ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ಸರ್ಕಾರದ ಕರ್ತವ್ಯವಲ್ಲ, ರಾಷ್ಟ್ರೀಯ ಜವಾಬ್ದಾರಿ: ಎನ್‌ಡಿಎ ಸಭೆಯಲ್ಲಿ ಮೋದಿ

"ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದು ಕೇವಲ ಆಡಳಿತಾರೂಢ ಸರ್ಕಾರದ ಕರ್ತವ್ಯವಷ್ಟೇ ಅಲ್ಲ, ಅದೊಂದು 'ರಾಷ್ಟ್ರೀಯ ಜವಾಬ್ದಾರಿ' ಆಗಿದೆ" ಎಂದು ಅವರು ಪ್ರತಿಪಾದಿಸಿದ್ದಾರೆ.

ನವದೆಹಲಿ:  ದೇಶದಲ್ಲಿ ವ್ಯಾಪಕ ಸದ್ದು ಮಾಡುತ್ತಿರುವ ‘ನೀಟ್’ (NEET) ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. “ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವುದು ಕೇವಲ ಆಡಳಿತಾರೂಢ ಸರ್ಕಾರದ ಕರ್ತವ್ಯವಷ್ಟೇ ಅಲ್ಲ, ಅದೊಂದು ‘ರಾಷ್ಟ್ರೀಯ ಜವಾಬ್ದಾರಿ’ ಆಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.

ಆಡಳಿತಾರೂಢ ಎನ್‌ಡಿಎ (NDA) ಸಂಸದೀಯ ಪಕ್ಷದ ‘ಮಂಗಲ್ ಮಿಲನ್’ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿಯವರ ಪ್ರಮುಖ ಅಭಿಪ್ರಾಯಗಳನ್ನು, ಸಭೆಯ ಬಳಿಕ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮಾಧ್ಯಮಗಳಿಗೆ ವಿವರಿಸಿದರು.

ಅಪರಾಧಿಗಳಿಗೆ ಸಿಗಲಿದೆ ಕಠಿಣ ಶಿಕ್ಷೆ:

ಪರೀಕ್ಷಾ ಪ್ರಕ್ರಿಯೆಯನ್ನು ಕಲುಷಿತಗೊಳಿಸಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶ್ರಮದ ಜೊತೆ ಆಟವಾಡುವ ಕಿಡಿಗೇಡಿಗಳಿಗೆ ಯಾವುದೇ ಕಾರಣಕ್ಕೂ ವಿನಾಯಿತಿ ನೀಡಬಾರದು. ಕಾನೂನಿನಡಿಯಲ್ಲಿ ಅವರಿಗೆ ಸಿಗಬಹುದಾದ ಅತ್ಯಂತ ಕಠಿಣ ಶಿಕ್ಷೆಯನ್ನು ಕಡ್ಡಾಯವಾಗಿ ವಿಧಿಸಬೇಕು ಎಂದು ಪ್ರಧಾನಿ ಮೋದಿ ಖಡಕ್ ಆಗಿ ಸೂಚಿಸಿದ್ದಾರೆ.

ಪಾರದರ್ಶಕ ವ್ಯವಸ್ಥೆಗೆ ಸಾಮೂಹಿಕ ಪ್ರಯತ್ನ:

ಭವಿಷ್ಯದಲ್ಲಿ ಯಾವುದೇ ರೀತಿಯ ಪ್ರಶ್ನೆಪತ್ರಿಕೆ ಸೋರಿಕೆ ನಡೆಯದಂತೆ ತಡೆಯಲು, ಅತ್ಯಂತ ಪಾರದರ್ಶಕ ಹಾಗೂ ದೋಷರಹಿತ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಬೇಕಿದೆ. ಇದಕ್ಕಾಗಿ ಸರ್ಕಾರಿ ಮತ್ತು ಸಾಂಸ್ಥಿಕ ಮಟ್ಟದಲ್ಲಿ ಸಾಮೂಹಿಕ ಪ್ರಯತ್ನಗಳು ನಡೆಯಬೇಕೆಂದು ಅವರು ಕರೆ ನೀಡಿದರು.

ರಾಜಕೀಯವನ್ನು ಬದಿಗಿಟ್ಟು ಕೆಲಸ ಮಾಡಿ:

“ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ರಾಜಕೀಯ ವಿಷಯವಾಗಬಾರದು. ಅದೊಂದು ರಾಷ್ಟ್ರೀಯ ಸಮಸ್ಯೆ. ಯುವಜನರ ಭದ್ರತೆ ಹಾಗೂ ಅವರ ಭವಿಷ್ಯವೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ” ಎಂದು ಪ್ರಧಾನಿ ಹೇಳಿದರು.

ಮುಂದುವರಿದು ಮಾತನಾಡಿದ ಅವರು, “ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ದೇಶದ ಭವಿಷ್ಯ ಮತ್ತು ಯುವಕರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಸಂಸದರ ಮೇಲಿದೆ. ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಸಹ ಗದ್ದಲ ಎಬ್ಬಿಸದೆ, ದೇಶದ ಹಿತದೃಷ್ಟಿಯಿಂದ ರಚನಾತ್ಮಕವಾಗಿ ಕಲಾಪಗಳಲ್ಲಿ ಭಾಗವಹಿಸಬೇಕು” ಎಂದು ಆಶಿಸಿದರು.

ದೆಹಲಿಯಲ್ಲಿ ತೀವ್ರ ಪ್ರತಿಭಟನೆ:

ಮತ್ತೊಂದೆಡೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯಲ್ಲಿ ಸೋನಮ್ ವಾಂಗ್ಚುಕ್, ಕಾಕ್ರೋಚ್ ಜನತಾ ಪಾರ್ಟಿ ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತುರ್ತು ಸಭೆ ನಡೆಸಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.