್ ನಿಯಂತ್ರಣ ಲಸಿಕೆ ತೆಗೆದುಕೊಂಡ ಬಳಿಕ ಸಾವು ಸಂಭವಿಸಿದೆ. ಈ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು. ಲಸಿಕೆ ತೆಗೆದುಕೊಂಡ ಬಳಿಕ ಅದರಿಂದ ದೇಹದ ಮೇಲೆ ಏನಾದರೂ ದುಷ್ಪರಿಣಾಮ ಉಂಟಾಗುತ್ತಿದ್ದರೆ ಅದನ್ನು ಶೀಘ್ರದಲ್ಲೇ ಪತ್ತೆಹಚ್ಚಲು ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡುವ ಸಂಬಂಧ ಪ್ರೋಟೋಕಾಲ್ ಸಿದ್ಧಪಡಿಸಲು ಪರಿಣಿತ ವೈದ್ಯರನ್ನೊಳಗೊಂಡ ಮಂಡಳಿ ರಚನೆ ಮಾಡಬೇಕು. ಅಲ್ಲದೇ ಸಾವಿಗೆ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಪೋಷಕರು ಅರ್ಜಿ ಮೂಲಕ ಸುಪ್ರೀಂಕೋರ್ಟ್ ನ್ನು ಒತ್ತಾಯಿಸಿದ್ದರು.

ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಅದರಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ಲಸಿಕೆಗಳಿಂದ ಉಂಟಾಗುವ ಪ್ರತಿಕೂಲತೆ, ದುಷ್ಪರಿಣಾಮಗಳಿಂದ ಸಾವು ಸಂಭವಿಸುವುದು ವಿರಳ. ಅದಕ್ಕೆ ಸರ್ಕಾರವನ್ನು ಹೊಣೆ ಮಾಡಿ ಪರಿಹಾರ ಕೇಳುವುದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ. ಈವರೆಗೆ ಕೋವಿಡ್ ಲಸಿಕೆಯಿಂದಾದ ಸಾವಿನ ಕೇಸ್ ಒಂದು ಮಾತ್ರ ಎಂದು ರಾಷ್ಟ್ರೀಯ ಎಇಎಫ್ ಐ ಸಮಿತಿ ತಿಳಿಸಿದೆ. ಇಬ್ಬರು ಯುವತಿಯರ ಸಾವಿನ ಬಗ್ಗೆ ಸಂತಾಪವಿದೆ. ಆದರೆ ಅವರ ಸಾವಿಗೆ ಲಸಿಕೆ ಹೊಣೆಯಲ್ಲ. ಲಸಿಕೆಗೆ ಸಂಬಂಧಪಟ್ಟ ದುಷ್ಪರಿಣಾಮಗಳಿಂದ ಸಾವು-ನೋವುಗಳಾದಲ್ಲಿ ಅದಕ್ಕೆ ಪರಿಹಾರ ನೀಡಲು ಸರ್ಕಾರಕ್ಕೆ ಸಾಧ್ಯವಿಲ್ಲ. ಆದರೆ ಕಾನೂನಿನಲ್ಲಿ ಅಗತ್ಯ ಪರಿಹಾರಗಳಿವೆ. ಅಂಥವರು ಸಿವಿಲ್ ಕೋರ್ಟ್ ಗೆ ಹೋಗಿ ಕಾನೂನಾತ್ಮಕವಾಗಿ ಪರಿಹಾರ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಅಫಿಡವಿಟ್ ನಲ್ಲಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: Noida Accident : ಕಾರು ಹರಿದು 6 ವರ್ಷದ ಬಾಲಕಿ ಸಾವು, ಇಬ್ಬರು ಗಂಭೀರ

ಅಂದಹಾಗೆ, ಕೋವಿಡ್ ಲಸಿಕೆಯಿಂದ ಸಾವು ಸಂಭವಿಸಿದೆ ಎನ್ನಲಾದ ಪ್ರಕರಣದಲ್ಲಿ ಮೊದಲ ಅರ್ಜಿದಾರ ರಚನಾ ಗಂಗು ಇವರ ಮಗಳು 2021ರ ಮೇ 29ರಂದು ಮೊದಲ ಡೋಸ್ ಲಸಿಕೆ ಪಡೆದಿದ್ದಳು. ಅದಾದ ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಜೂನ್ 19ರಂದು ಸಾವನ್ನಪ್ಪಿದ್ದಳು. 2ನೇ ಅರ್ಜಿದಾರ ವೇಣುಗೋಪಾಲನ್ ಗೋವಿಂದನ್ ಅವರ ಪುತ್ರಿ ಎಂಎಸ್ಸಿ ವಿದ್ಯಾರ್ಥಿನಿ 2021ರ ಜೂನ್ 18ರಂದು ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದಿದ್ದಳು. ಬಳಿಕ ಜುಲೈ 10ರಂದು ಮೃತಪಟ್ಟಿದ್ದಳು.

Covid vaccine death: Government not responsible for deaths caused by Covid vaccine Central clarification to Supreme Court

Comments are closed.