President Election 2022 : ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು

President Election 2022 : ಸಂಸತ್​ ಭವನದಲ್ಲಿ ನಡೆದ ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು ಭಾರತದ 15ನೇ ರಾಷ್ಟ್ರಪತಿಯಾಗಿ ಬುಡಕಟ್ಟು ಜನಾಂಗದ ಮಹಿಳೆ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಮೂರನೇ ಸುತ್ತಿನಲ್ಲೂ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾರಿಂದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ದ್ರೌಪದಿ ಮುರ್ಮು ಬುಡಕಟ್ಟು ಜನಾಂಗದ ಪ್ರಥಮ ರಾಷ್ಟ್ರಪತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಅಲ್ಲದೇ ಪ್ರತಿಭಾ ಪಾಟೀಲ್​ ಬಳಿಕ ರಾಷ್ಟ್ರಪತಿ ಗದ್ದುಗೆಯನ್ನೇರಿದ ದೇಶದ ಎರಡನೇ ಮಹಿಳೆ ಎಂಬ ಖ್ಯಾತಿ ಕೂಡ ದ್ರೌಪದಿ ಮುರ್ಮಾರದ್ದಾಗಿದೆ. ಮೂರನೇ ಸುತ್ತಿನ ಮತ ಎಣಿಕೆ ಪೂರ್ಣಗೊಳ್ಳುವ ವೇಳೆಗೆ ಒಟ್ಟು ಮಾನ್ಯವಾದ ಮತಗಳ 50 ಪ್ರತಿಶತ ಮಾರ್ಕ್​ನ್ನೂ ದಾಟಿ ದ್ರೌಪದಿ ಮುರ್ಮು ಭರ್ಜರಿ ಜಯಭೇರಿಯನ್ನು ಬಾರಿಸಿದ್ದಾರೆ.

ಒಡಿಶಾ ಮೂಲದವರಾದ ದ್ರೌಪದಿ ಮುರ್ಮು ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆ . ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ದ್ರೌಪದಿ ಮುರ್ಮು 1997ರಲ್ಲಿ ರಾಯ್​ರಂಗ್​ಪುರ ಕೌನ್ಸಿಲರ್ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ರಾಜಕೀಯ ರಂಗವನ್ನು ಪ್ರವೇಶಿಸಿದರು. ಬಿಜೆಪಿ ಪಕ್ಷದಲ್ಲೇ ಇದ್ದ ದ್ರೌಪದಿ ಮುರ್ಮು 2000ನೇ ಇಸ್ವಿಯಲ್ಲಿ ರಾಯ್​ರಂಗ್​ಪುರ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಿ ವಿಜೇತರಾದರು. ಅಲ್ಲದೇ ಒಡಿಶಾದಲ್ಲಿ ಬಿಜೆಪಿ ಹಾಗೂ ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.

ಇದಾದ ಬಳಿಕ 2007ರಲ್ಲಿಯೂ ಶಾಸಕಿಯಾಗಿದ್ದ ದ್ರೌಪದಿ ಮುರ್ಮು ನೀಲಕಾಂತ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2015ರಲ್ಲಿ ಜಾರ್ಖಂಡ್​ ರಾಜ್ಯದ ಮೊದಲ ರಾಜ್ಯಪಾಲೆ ಎನಿಸಿ ಕೊಂಡಿದ್ದ ದ್ರೌಪದಿ ಮುರ್ಮು ಇದೀಗ ಬುಡಕಟ್ಟು ಜನಾಂಗದ ಮೊದಲ ರಾಷ್ಟ್ರಪತಿ ಎಂಬ ಖ್ಯಾತಿಗೆ ಪಾತ್ರರಾಗುವ ಮೂಲಕ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಹಾಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರ ಅಧಿಕಾರಾವಧಿ ಇದೇ ಜುಲೈ 24ರಂದು ಕೊನೆಗೊಳ್ಳಲಿದೆ. ಜುಲೈ 25ರಂದು ದ್ರೌಪದಿ ಮುರ್ಮು ದೇಶದ 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇದನ್ನು ಓದಿ : bigg boss : ಬಿಗ್​ ಬಾಸ್​ ರಿಯಾಲಿಟಿ ಶೋನಲ್ಲಿ ಭಾಗಿಯಾಗಬೇಕೆಂದುಕೊಂಡಿರುವವರಿಗೆ ಕಲರ್ಸ್ ಕನ್ನಡದಿಂದ ಮಹತ್ವದ ಸಂದೇಶ

ಇದನ್ನೂ ಓದಿ : Bank holidays August 2022 : ಬ್ಯಾಂಕ್‌ ಗ್ರಾಹಕರ ಗಮನಕ್ಕೆ, ಅಗಸ್ಟ್‌ನಲ್ಲಿ 13 ದಿನಗಳ ಕಾಲ ಬ್ಯಾಂಕ್‌ ಬಂದ್‌

President Election 2022 Result NDA’s candidate Draupadi Murmu wins, Yashwant Sinha loses

Comments are closed.