ರಾಜಕೀಯ ‘ಬೆಂಕಿ’ ಯ ಹಿಂದೆ ಸಾಹುಕಾರ್ – ಕತ್ತಿ

ಬೆಂಗಳೂರು : ಮತ್ತೊಮ್ಮೆ ಮುಖ್ಯಮಂತ್ರಿ ಸುದ್ದಿಯಲ್ಲಿದ್ದಾರೆ. ಈ ಬಾರಿ ಎರಡು ವಿಷಯಗಳಿಗೆ ಅವರು ಕುತೂಹಲದ ಕೇಂದ್ರಬಿಂದುವಾಗಿರುವುದು ವಿಶೇಷ.ಈಗಾಗಲೇ ಪಂಚಮಸಾಲಿ ಶ್ರೀಗಳು ಮೀಸಲು ಹಕ್ಕೊತ್ತಾಯಕ್ಕೆ ಕಾಲ್ನಡಿಗೆ ಜಾಥಾ ಮಾಡಿದ್ದು ಒಂದು. ಎರಡನೆಯದು; ಯತ್ನಾಳ್ ಅವರ ಬೆಂಕಿಯ ಮಾತುಗಳಿಂದಾಗಿ ಮುಖ್ಯಮಂತ್ರಿ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವುದು ಗುಟ್ಟಿನ ವಿಷಯವಲ್ಲ. ಇದೆಲ್ಲದರ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿರುವುದು ಕುತೂಹಲ ಕೆರಳಿಸಿದೆ. ಭಾರತೀಯ ಜನತಾ ಪಾರ್ಟಿಯಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿಗೂ ಕಾರಣವಾಗಿದ್ದು ಇಲ್ಲಿ ಸ್ಮರಣೀಯ.

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಮೀಸಲು ವಿಷಯ ಮತ್ತು ಒಳಗೊಳಗೇ ಎದ್ದಿರುವ ಅಂತಃಕಲಹವನ್ನು ದಿಲ್ಲಿಯ ಹೈಕಮಾಂಡ್ ಬಹಳ ಗಂಭೀರವಾಗಿ ಅವಲೋಕಿಸುತ್ತಿರುವುದನ್ನು ಬಿಜೆಪಿಯ ಮೂಲಗಳೇ ದೃಢಪಡಿಸಿವೆ. ಕಳೆದ ಹಲವು ದಿನಗಳಿಂದ ರಾಜ್ಯದ ವಿದ್ಯಾಮಾನವನ್ನು ದಿಲ್ಲಿಯ ವರಿಷ್ಠರಿಗೆ ಮುಟ್ಟಿಸುವ ಕಾರ್ಯವನ್ನು ಬಹಳ ಶಿಸ್ತಿನಿಂದ ಪಕ್ಷದ ಮುಖಂಡರೊಬ್ಬರು ಮಾಡುತ್ತಿದ್ದರು. ವಿಷಯ ಅದಲ್ಲ; ಇಂದು (ಫೆ.12/21) ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರನ್ನು ದಿಲ್ಲಿಯ ವರಿಷ್ಠರು ಕರೆಸಿಕೊಂಡಿರುವುದು ರಾಜ್ಯ ರಾಜಕೀಯ ವಲಯಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಿದೆ. ಯಾವ ಕಾರಣಕ್ಕೆ ಅವರನ್ನು ದಿಲ್ಲಿಗೆ ದಿಢೀರ್‌ನೆ ಕರೆಸಿಕೊಂಡಿರಬಹುದು ? ತೀರಾ ವೈಯಕ್ತಿಕ ವಿಷಯಕ್ಕೆ ಅವರಿಗೆ ಆಹ್ವಾನಿಸಿರಬಹುದೆ? ಇದೆಲ್ಲಕ್ಕಿಂತ ಪ್ರಮುಖವಾಗಿ ರಾಜ್ಯ ರಾಜಕಾರಣದ ಸ್ಪಷ್ಟ ಚಿತ್ರಣ ಪಡೆಯುವುದಕ್ಕಾಗಿ ಡಿಸಿಎಂ ಅವರಿಗೆ ಬುಲಾವ್ ಬಂದಿರಬಹುದೆ..? ಇಂತಹ ಅನೇಕ ಪ್ರಶ್ನೆಗಳು ವಿಧಾನ ಸೌಧದ ಮೊಗಸಾಲೆಯಲ್ಲಿ ಹರಿದಾಡತೊಡಗಿವೆ. ಉತ್ತರವೂ ಅಸ್ಪಷ್ಟವಾಗಿದ್ದು, ಅವರವರ ಚಿಂತನೆಗೆ, ಅವರವರ ಭಾವಕ್ಕೆ ತಕ್ಕಂತೆ ಹೊರ ಹೊಮ್ಮತೊಡಗಿದ್ದು ಸಹಜ.

ಇದರ ನಡು ನಡುವೆ ಪಂಚಮ ಸಾಲಿ ಹೋರಾಟಕುರಿತು ಹಲವು ಕೌತುಕ ವಿಷಯಗಳೂ ಚರ್ಚೆಗೆ ಗ್ರಾಸವೊದಗಿಸಿವೆ. ಪಂಚಮ ಸಾಲಿ ಹೋರಾಟಕ್ಕೆ ಪರ್ಯಾವಾಗಿ ವೀರಶೈವ ಸಮುದಾಯ ಬೃಹತ್ ಸಮಾವೇಶ ನಡೆಸುತ್ತಿದೆ. ಇದರ ಹಿಂದೆ ಮುಖ್ಯಮಂತ್ರಿ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ಮಾಸ್ಟರ್ ಪ್ಲಾನ್ ಇದೆ ಎನ್ನುವ ಆರೋಪವೂ ಹರಿದಾಡಿತ್ತು. ಆಗುವ ಅಪಾಯ ತಪ್ಪಿಸಲು ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಒಂದು ದಿಟ್ಟ ನಿರ್ಧಾರ ಪ್ರಕಟಿಸಿದರು. ಪಂಚಮಸಾಲಿ ಸಮುದಾಯದ ಹೋರಾಟದ ದಿಕ್ಕು ತಪ್ಪಿಸಲು ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರ ಸಭೆ ಬಗ್ಗೆ ಅಪಪ್ರಚಾರ ನಡೆಸುತ್ತಿದ್ದು, ಇದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಪಂಚಮಸಾಲಿ ಸಮುದಾಯದ ಬೇಡಿಕೆಗೆ ನಮ್ಮ ಸಹಮತವಿದೆ. ಈ ಹಿಂದೆ, ಈಗ, ಮುಂದೆಯೂ ವೀರಶೈವ ಲಿಂಗಾಯತ ಮಠಾಧೀಶರು ಪಂಚಮಸಾಲಿ ಪರ ಇದ್ದೇವೆ. ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ನಿಲುವೇ ನಮ್ಮ ನಿಲುವು. ಒಬಿಸಿ ಪಟ್ಟಿಗೆ ನಮ್ಮ ಸಮುದಾಯವನ್ನು ಸೇರಿಸುವ ಹೋರಾಟದ ದಾರಿ ತಪ್ಪಿಸಲು ಹೀಗೆ ಅಪಪ್ರಚಾರ ನಡೆಯುತ್ತಿದೆ ಎನ್ನುವ ಮೂಲಕ ಒಗ್ಗಟ್ಟಿನ ಮಂತ್ರ ಬೋಧಿಸಿದ್ದು ಹೋರಾಟಕ್ಕೆ ಗಾಂಭಿರ್ಯ ಮೂಡಿಸಿದೆ.

ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಅವರೂ ಇದಕ್ಕೆ ದನಿ ಗೂಡಿಸಿ, ಇದು ಹೋರಾಟ ಅಲ್ಲ, ಹಕ್ಕೊತ್ತಾಯ. ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎನ್ನುವುದು ನಮ್ಮ ಬೇಡಿಕೆ. ಪಂಚಮಸಾಲಿ ಸಮುದಾಯದ ಸ್ವಾಮೀಜಿ ಜೊತೆಗೆ ಮಾತಾಡಿದ್ದೇವೆ. ಇಂದಿನದ್ದು ದಿಕ್ಕು ತಪ್ಪಿಸುವ ಕಾರ್ಯಕ್ರಮ ಅಲ್ಲ. ಒಟ್ಟಿಗೆ ಹೋಗುವ ಕಾರ್ಯಕ್ರಮ. ನಾವು ಒಟ್ಟಿಗೆ ಹೋಗುತ್ತಿದ್ದೇವೆ, ನಾವು ಅವರ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದೇವೆ. ಪರಮಪೂಜ್ಯರ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಘೋಷಿಸಿದ್ದು ಉಲ್ಲೇಖ ನೀಯ. ಈ ಎಲ್ಲಾ ಬೆಳವಣಿಗೆ ನಡೆಯುತ್ತಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ನಾಯಕತ್ವದ ಬಗ್ಗೆಯೇ..!

ಆರಂಭದಿಂದಲೂ ಒಂದಿಲ್ಲ ಒಂದು ಕಾರಣಕ್ಕೆ ಯಡಿಯೂರಪ್ಪ ಅವರ ವಿರುದ್ಧವೇ ಬೆಂಕಿ ಬಿರುಗಾಳಿ ಎಬ್ಬಿಸುತ್ತಿರುವ ಬಸವನಗೌಡ ಪಾಟಿಲ್ ಯತ್ನಾಳ್ ಅವರ ಎಲ್ಲಾ ವೈರುಧ್ಯಗಳನ್ನು ಸಂಯಮದಿಂದಲೇ ಗಮನಿಸುತ್ತಿದ್ದ ದಿಲ್ಲಿಯ ವರಿಷ್ಠರು, ತುಟಿಪಿಟಿಕ್ ಅನ್ನದೆ ಸಹಿಸಿಕೊಂಡಿದ್ದರು. ಇವರ ಸಂಯಮ, ಸಹನೆ ಕಂಡ ರಾಜ್ಯದ ಜನತೆ, ಹೈಕಮಾಂಡ್ ಯತ್ನಾಳ್ ಪರ ಇದೆ ಅನ್ನುವಷ್ಟು ಗುಮಾನಿ ಹುಟ್ಟಿಸಿದ್ದು ಸತ್ಯ. ಇದನ್ನೇ ಸದ್ಬಳಕೆ ಮಾಡಿಕೊಂಡ ಯತ್ನಾಳ್ ಅವರು ಮತ್ತೊಮ್ಮೆ, ಮಗದೊಮ್ಮೆ ಅದೇ ಫೈರ್ ಬ್ರಾಂಡ್ ಥರ ಯಡಿಯೂರಪ್ಪ ವಿರುದ್ಧ ‘ಸುಪ್ರಭಾತ’ ಶುರುವಿಟ್ಟಿದ್ದರಿಂದ ನಾಡಿನ ಜನರಿಗೆ ಪುಕ್ಕಟೆ ರಂಜನೆಯಾಗಿದ್ದನ್ನು ಅರಿತ ದಿಲ್ಲಿಯ ವರಿಷ್ಠರು, ಶಿಸ್ತು ಸಮಿತಿಯ ಮೂಲಕ ಯತ್ನಾಳ್ ಅವರಿಗೆ ಕಾರಣ ಕೇಳಿ ಶೋಕಾಸ್ ಜಾರಿಮಾಡಿದ್ದೂ, ಆನಂತರ ಅದೇ ಯತ್ನಾಳ್ ‘ನಾ ಅಂಜುವ ಗಂಡಲ್ಲ’ಅಂತ ಟಾಂಗ್ ಕೊಟ್ಟಿದ್ದು ಇಲ್ಲಿ ವಿಶೇಷವಲ್ಲ. ಇದೇ ಫೈರ್ ಬ್ರಾಂಡ್ ಶಾಸಕ ಯತ್ನಾಳ್ ಪರ ಪ್ರಭಾವಿ ಸಚಿವರು ಬ್ಯಾಟ್ ಮಾಡಿದ್ದು ಮತ್ತೊಮ್ಮೆ ಕುತೂಹಲದ ಕಟ್ಟೆಯೊಡೆಯಲು ಕಾರಣ..! ಅಂದರೆ ಸಿಎಂ ಯಡಿಯೂರಪ್ಪ ಹಾಗೂ ಅವರ ನಾಯಕತ್ವದ ವಿರುದ್ಧ ಪದೇ ಪದೆ ಧ್ವನಿ ಎತ್ತುತ್ತಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಬೆಳಗಾವಿಯ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಉಮೇಶ್ ಕತ್ತಿ ಮಾತನಾಡಿರುವುದು ಚಿಂತನೆಗೆ ಹಚ್ಚಿದೆ. ರಾಜ್ಯರಾಜಕೀಯ ದ್ರುವೀಕರಣಕ್ಕೆ ನಾಂದಿ..? ಉತ್ತರವೂ ಅಷ್ಟೇ ಅಸ್ಪಷ್ಟ.

ಬೆಳಗಾವಿಯಲ್ಲಿ ಈ ಉಭಯ ಸಚಿವರು ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ. ಯತ್ನಾಳ್ ನನ್ನ ಸ್ನೇಹಿತ, ತಿಳಿಸಿ ಹೇಳುತ್ತೇವೆ. ಸಮಾಜದ ಬಗ್ಗೆ ಮಾತನಾಡೋದು ತಪ್ಪಲ್ಲ. ಇತಿಮಿತಿಯಲ್ಲಿ ಮಾತನಾಡಿ ಅಂತಾ ಮನವಿ ಮಾಡುತ್ತೇವೆ ಎಂದವರು ಸಚಿವ ರಮೇಶ್ ಜಾರಕಿಹೊಳಿ. ಬಸನಗೌಡ ಪಾಟೀಲ್ ಯತ್ನಾಳ್ ಸೀನಿಯರ್ ಇದ್ದಾರೆ. ಪ್ರಮುಖ ಸಮಾಜದ ಶಾಸಕರಾಗಿದ್ದಾರೆ. ಯತ್ನಾಳ್ ಒಳ್ಳೆಯ ಮಿತ್ರ, ಮುಂದೆ ಒಳ್ಳೆಯ ಭವಿಷ್ಯ ಇದೆ. ಸಮಾಜಕ್ಕಾಗಿ ಹೋರಾಟ ಮಾಡಲಿ ಎನ್ನುವ ರಮೇಶ್ ಜಾರಕಿಹೊಳಿ ಅವರ ಹೇಳಿಕೆ, ಬಿಜೆಪಿಯಲ್ಲಿ ಅಚ್ಚರಿಗೆ ಕಾರಣ. ಇನ್ನು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಉಮೇಶ ಕತ್ತಿ ಕೂಡಾ ವಿಜಯಪುರ ಶಾಸಕ ಯತ್ನಾಳ್ ಜೈ ಎಂದಿರುವುದು ರಾಜಕೀಯ ಚಿಂತಕರ ಹುಬ್ಬೇರುವಂತೆ ಮಾಡಿದೆ. ರಮೇಶ್ ಜಾರಕಿಹೊಳಿ, ಯತ್ನಾಳ್ ನಾವೆಲ್ಲಾ ಸ್ನೇಹಿತರು.

ಪಕ್ಷ ನೀಡಿರುವ ಶೋಕಾಸ್ ನೋಟಿಸ್‌ಗೆ ಲವ್ ಲೆಟರ್. ನೋಟೀಸ್ ಬರುತ್ತವೆ. ಲವ್ ಲೆಟರ್ ಬೇಡ ಅಂದ್ರೂ ಬರ್ತಿರುತ್ತವೆ. ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷ ವಿರೋಧಿ ಮಾಡುತ್ತಿಲ್ಲ. ಮಂತ್ರಿಯಾಗಿದ್ದರೂ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದಾಗ ಪ್ರತಿಭಟಿಸುತ್ತೇವೆ. ಅನ್ಯಾಯವಾದಾಗ ನಾನು ಪ್ರತಿಭಟನೆ ಮಾಡುವುದನ್ನು ಬಿಡಲ್ಲ ಹಾಗಂತ ಸ್ಪಷ್ಟೀಕರಣ ನೀಡುವ ಶೈಲಿಯಲ್ಲಿ ಹೇಳಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಉರಿಯುತ್ತಿರುವ ಸಮಯವಿದು. ಬೆಂಕಿಗೆ ತುಪ್ಪ ಹಾಕುತ್ತಿದ್ದರೆ ಜ್ವಾಲೆ ಏಳದೇ ಇರದು. ಇದನ್ನೆಲ್ಲಾ ಕಂಡೂ ಸುಮ್ಮನೆ ಕೂಡವ ಜಾಯಮಾನ ಮುಖ್ಯಮಂತ್ರಿ ಅವರದ್ದಲ್ಲ. ತಂತ್ರಕ್ಕೆ, ವಿರೋಧಿಗಳ ಷಡ್ಯಂತ್ರಕ್ಕೆ ಯಡಿಯೂರಪ್ಪ ‘ಮಂತ್ರ’ ರೆಡಿಮಾಡದೇ ಇರುವುದಿಲ್ಲ. ಅದನ್ನು ಬಿಡಿಸಿ ಹೇಳುವ ಅಗತ್ಯ ಇಲ್ಲ ಅಲ್ಲವೇ..?

ವರ್ತಮಾನದ ಒಗಟು: ಪರಿವರ್ತನೆ ಜಗದ ನಿಯಮ, ನಿಜ. ಆದರೆ ಬದಲಾವಣೆ ಎಲ್ಲಿ, ಯಾಕೆ ಆಯಿತು ಅನ್ನುವುದು ವರ್ತಮಾನದ ಮಹತ್ವಕ್ಕೆ ಸಾಕ್ಷಿ.

Comments are closed.