Vijayendra DCM : ಬಿ.ವೈ.ವಿಜಯೇಂದ್ರಗೆ ಡಿಸಿಎಂ ಹುದ್ದೆ ಫಿಕ್ಸ್ : ಮಗನಿಗಾಗಿಯೇ ಪದತ್ಯಾಗ ಮಾಡಿದ್ದ ಯಡಿಯೂರಪ್ಪ ‌

ಬೆಂಗಳೂರು : ರಾಜ್ಯ ರಾಜಕೀಯದಲ್ಲೀಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಸಂಪುಟ ಸೇರ್ಪಡೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಆದ್ರೆ ವಿಜಯೇಂದ್ರ ಈ ಬಾರಿ ಸಂಪುಟ ಸೇರುವುದು ಖಚಿತ. ಪುತ್ರನ ರಾಜಕೀಯ ಜೀವನಕ್ಕಾಗಿಯೇ ಯಡಿಯೂರಪ್ಪ ಪದತ್ಯಾಗ ಮಾಡಿದ್ದಾರೆ. ಡಿಸಿಎಂ ಹುದ್ದೆ ಖಚಿತ ಮಾಡಿಕೊಂಡೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಅನ್ನೋದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಗೆ ಭದ್ರ ನೆಲೆಯನ್ನು ಕಲ್ಪಿಸಿಕೊಟ್ಟವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಹೊಸ ದಾಖಲೆಯನ್ನೂ ಬರೆದಿದ್ದಾರೆ. ಬಿಜೆಪಿ ಹೈಕಮಾಂಡ್‌ ವಿರುದ್ದವೇ ಒಂದು ಕಾಲದಲ್ಲಿ ತೊಡೆತಟ್ಟಿ ನಿಂತಿದ್ದ ಯಡಿಯೂರಪ್ಪ ಇಂದು ಸಿಎಂ ಹುದ್ದೆಗೆ ರಾಜೀನಾಮೆ ನೀಡಿ ಮನೆಗೆ ತೆರಳಿದ್ದಾರೆ. ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಈಗಾಗಲೇ ಶಿವಮೊಗ್ಗ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರದ ಮಟ್ಟದಲ್ಲಿ ತಮ್ಮ ವರ್ಚಸ್ಸನ್ನೂ ರೂಢಿಸಿಕೊಂಡಿದ್ದಾರೆ. ಇನ್ನೋರ್ವ ಪುತ್ರ ಬಿ.ವೈ.ವಿಜಯೇಂದ್ರ ರಾಜಕೀಯ ಭವಿಷ್ಯವೇ ಯಡಿಯೂರಪ್ಪಗೆ ಚಿಂತೆಯಾಗಿತ್ತು. ಇದೇ ಕಾರಣಕ್ಕೆ ಯಡಿಯೂರಪ್ಪ ಮಗನನ್ನು ರಾಜ್ಯಮಟ್ಟದ ನಾಯಕನನ್ನಾಗಿ ಮಾಡಲು ಶತ ಪ್ರಯತ್ನವನ್ನೇ ಮಾಡಿದ್ದಾರೆ.

ಆಪರೇಷನ್‌ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದವರು ಇದೇ ಬಿ.ವೈ.ವಿಜಯೇಂದ್ರ. ಶಾಸಕರನ್ನು ಮುಂಬೈ ಹೋಟೆಲ್‌ ನಲ್ಲಿರಿಸಿ ಸಮ್ಮಿಶ್ರ ಸರಕಾರವನ್ನ ಪತನಗೊಳಿಸುವ ಹೊತ್ತಲೇ ವಿಜಯೇಂದ್ರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಲೇ ಬಿ.ವೈ.ವಿಜಯೇಂದ್ರ ಕೂಡ ಸಚಿವರಾಗ್ತಾರೆ ಅನ್ನೋ ಮಾತು ಹರಿದಾಡಿತ್ತು. ಆದರೆ ಸ್ವಪಕ್ಷೀಯ ಶಾಸಕರ ವಿರೋಧ ಸಚಿವ ಸ್ಥಾನ ಪಡೆಯಲು ತೊಡಕಾಗಿ ಪರಿಣಮಿಸಿತ್ತು. ನಂತರ ದಲ್ಲಿ ನಡೆದ ಉಪ ಚುನಾವಣೆಯಲ್ಲಿಯೂ ವಿಜಯೇಂದ್ರ ನೇತೃತ್ವದಲ್ಲಿಯೇ ಬಿಜೆಪಿ ಎರಡು ಸ್ಥಾನಗಳನ್ನು ಜಯಿಸಿತ್ತು. ಬಿಜೆಪಿ ಉಪಾಧ್ಯಕ್ಷ ಹುದ್ದೆ ಅಲಂಕರಿಸಿ, ಪಕ್ಷ ಸಂಘಟನೆಗೆ ಒತ್ತು ನೀಡಿದ್ದರೂ ಕೂಡ ಹೈಕಮಾಂಡ್‌ ವಿಜಯೇಂದ್ರಗೆ ಸಚಿವ ಸ್ಥಾನ ನೀಡೋದಕ್ಕೆ ಮನಸ್ಸು ಮಾಡಿರಲಿಲ್ಲ.

ಅದ್ಯಾವಾಗ ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಲು ಮುಂದಾಯ್ತೋ ಆವಾಗ್ಲೆ ಯಡಿಯೂರಪ್ಪ ಹೈಕಮಾಂಡ್‌ ಅಂಗಳಕ್ಕೆ ದಾಳ ವೊಂದನ್ನು ಎಸೆದು ಬಿಟ್ಟಿದ್ರು. ತಾನು ಸಿಎಂ ಹುದ್ದೆಯಿಂದ ರಾಜೀನಾಮೆ ನೀಡ್ತೇನೆ. ಆದ್ರೆ ಸಿಎಂ ಪಟ್ಟ ತನ್ನ ಪುತ್ರ ವಿಜಯೇಂದ್ರಗೆ ಕಟ್ಟಬೇಕು ಅನ್ನೋ ಕಂಡಿಷನ್‌ ಹಾಕಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್‌ ನಿಮ್ಮ ಮಗನಿಗೆ ಸಿಎಂ ಹುದ್ದೆ ಕೊಟ್ರೆ ಪಕ್ಷಕ್ಕೆ ಡ್ಯಾಮೇಜ್‌ ಆಗುತ್ತೆ. ಹೀಗಾಗಿ ನೀವೇ ಸಿಎಂ ಆಗಿ ಮುಂದುವರಿಯಿರಿ ಎಂದಿದ್ದಾರೆ. ಅಂತಿಮವಾಗಿ ಯಡಿಯೂರಪ್ಪ ತನ್ನ ಪುತ್ರನನ್ನ ಕ್ಯಾಬಿನೆಟ್‌ಗೆ ಸೇರಿಸಿಕೊಂಡು ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಅನ್ನೋ ಡಿಮ್ಯಾಂಡ್‌ ಇಟ್ಟಿದ್ದಾರೆ. ಮಗನನ್ನು ಡಿಸಿಎಂ ಮಾಡೋದಾದ್ರೆ ಯಾರನ್ನೂ ಬೇಕಾದ್ರೂ ಸಿಎಂ ಮಾಡಿ ಅಂತಾನೂ ಹೇಳಿಬಿಟ್ಟಿದ್ದರು.

ಬಿಜೆಪಿ ಹೈಕಮಾಂಡ್‌ ಯಡಿಯೂರಪ್ಪ ಬೇಡಿಕೆಯನ್ನು ಈಡೇರಿಸಲು ಒಪ್ಪಿಗೆಯನ್ನು ಸೂಚಿಸಿತ್ತು. ಯಡಿಯೂರಪ್ಪ ನಿರ್ಗಮನದ ಬೆನ್ನಲ್ಲೇ ಮುಂದಿನ ಚುನಾವಣೆಗೆ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್‌ ಆಗಬಾರದು ಅನ್ನೋ ಕಾರಣಕ್ಕೆ ಯಡಿಯೂರಪ್ಪ ಸಮ್ಮತಿಸಿದವರನ್ನೇ ಸಿಎಂ ಆಗಿ ನೇಮಕ ಮಾಡುವ ಪ್ಲ್ಯಾನ್‌ ರೂಪಿಸಿದೆ. ಇದೀಗ ಸಂಪುಟ ರಚನೆ ಕಸರತ್ತು ನಡೆಯುತ್ತಿದ್ದು, ಬಿ.ವೈ.ವಿಜಯೇಂದ್ರ ಅವರನ್ನು ಡಿಸಿಎಂ ಹುದ್ದೆ ನೀಡುವುದು ಖಚಿತ ಎನ್ನುತ್ತಿದೆ ಬಿಜೆಪಿಯ ಉನ್ನತ ಮೂಲಗಳು.

Comments are closed.