ದಾವಣಗೆರೆ ದಕ್ಷಿಣ ಉಪಚುನಾವಣೆ : ಸಮರ್ಥ ಶ್ಯಾಮನೂರ್ ಗೆ ಕಾಂಗ್ರೆಸ್ ಮಣೆ ?
ದಾವಣಗೆರೆ : Davangere South by-election: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆ ಈಗ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಶಾಮನೂರು ಕುಟುಂಬದ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಅವರ ಮೊಮ್ಮಗ ಸಮರ್ಥ್ ಶಾಮನೂರು ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಕಾಂಗ್ರೆಸ್ ಟಿಕೆಟ್ ಯಾರಿಗೆ ?
ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ್ ಶಾಮನೂರು ಅವರ ಹೆಸರು ಮೊದಲ ಆದ್ಯತೆಯಲ್ಲಿದೆ. ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಕ್ಷೇತ್ರದಲ್ಲಿರುವ ಅಪಾರ ಗೌರವ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪ್ರಭಾವ ಸಮರ್ಥ್ ಅವರಿಗೆ ವರದಾನವಾಗಬಹುದು.
ಆದರೆ, ಈ ಬಾರಿ ಕಾಂಗ್ರೆಸ್ ಪಾಳಯದಲ್ಲಿ ಅಲ್ಪಸಂಖ್ಯಾತ ಮುಖಂಡರು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದು, ದಶಕಗಳಿಂದ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿರುವ ನಮಗೆ ಈ ಬಾರಿ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಸಚಿವರಾದ ಜಮೀರ್ ಅಹ್ಮದ್ ಖಾನ್ ಮತ್ತು ಸತೀಶ್ ಜಾರಕಿಹೊಳಿ ಅವರಿಗೆ ಈ ಕುರಿತು ಮನವಿ ಕೂಡ ಸಲ್ಲಿಸಲಾಗಿದೆ.
ಕ್ಷೇತ್ರದ ಅಂಕಿ-ಅಂಶಗಳು ಮತ್ತು ಗೆಲುವಿನ ಲೆಕ್ಕಾಚಾರದ ಪ್ರಕಾರ, ದಾವಣಗೆರೆ ದಕ್ಷಿಣ ಕ್ಷೇತ್ರವು 2008ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಕೈಹಿಡಿದಿದೆ. 2023ರ ಚುನಾವಣೆ: ಶಾಮನೂರು ಶಿವಶಂಕರಪ್ಪ ಅವರು 84,298 ಮತಗಳನ್ನು ಪಡೆದು, ಬಿಜೆಪಿಯ ಬಿ.ಜಿ. ಅಜಯ್ ಕುಮಾರ್ ಅವರ ವಿರುದ್ಧ 27,888 ಮತಗಳ ಅಂತರದಿಂದ ಗೆದ್ದಿದ್ದರು.
ಜಾತಿವಾರು ಲೆಕ್ಕಾಚಾರ: ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಮುಸ್ಲಿಂ ಸಮುದಾಯದ ಮತಗಳು ದೊಡ್ಡ ಪ್ರಮಾಣದಲ್ಲಿದ್ದು, ಅಭ್ಯರ್ಥಿಯ ಗೆಲುವನ್ನು ನಿರ್ಧರಿಸುತ್ತವೆ. ಸಮರ್ಥ್ ಅವರಿಗೆ ಟಿಕೆಟ್ ಸಿಕ್ಕರೆ “ಕುಟುಂಬದ ಪರಂಪರೆ” ಮತ್ತು “ಅನುಕಂಪ” ಎರಡೂ ಕೆಲಸ ಮಾಡಬಹುದು.
Also read: Bengaluru: ಪ್ರತಾಪ್ ಸಿಂಹಗೆ ಬಿಜೆಪಿಯೇ ಟಿಕೆಟ್ ನೀಡಿಲ್ಲ: ಸಿಎಂ ಸಿದ್ದರಾಮಯ್ಯ ಟಾಂಗ್
ದಾವಣಗೆರೆ ದಕ್ಷಿಣಕ್ಕೆ ಬಿಜೆಪಿ ಅಭ್ಯರ್ಥಿ ಯಾರು ?
ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಬಿ.ಜಿ. ಅಜಯ್ ಕುಮಾರ್ ಪ್ರಬಲ ಆಕಾಂಕ್ಷಿ. ಅವರ ಜೊತೆಗೆ ಮಾಜಿ ಎಂಪಿ ಜಿ.ಎಂ. ಸಿದ್ದೇಶ್ವರ್ ಅವರ ಬೆಂಬಲಿಗರು ಅಥವಾ ಲಿಂಗಾಯತ ಸಮುದಾಯದ ಹೊಸ ಮುಖಗಳನ್ನು ಕಣಕ್ಕಿಳಿಸಲು ಬಿಜೆಪಿ ಚಿಂತಿಸುತ್ತಿದೆ. ದಾವಣಗೆರೆ ಉತ್ತರದಲ್ಲಿ ಶಾಮನೂರು ಕುಟುಂಬದ ಹಿಡಿತವಿರುವುದರಿಂದ, ದಕ್ಷಿಣದಲ್ಲಾದರೂ ಗೆಲುವು ಸಾಧಿಸಿ ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳಲು ಬಿಜೆಪಿ ತಂತ್ರ ರೂಪಿಸುತ್ತಿದೆ.
ಸದ್ಯ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಪ್ರಬಲವಾಗಿ ಕೇಳಿ ಬರ್ತಾ ಇರುವ ಹೆಸರು ಸಮರ್ಥ್ ಶ್ಯಾಮನೂರು. ದಾವಣಗೆರೆಯ ಪ್ರತಿಷ್ಠಿತ ಶ್ಯಾಮನೂರು ಕುಟುಂಬದ ಮೂರನೆ ತಲೆಮಾರಿನ ಕುಡಿ. ಈಗಾಗಲೇ ರಾಜಕೀಯ, ಸಾಮಾಜಿಕ ಸೇವೆಯಲ್ಲಿ ಸಮರ್ಥ್ ಶ್ಯಾಮನೂರು ತಮ್ಮನ್ನು ಈಗಾಗಲೇ ತೊಡಗಿಸಿಕೊಂಡಿದ್ದಾರೆ.
ಸಮರ್ಥ ಶ್ಯಾಮನೂರು ಪಾಸಿಟಿವ್ ಅಂಶಗಳೇನು ?
ಕುಟುಂಬ: ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಮತ್ತು ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರ.
ಶಿಕ್ಷಣ : ಸಮರ್ಥ್ ಈಗಾಗಲೇ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ (MBA ಪದವೀಧರರು). ಇದೇ ಕಾರಣದಿಂದಲೇ ಆಧುನಿಕ ಆಡಳಿತ ಜೊತೆಗೆ ನೂತನ ತಂತ್ರಜ್ಞಾನದ ಕುರಿತು ಅವರಿಗೆ ಉತ್ತಮ ಜ್ಞಾನವಿದೆ.
ಉದ್ಯಮ : ಶಾಮನೂರು ಕುಟುಂಬದ ಒಡೆತನದ ಸಕ್ಕರೆ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಉದ್ಯಮಗಳ ನಿರ್ವಹಣೆಯಲ್ಲಿ ಅವರು ಈಗಾಗಲೇ ಸಕ್ರಿಯರಾಗಿದ್ದಾರೆ.
ಸಾಂಸ್ಥಿಕ ಅನುಭವ: ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಗಿರುವ ಬಾಪೂಜಿ ವಿದ್ಯಾಸಂಸ್ಥೆಯ ನಿರ್ವಹಣೆ ಮಾಡ್ತಾ ಇರೋದು ಅವರಿಗೆ ಆಡಳಿತಾತ್ಮಕ ಅನುಭವವನ್ನು ನೀಡಿದೆ.
ಕ್ಷೇತ್ರದ ಪರಿಚಯ: ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ತಮ್ಮ ತಂದೆ ಮಲ್ಲಿಕಾರ್ಜುನ್ ಮತ್ತು ತಾಯಿ ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದಾರೆ. ಇದರಿಂದ ಕ್ಷೇತ್ರದ ಭೌಗೋಳಿಕತೆ ಮತ್ತು ಜನರ ಸಮಸ್ಯೆಗಳ ಬಗ್ಗೆ ಅವರಿಗೆ ಪ್ರತ್ಯಕ್ಷ ಅರಿವಿದೆ.
ಯುವ ನಾಯಕತ್ವ: ದಾವಣಗೆರೆಯಲ್ಲಿ ಯುವ ಮತದಾರರನ್ನು ಸೆಳೆಯಲು ಕಾಂಗ್ರೆಸ್‌ಗೆ ಇವರಂತಹ ಹೊಸ ಮುಖದ ಅವಶ್ಯಕತೆ ಇದೆ ಎಂಬುದು ಪಕ್ಷದ ಲೆಕ್ಕಾಚಾರ.
ಜನರ ಸಂಪರ್ಕ : ಶಾಮನೂರು ಶಿವಶಂಕರಪ್ಪ ಅವರ 50 ವರ್ಷಗಳ ಅನುಭವದ ಪರಂಪರೆಯ ಜೊತೆಗೆ, ತಂದೆ ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನ ಪ್ಲಸ್ ಪಾಯಿಂಟ್. ತಾಯಿ ಪ್ರಭಾ ಮಲ್ಲಿಕಾರ್ಜುನ್ ಕೂಡ ಈಗಾಗಲೇ ಸಂಸದರಾಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ. ಜನರ ಸಮಸ್ಯೆ ಅರಿತು ಜನರ ಸಂಪರ್ಕ ಪಡೆಯೋದು ಸುಲಭವಾಗಬಹುದು.
Also Read: ‘ಮಹಾತ್ಮ ಗಾಂಧೀಜಿಯವರನ್ನು ದುರ್ಬಳಕೆ ಮಾಡಿಕೊಂಡಿದ್ದೇ ಕಾಂಗ್ರೆಸ್’’ : ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ
ಸಮರ್ಥ ಶ್ಯಾಮನೂರು ನೆಗೆಟಿವ್ ಅಂಶಗಳೇನು ?
ಶಾಮನೂರು ಶಿವಶಂಕರಪ್ಪ ಅವರು ಸಾಮಾನ್ಯ ಜನರೊಂದಿಗೆ ಹೊಂದಿದ್ದ ನೇರ ಸಂಪರ್ಕ ಮತ್ತು ಭಾವನಾತ್ಮಕ ಬೆಸುಗೆಯನ್ನು ಸಮರ್ಥ್ ಹೇಗೆ ಗಳಿಸಿಕೊಳ್ಳುತ್ತಾರೆ ಅನ್ನೋದು ಅತೀ ಮುಖ್ಯ. ಮಾತ್ರವಲ್ಲ ‘ವಂಶಪಾರಂಪರ್ಯ’ ರಾಜಕಾರಣದ ಲೇಬಲ್ ದಾಟಿ, ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಅವರಿಗೆ ದೊಡ್ಡ ಸವಾಲು.



