ಬಿಹಾರದಲ್ಲಿ ಕಾಂಗ್ರೆಸ್ಗೆ ಸೋಲಿನ ಕಹಿ ; ರಾಜ್ಯದಲ್ಲಿ ‘ನವೆಂಬರ್ ಕ್ರಾಂತಿ’ಗೆ ತಿಲಾಂಜಲಿ
ಬಿಹಾರದಲ್ಲಿ ಗೆಲುವಿನ ಕನಸು ಕಾಣುತ್ತಿದ್ದ ಕಾಂಗ್ರೆಸ್, ಬಿಜೆಪಿ ಹವಾ ಎದುರು ಧೂಳೀಪಟವಾಗಿದೆ. ಬಿಹಾರ ಚುನಾವಣೆಯ ಬಳಿಕ ರಾಜ್ಯದಲ್ಲಿ ಅಧಿಕಾರ ಬದಲಾವಣೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ನವೆಂಬರ್ ಕ್ರಾಂತಿಗೆ ಕಾಂಗ್ರೆಸ್ ಹೈಕಮಾಂಡ್ ಬೀಗ ಹಾಕಿ ಸೈಲೆಂಟ್ ಆಗಿ ಕುಳಿತಿದೆ ಎನ್ನಲಾಗಿದೆ.
ಕರ್ನಾಟಕ ಮಾದರಿಯಲ್ಲಿಯೇ ಗ್ಯಾರಂಟಿ ಯೋಜನೆಗಳ ಮೂಲಕವೇ ಗೆಲ್ಲಬಹುದು ಎಂದು ಕಾಂಗ್ರೆಸ್ ನಿರೀಕ್ಷಿಸಿತ್ತು. ಆದರೆ ಈ ಬಾರಿ ಬಿಹಾರದಲ್ಲಿ ಜಾತಿ ಸಮೀಕರಣ ವರ್ಕ್ ಆಗಿದೆ. ಯಾವ ಕ್ಷೇತ್ರದಲ್ಲಿ ಯಾವ ಸಮುದಾಯ ಜಾಸ್ತಿ ಪ್ರಮಾಣದಲ್ಲಿದೆ ಎಂದು ಅಳೆದು ತೂಗಿ ಈ ಬಾರಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಮೋದಿ ಮೋಡಿ, ನಿತೀಶ್ ಕುಮಾರ್ ಪ್ರಭಾವದ ಮುಂದೆ ಮಹಾಘಟಬಂಧನ್ ಮಂಡಿಯೂರಿದೆ.
ಬಿಹಾರ ಚುನಾವಣೆಯ ಗೆಲುವಿನ ಬಳಿಕ ರಾಜ್ಯದಲ್ಲಿ ಸಿಎಂ ಸ್ಥಾನ ಡಿ.ಕೆ ಶಿವಕುಮಾರ್ ಪಾಲಾಗುತ್ತೆ, ಸಂಪುಟ ಪುನರ್ರಚನೆಯಾಗುತ್ತೆ ಎಂದೆಲ್ಲ ಹೇಳಲಾಗಿತ್ತು. ಆದರೆ ಬಿಹಾರದಲ್ಲಿ ಡಬಲ್ ಡಿಜಿಟ್ ತಲುಪಲೂ ಸಾಧ್ಯವಾಗದೇ ಮುಗ್ಗರಿಸಿದ ಕಾಂಗ್ರೆಸ್, ಕರ್ನಾಟಕದಲ್ಲಿ ಹೊಸ ಪ್ರಯೋಗಕ್ಕೆ ಇಳಿಯುವ ಸಾಹಸ ಸದ್ಯ ಬೇಡ ಎಂದು ನಿರ್ಧರಿಸಿದೆ.
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯನ್ನೂ ಎಐಸಿಸಿ ಮಾಡಬೇಕಿತ್ತು. ಆದರೆ ಇದೀಗ ಸೋಲಿನ ಕಹಿ ಬಳಿಕ ರಾಜ್ಯದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಹೈಕಮಾಂಡ್ ನಿರ್ಧರಿಸಿದೆ. ಹೈಕಮಾಂಡ್ನ ಈ ನಿರ್ಧಾರ ಅನೇಕ ಕಾಂಗ್ರೆಸ್ ನಾಯಕರಿಗೆ ನಿರಾಶೆ ಮೂಡಿಸಿದೆ.
ಇದನ್ನೂ ಓದಿ: Separate State: ಕರ್ನಾಟಕ ವಿಭಜನೆಗೆ ಕಾಂಗ್ರೆಸ್ ಶಾಸಕರ ಬೆಂಬಲ; ಸಿಎಂಗೆ ಪತ್ರ
ಮೂಲಗಳ ಪ್ರಕಾರ ಬಿಹಾರ ಚುನಾವಣೆ ಗೆಲ್ಲಿಸಿಕೊಡುವ ಟಾಸ್ಕ್ನ್ನು ಡಿಸಿಎಂ ಡಿ.ಕೆ ಶಿವಕುಮಾರ್ಗೂ ನೀಡಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಾಸ್ತವ್ಯ ಹೂಡಿರುವ ಬಿಹಾರದ ಜನತೆಯ ವಿಶ್ವಾಸ ಗಳಿಸಲು ಡಿಕೆಶಿ ಕಸರತ್ತು ಮಾಡಿದ್ದರು. ನೀವು ಅಲ್ಲಿ ನಮ್ಮನ್ನು ಗೆಲ್ಲಿಸಿದರೆ ಇಲ್ಲಿ ನಾನು ಗೆಲ್ಲುತ್ತೇನೆ ಎಂಬರ್ಥದಲ್ಲಿಯೇ ಮಾತನಾಡಿದ್ದರು. ಆದರೆ ಬಿಹಾರದಲ್ಲಿ ಹೀನಾಯ ಸೋಲಿನ ಬಳಿಕ ಡಿ.ಕೆ ಶಿವಕುಮಾರ್ ಸಿಎಂ ಖುರ್ಚಿಯ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆಗಳು ದಟ್ಟವಾಗಿದೆ.



