Karnataka New CM: ರಾಜ್ಯದ 24ನೇ ಸಿಎಂ ಆಗಿ ಡಿಕೆ ಶಿವಕುಮಾರ್ ಪಟ್ಟಾಭಿಷೇಕ; ಯಾರಿಗೆ ಎಷ್ಟು ದಿನ ಸಿಎಂ ಪಟ್ಟ ಸಿಕ್ಕಿತ್ತು?

ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ ಪಕ್ಷದ ಟ್ರಬಲ್‌ ಶೂಟರ್‌ ಡಿಕೆ ಶಿವಕುಮಾರ್‌ ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಆಗಿದ್ದು, ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ ಪಕ್ಷದ ಟ್ರಬಲ್‌ ಶೂಟರ್‌ ಡಿಕೆ ಶಿವಕುಮಾರ್‌ ಅಧಿಕಾರ ಸ್ವೀಕರಿಸಿದ್ದಾರೆ. ಮೈಸೂರು ರಾಜ್ಯದಿಂದ ಹಿಡಿದು, ಇಂದಿನ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ಯಾವ ಮುಖ್ಯಮಂತ್ರಿಗಳು ಎಷ್ಟು ದಿನ ಅಧಿಕಾರ ನಡೆಸಿದ್ದಾರೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲಿ ಯಾರಿಗೆ ಎಷ್ಟು ದಿನ ಸಿಎಂ ಪಟ್ಟ ? ಅರ್ಧಕ್ಕೇ ಕುರ್ಚಿ ಕಳೆದುಕೊಂಡವರು ಯಾರು?

ಡಿಕೆ ಶಿವಕುಮಾರ್‌ ಅವರು ಇದೇ ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಿದ್ದರಾಮಯ್ಯ ಅವರ ನಂತರದಲ್ಲಿ ಕರ್ನಾಟಕದ ಸಿಎಂ ಆಗಿ ಆಯ್ಕೆಯಾದ ನಾಯಕ ಅನ್ನೋ ಖ್ಯಾತಿಗೆ ಡಿಕೆ ಶಿವಕುಮಾರ್‌ ಪಾತ್ರರಾಗಿದ್ದಾರೆ. ಮೈಸೂರು ಹಾಗೂ ಕರ್ನಾಟಕದಲ್ಲಿ ಹಲವು ಕಾಂಗ್ರೆಸ್‌ ನಾಯಕರು ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರೂ ಕೂಡ ಐದು ವರ್ಷ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿದ್ದು ಕೇವಲ ಮೂರು ಮಂದಿ ಮಾತ್ರ. ಡಿಕೆ ಶಿವಕುಮಾರ್‌ ಅವರಿಗೆ ಇನ್ನು ಉಳಿದಿರುವುದು ಕೇವಲ 2 ವರ್ಷ ಮಾತ್ರ.

ಕರ್ನಾಟಕವನ್ನು ಸುದೀರ್ಘ ಅವಧಿಯವರೆಗೆ ಆಳ್ವಿಕ ನಡೆಸಿದ ಮುಖ್ಯಮಂತ್ರಿಗಳ ಸಾಲಿನಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿ ನಿಂತಿದ್ದಾರೆ. ಸಿದ್ದರಾಮಯ್ಯ ಬರೋಬ್ಬರಿ 8 ವರ್ಷ 12 ದಿನಗಳು (ಒಟ್ಟು 2 ಅವಧಿ: 2013-18 ಮತ್ತು 2023-26). ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸು ಅವರ ದಾಖಲೆಯನ್ನು ಮುರಿದು ರಾಜ್ಯದ ಅತಿ ದೀರ್ಘಕಾಲದ ಸಿಎಂ ಎನಿಸಿಕೊಂಡಿದ್ದಾರೆ. ಡಿ. ದೇವರಾಜ ಅರಸು: 7 ವರ್ಷ 239 ದಿನಗಳು (ಒಟ್ಟು 2 ಅವಧಿಗಳು).

ನಂತರದ ಸ್ಥಾನದಲ್ಲಿ ಎಸ್. ನಿಜಲಿಂಗಪ್ಪ ಅವರು ನಿಲ್ಲುತ್ತಾರೆ. ಅವರು 7 ವರ್ಷ 11 ತಿಂಗಳು (ಒಟ್ಟು 4 ಪ್ರತ್ಯೇಕ ಅವಧಿಗಳು). ಜನತಾದಳದಿಂದ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರು 5 ವರ್ಷ 183 ದಿನಗಳು (3 ಪ್ರತ್ಯೇಕ ಅವಧಿಗಳು)ಗಳ ಆಡಳಿತ ನಡೆಸಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯ ಬಾವುಟ ಹಾರಿಸಿದ್ದ ಬಿ.ಎಸ್. ಯಡಿಯೂರಪ್ಪ 5 ವರ್ಷ 85 ದಿನಗಳು (4 ಪ್ರತ್ಯೇಕ ಅವಧಿಗಳು)ಗಳ ಕಾಲ ಆಡಳಿತ ನಡೆಸಿದ್ದಾರೆ. ಅತೀ ಹೆಚ್ಚು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆದ ಖ್ಯಾತಿಗೂ ಬಿಎಸ್‌ ಯಡಿಯೂರಪ್ಪ ಪಾತ್ರರಾಗಿದ್ದಾರೆ.

ಇನ್ನು ಕಾಂಗ್ರೆಸ್‌ನ ಎಸ್.ಎಂ. ಕೃಷ್ಣ ಅವರು4 ವರ್ಷ 230 ದಿನಗಳು (1999 – 2004 ಪೂರ್ಣಾವಧಿ). ಕೆ. ಚೆಂಗಲರಾಯ ರೆಡ್ಡಿ (ಕೆ.ಸಿ. ರೆಡ್ಡಿ) 4 ವರ್ಷ 156 ದಿನಗಳು (ಮೈಸೂರು ರಾಜ್ಯದ ಮೊದಲ ಸಿಎಂ). ಕೆಂಗಲ್ ಹನುಮಂತಯ್ಯ: 4 ವರ್ಷ 142 ದಿನಗಳು. ವೀರೇಂದ್ರ ಪಾಟೀಲ್: 3 ವರ್ಷ 291 ದಿನಗಳು (2 ಪ್ರತ್ಯೇಕ ಅವಧಿಗಳು). ಬಿ.ಡಿ. ಜತ್ತಿ: 3 ವರ್ಷ 297 ದಿನಗಳ ಕಾಲ ಅಧಿಕಾರ ನಡೆಸಿದ್ದಾರೆ.

ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ, ಆರಂಭದಲ್ಲಿ 20 ತಿಂಗಳ ಆಡಳಿತ ನಡೆಸಿದ್ದರು. ಒಟ್ಟು 3 ವರ್ಷ 71 ದಿನಗಳು (2 ಪ್ರತ್ಯೇಕ ಅವಧಿಗಳು). ಜೆ.ಎಚ್. ಪಟೇಲ್ 3 ವರ್ಷ 129 ದಿನಗಳು. ಆರ್. ಗುಂಡೂರಾವ್: 2 ವರ್ಷ 359 ದಿನಗಳು. ಸರೆಕೊಪ್ಪ ಬಂಗಾರಪ್ಪ: 2 ವರ್ಷ 33 ದಿನಗಳ ಕಾಲ ಕರ್ನಾಟಕದಲ್ಲಿ ಆಳ್ವಿಕೆ ನಡೆಸಿದ್ದಾರೆ.

ಇನ್ನು ಕರಾವಳಿಯ ಹಿರಿಯ ಕಾಂಗ್ರೆಸ್‌ ನಾಯಕರಾದ ಎಂ. ವೀರಪ್ಪ ಮೊಯ್ಲಿ 2 ವರ್ಷ 22 ದಿನಗಳು. ಬಸವರಾಜ ಬೊಮ್ಮಾಯಿ 1 ವರ್ಷ 289 ದಿನಗಳು. ಧರಂ ಸಿಂಗ್ 1 ವರ್ಷ 250 ದಿನಗಳು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು 1 ವರ್ಷ 172 ದಿನಗಳು. ಡಿ.ವಿ. ಸದಾನಂದ ಗೌಡ 341 ದಿನ , ಜಗದೀಶ್ ಶೆಟ್ಟರ್: 304 ದಿನ. ಎಸ್.ಆರ್. ಬೊಮ್ಮಾಯಿ 251 ದಿನಗಳು. ಎಸ್.ಆರ್. ಕಂಠಿ: 98 ದಿನಗಳು. ಕಡಿದಾಳ್ ಮಂಜಪ್ಪ: 73 ದಿನ ಹಾಗೂ ಡಿ.ಕೆ. ಶಿವಕುಮಾರ್ ಜೂನ್ 3, 2026 ರಿಂದ ಅಧಿಕಾರ ಆರಂಭಿಸಿದ್ದಾರೆ.

ಪೂರ್ಣಾವಧಿ ಮುಗಿಸಿದ ಕರ್ನಾಟಕದ ಸಿಎಂಗಳು ಕೇವಲ ಮೂವರೇ

ಕರ್ನಾಟಕದ ಇತಿಹಾಸದಲ್ಲಿ ಮಧ್ಯದಲ್ಲಿ ಯಾವುದೇ ಅಡೆತಡೆ ಇಲ್ಲದೆ ಸತತ 5 ವರ್ಷಗಳ ಪೂರ್ಣಾವಧಿ ಆಡಳಿತ ಮುಗಿಸಿದ್ದು ಕೇವಲ ಮೂವರು ಮಾತ್ರ. ಅವರುಗಳೆಂದರೆ ಎಸ್. ನಿಜಲಿಂಗಪ್ಪ (1962-68), ಡಿ. ದೇವರಾಜ ಅರಸು (1972-77), ಮತ್ತು ಸಿದ್ದರಾಮಯ್ಯ (2013-18).

ಅತಿ ಕಡಿಮೆ ಅವಧಿಯ ಕರ್ನಾಕಟ ಸಿಎಂ ಯಾರು ?

ಕರ್ನಾಟಕದಲ್ಲಿ ಅತಿ ಕಡಿಮೆ ಅವಧಿಗೆ ಸಿಎಂ ಆಗಿದ್ದು ಬಿ.ಎಸ್. ಯಡಿಯೂರಪ್ಪ. ಅವರು 2018 ರ ಮೇ ತಿಂಗಳಲ್ಲಿ ಕೇವಲ 55 ಗಂಟೆಗಳ ಕಾಲ (ಬೆಳಗ್ಗೆಯಿಂದ ಮುಂದಿನ ಎರಡು ದಿನ) ಸಿಎಂ ಆಗಿ ಬಹುಮತ ಸಾಬೀತುಪಡಿಸಲಾಗದೆ ರಾಜೀನಾಮೆ ನೀಡಿದ್ದರು. ಅದಕ್ಕೂ ಮುನ್ನ 2007 ರಲ್ಲಿ ಮೈತ್ರಿ ಮುರಿದುಬಿದ್ದಾಗ ಕೇವಲ 8 ದಿನ ಸಿಎಂ ಆಗಿದ್ದರು. ನಾಯಕತ್ವ ಬದಲಾವಣೆ ಒಪ್ಪಂದ (Power Sharing):ಕರ್ನಾಟಕದಲ್ಲಿ ಮೈತ್ರಿ ಸರ್ಕಾರಗಳಿದ್ದಾಗ ಅಥವಾ ಆಂತರಿಕ ಒಪ್ಪಂದಗಳಿದ್ದಾಗ ಅವಧಿಗೂ ಮುನ್ನವೇ ಸಿಎಂ ಬದಲಾದ ಹತ್ತಾರು ಉದಾಹರಣೆಗಳಿವೆ. ಈಗಿನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಹಂಚಿಕೆಯೂ ಸಹ ಹೈಕಮಾಂಡ್‌ನ ಅಲಿಖಿತ 2.5 ವರ್ಷಗಳ ಒಪ್ಪಂದದ ಭಾಗವಾಗಿಯೇ ನಡೆದಿದೆ ಎನ್ನಲಾಗುತ್ತಿದೆ.

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories