TTD: ವಿಐಪಿ ದರ್ಶನ ಸಮಯದಲ್ಲಿ ಪ್ರಾಯೋಗಿಕ ಬದಲಾವಣೆ ತಂದ ಟಿಟಿಡಿ: ತಿಮ್ಮಪ್ಪನ ಉಚಿತ ದರ್ಶನ ಮತ್ತಷ್ಟು ಸುಲಭ

ಅಮರಾವತಿ: TTD: ದೂರದೂರಿನಿಂದ ತಿರುಪತಿ ತಿಮ್ಮಪ್ಪನ ಉಚಿತ ದರ್ಶನಕ್ಕೆ ತೆರಳುವ ಭಕ್ತಾದಿಗಳಿಗೆ ಒಂದು ಗುಡ್ ನ್ಯೂಸ್ ಇದೆ. ಇನ್ಮುಂದೆ ತಿಮ್ಮಪ್ಪನ ಉಚಿತ ದರ್ಶನ ಮತ್ತಷ್ಟು ಸುಲಭವಾಗಲಿದೆ. ಯಾಕಂದ್ರೆ ತಿರುಮಲ ವೆಂಕಟೇಶ್ವರ ದೇವರ ವಿಐಪಿ ದರ್ಶನದ ಸಮಯ ಬದಲಾಗಿದ್ದು, ಸಾಮಾನ್ಯ ದರ್ಶನಕ್ಕೆ ತೆರಳಿದ ಭಕ್ತರು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ಕಾಯುವ ತೊಂದರೆ ತಪ್ಪಿದೆ.

ನವೆಂಬರ್ ತಿಂಗಳಿನಿಂದ ತಿರುಮಲ ತಿರುಪತಿ ದೇವಸ್ಥಾನವು(ಟಿಟಿಡಿ) ವಿಐಪಿ ದರ್ಶನದ ನಿಯಮದಲ್ಲಿ ಮಹತ್ತರ ಬದಲಾವಣೆ ತಂದಿದೆ. ಈ ಮೊದಲು ವಿಐಪಿ ದರ್ಶನ ಹಾಗೂ ಸಾಮಾನ್ಯ ದರ್ಶನದ ಸಮಯ ಒಂದೇ ಆಗಿದ್ದರಿಂದ ಭಕ್ತರಿಗೆ ತೊಂದರೆ ಆಗುತ್ತಿತ್ತು. ವಿಐಪಿ ದರ್ಶನ ಮುಗಿಯುವ ತನಕ ವೈಕುಂಠಂ ಕ್ಯೂ ಕಾಂಪ್ಲೆಕ್ಸ್ ನಲ್ಲಿರುವ ಉಚಿತ ದರ್ಶನದ ಭಕ್ತರು ದೇವರ ದರ್ಶನಕ್ಕೆ ತಾಸುಗಟ್ಟಲೇ ಕಾಯಬೇಕಿತ್ತು. ಹೀಗಾಗಿ ಉಚಿತ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಟಿಟಿಡಿ ಸಮಯ ಬದಲಾವಣೆ ಮಾಡಿದೆ. ನಾಳೆಯಿಂದಲೇ ಈ ಹೊಸ ನಿಯಮಗಳು ಜಾರಿಗೆ ಬರಲಿವೆ.

ನಾಳೆಯಿಂದ ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆವರೆಗೆ ವಿಐಪಿ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ. ಈ ಹಿಂದೆ ಬೆಳಗ್ಗಿನ ಜಾವ 2.30ರಿಂದ ಬೆಳಿಗ್ಗೆ 8 ಗಂಟೆವರೆಗೆ ವಿಐಪಿ ದರ್ಶನವಿತ್ತು. ಆದರೆ ವಿಐಪಿ ಪಾಸ್ ತೆಗೆದುಕೊಂಡು ಬಂದ ಭಕ್ತರ ಸಂಖ್ಯೆ ಹೆಚ್ಚಿದ್ದರೆ 10 ಗಂಟೆವರೆಗೂ ವಿಐಪಿ ದರ್ಶನ ನಡೆಯುತ್ತಿತ್ತು. ಆಗ ಸಾಮಾನ್ಯ ದರ್ಶನಕ್ಕೆ ಬಂದ ಭಕ್ತರು ಕಾಯಬೇಕಿತ್ತು.

ಪತ್ರಿಕಾ ಪ್ರಕಟಣೆ ಮೂಲಕ ಟಿಟಿಡಿ ಆಡಳಿತ ಮಂಡಳಿ ವಿಐಪಿ ದರ್ಶನದ ಬಗ್ಗೆ ಮಾಹಿತಿ ನೀಡಿದೆ. ವಿಐಪಿ ದರ್ಶನಕ್ಕೆ ಮುಂಜಾನೆ ಅವಕಾಶ ನೀಡಲಾಗಿತ್ತು. ಆದೇ ವೇಳೆ ಉಚಿತ ದರ್ಶನ ಪಡೆಯುವ ಭಕ್ತರು ಕೂಡಾ ಆಗಮಿಸುತ್ತಿದ್ದರು. ಅವರು ಎದುರಿಸುತ್ತಿದ್ದ ತೊಂದರೆಯನ್ನು ತಪ್ಪಿಸುವ ಸಲುವಾಗಿ ವಿಐಪಿ ದರ್ಶನದ ಸಮಯದಲ್ಲಿ ಬದಲಾವಣೆ ತರಲಾಗಿದೆ. ಸದ್ಯ ಪ್ರಾಯೋಗಿಕವಾಗಿ ಈ ಬದಲಾವಣೆ ತರಲಾಗಿದ್ದು, ಫಲಿತಾಂಶ ನೋಡಿ ಮುಂದುವರೆಸುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಟಿಟಿಡಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಅಕ್ಟೋಬರ್ ತಿಂಗಳಿನಲ್ಲಿ ಸರಣಿ ಸಭೆಗಳನ್ನು ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿನಿತ್ಯ ಮಧ್ಯಾಹ್ನದ ಒಳಗೆ ವಿಐಪಿ ದರ್ಶನ ಪೂರ್ಣಗೊಳಿಸುವಂತೆ ಯೋಜನೆ ರೂಪಿಸಲಾಗಿದೆ. ಈ ಮೂಲಕ ಸಾಮಾನ್ಯ ದರ್ಶನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಸಮಯವನ್ನು ನೀಡಲಾಗುತ್ತದೆ. ಕಳೆದ ಕೆಲ ತಿಂಗಳಿನಿಂದ ತಿರುಪತಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ವಾರಾಂತ್ಯ, ಸರ್ಕಾರಿ ರಜಾ ದಿನಗಳಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಭಕ್ತರು ಸೇರುತ್ತಾರೆ. ಉಚಿತ ದರ್ಶನಕ್ಕೆ ಬಂದ ಭಕ್ತರು ಒಂದು ದಿನಕ್ಕೂ ಹೆಚ್ಚು ಕಾಲ ಕಾಯುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ನೀಡುವ ಸಲುವಾಗಿ ವಿಐಪಿ ದರ್ಶನ ಸಮಯದಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ತರಲಾಗಿದೆ.

ತಿಮ್ಮಪ್ಪನ ಪ್ರಸಾದದಲ್ಲಿಯೂ ಬದಲಾವಣೆ: ಟಿಟಿಡಿ ತಿಮ್ಮಪ್ಪನ ಪ್ರಸಾದದಲ್ಲಿಯೂ ಬದಲಾವಣೆ ತಂದಿದೆ. ಈ ಮೊದಲು ಸಿಗುತ್ತಿದ್ದ ತಿಮ್ಮಪ್ಪನ ಲಾಡು ಪ್ರಸಾದದ ಬದಲಿಗೆ ಶ್ರೀವಾರಿ ಧನ ಪ್ರಸಾದವನ್ನುವಿತರಿಸಲಾಗುತ್ತಿದೆ. ಚಿಲ್ಲರೆ ನಾಣ್ಯಗಳ ಪ್ಯಾಕೆಟ್ ಇದಾಗಿದ್ದು, ಅರಿಶಿನ ಕುಂಕುಮದ ಜೊತೆ ಪ್ರಸಾದ ಸಿಗಲಿದೆ. ಭಕ್ತರು ಕಾಣಿಕೆ ಡಬ್ಬಿಗೆ ಹಾಕುವ ಚಿಲ್ಲರೆ ನಾಣ್ಯಗಳನ್ನು ಶ್ರೀವಾರಿ ಧನ ಪ್ರಸಾದದ ರೂಪದಲ್ಲಿ ನೀಡಲಾಗುತ್ತಿದೆ.

ಇದನ್ನೂ ಓದಿ: Somalia Bomb Attack: ಸೊಮಾಲಿಯಾದ ಶಿಕ್ಷಣ ಇಲಾಖೆ ಕಚೇರಿ ಬಳಿ 2 ಕಾರು ಬಾಂಬ್ ಬ್ಲಾಸ್ಟ್: 100ಕ್ಕೂ ಅಧಿಕ ಮಂದಿ ಬಲಿ

ಇದನ್ನೂ ಓದಿ: Beauty Tips : ಚಳಿಗಾಲದಲ್ಲಿ ಮುಖದಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕೇ ? ಹಾಗಾದರೆ ಬಳಸಿ ಈ ಬ್ಯುಟಿ ಟಿಪ್ಸ್

TTD: Tirupati temple trust to change timings for VIPs from November

Comments are closed.