Minister Murugan : ಮಗ ಕೇಂದ್ರದ ಕ್ಯಾಬಿನೆಟ್ ದರ್ಜೆ ಸಚಿವ…! ಹೆತ್ತವರು ಕೃಷಿಕೂಲಿ ಕಾರ್ಮಿಕರು…!!

ಚೆನ್ನೈ : ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮೋದಿ ಕ್ಯಾಬಿನೆಟ್ ಹಲವು ವೈಶಿಷ್ಟ್ಯತೆಯಿಂದ ಕೂಡಿದೆ. ಅದರಲ್ಲೂ ಮೋದಿ ಸಂಪುಟ ಸೇರಿದ ಸಚಿವರು ಹೆತ್ತವರು ಹಳ್ಳಿಯಲ್ಲಿ ಕೃಷಿ ಕೂಲಿ ಕಾರ್ಮಿಕ ರಾಗಿ ಕೆಲಸ ಮಾಡುತ್ತಿದ್ದು ಸರಳತೆಗೆ ಸಾಕ್ಷಿಯಾಗಿದ್ದಾರೆ.

ಇತ್ತೀಚಿಗೆ ಎಲ್ .ಮುರುಗನ್ ಕೇಂದ್ರ ಸಚಿವ ಸಂಪುಟದ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ಮಾಹಿತಿ ಪ್ರಸಾರ ಸಚಿವರನ್ನಾಗಿ ನೇಮಿಸಲಾಗಿದೆ. ಮುರುಗನ್ ಕೇಂದ್ರ ಸಚಿವರಾಗಿ ನೇಮಕವಾಗಿದ್ದರೇ ಇತ್ತ ಮುರುಗನ್ ಪೋಷಕರು ಮಾತ್ರ ದೆಹಲಿಯಿಂದ ಎರಡೂವರೆ ಸಾವಿರ ಕಿಲೋಮೀಟರ್ ದೂರದ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಕೊನೋರ್ ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಮುರುಗನ್ ಪೋಷಕರಾದ ಲೋಗನಾಥನ್ ಮತ್ತು ವರುದಮ್ಮಲ್ ಕೊನೋರ್ ಗ್ರಾಮದಲ್ಲಿ ಕೃಷಿ ಕಾರ್ಮಿಕ ರಾಗಿದ್ದು ಬೇರೆಯವರ ತೋಟ-ಗದ್ದೆಯಲ್ಲಿ ದುಡಿದು ಬದುಕುತ್ತಿದ್ದಾರೆ. ಮಗ ಕೇಂದ್ರ ಸಚಿವ ರಾದ ಕುರಿತು ಪೋಷಕರನ್ನು ಮಾತನಾಡಿಸಲು ಹೋದ ಮಾಧ್ಯಮದವರಿಗೆ ಮುರುಗನ್ ಪೋಷಕರು ಬೇರೆಯವರ ತೋಟದಲ್ಲಿ ಕೆಲಸ ಮಾಡುತ್ತಿದ್ದಂತೆ ಸಿಕ್ಕಿದ್ದರು. ಅಷ್ಟೇ ಅಲ್ಲ ಅವರನ್ನು ಮಾತನಾಡಿಸಲು ಕೃಷಿ ಕಾರ್ಮಿಕರ ಮಾಲೀಕರ ಅನುಮತಿ ಪಡೆಯಬೇಕಾಯಿತು ಎಂದು ಮಾಧ್ಯಮಗಳು ವರದಿ ಮಾಡಿದೆ.

ಮುರುಗನ್ ದಲಿತ ಸಮುದಾಯದ ಅರುತಂಥಿಯಾರ್ ಪಂಗಡಕ್ಕೆ‌ ಸೇರಿದವರಾಗಿದ್ದು ಚೈನೈನ ಡಾ. ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಕಾನೂನು ವೃತ್ತಿಯನ್ನು ಅಭ್ಯಾಸ ಮಾಡುತ್ತಿದ್ದಾರೆ. ಮಗನ ಸಾಧನೆ ಬಗ್ಗೆ ಉಲ್ಲೇಖಿಸಿದ ಪೋಷಕರು ಆತ ಸಾಲ ಪಡೆದು ಶಿಕ್ಷಣ ಪಡೆದು ಇಷ್ಟು ಎತ್ತರಕ್ಕೆ ಏರಿದ್ದಾರೆ. ಆತನ ಸಾಧನೆಗೆ ನಮ್ಮಿಂದ ಏನು ಸಹಾಯವಾಗಿಲ್ಲ ಎಂದು ಸರಳತೆ ಯಿಂದ ಹೇಳಿದ್ದಾರೆ.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದು ಹಲವು ಬಿಜೆಪಿ ಪ್ರಕರಣಗಳಲ್ಲಿ ವಕೀಲರಾಗಿಯೂ ಕೆಲಸ ಮಾಡುತ್ತಿದ್ದಾರೆ. ಸಚಿವರಾಗುವ ಮುನ್ನ ಮುರುಗನ್ ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರ ಸಚಿವರಾಗಿ ಮುರುಗನ್ ನೇಮಕವಾದ ಬಳಿಕ ಅವರ ಸ್ಥಾನಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ನೇಮಿಸಲಾಗಿದೆ. ಮುರುಗನ್ ಪೋಷಕರಾದ‌ ಲೋಗನಾಥನ್ ಹಾಗೂ ವರುದಮ್ಮಲ್ ಕೊನೊರ್ ಗ್ರಾಮದಲ್ಲಿ ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದು ಊರಿನ ಕೃಷಿ‌ಕಾರ್ಯಗಳಲ್ಲಿ ದುಡಿದು ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಮಗನು ಹಲವು ಭಾರಿ ಚೈನೈಗೆ ಬಂದು ತನ್ನೊಂದಿಗೆ ವಾಸಿಸುವಂತೆ ಒತ್ತಾಯ ಮಾಡಿದ. ಅದರೆ ಅಲ್ಲಿ ನಾವು ಹೋಗಿ ಮಾಡುವುದು ಏನಿದೆ. ಮಗ ತನ್ನ ಕೆಲಸದಲ್ಲಿ ನಿರತನಾಗಿರುತ್ತಾನೆ. ಹೀಗಾಗಿ ನಾವು ಇಲ್ಲೇ ಇರೋ ತೀರ್ಮಾನ ಮಾಡಿದ್ದೇವೆ ಅಂತ ಸರಳತೆ ಯಿಂದ ಉತ್ತರಿಸುತ್ತಾರೆ ಮುರುಗನ್ ಪೋಷಕರು. ಮುರುಗನ್ ಪೋಷಕರು ಸರಳತೆ, ಬದುಕು ಈಗ ಎಲ್ಲೆಡೆ ಸುದ್ದಿಯಾಗಿದ್ದು, ಹಲವು ಗಣ್ಯರು ಇವರನ್ನು ಶ್ಲಾಘಿಸಿದ್ದಾರೆ.

Comments are closed.