ತಮಿಳುನಾಡು ವಿಧಾನಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಪಟ್ಟಿ ಪ್ರಕಟ : ಅಣ್ಣಾಮಲೈಗೆ ಕೊಕ್
ತಮಿಳುನಾಡು ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಏಪ್ರಿಲ್ 23ರಂದು ತಮಿಳುನಾಡು ರಾಜ್ಯದ್ಯಂತ ಒಂದೇ ಹಂತದ ಚುನಾವಣೆ ಪ್ರಕ್ರಿಯೆ ನಡೆಯಲಿದ್ದು, ಬಿಜೆಪಿಯು ಎಲ್ಲಾ 27 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆಮಾಡಿದೆ. ಆದರೆ ಈ ಪಟ್ಟಿಯಲ್ಲಿ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಿಂಗಂ ಖ್ಯಾತಿಯ ಮಾಜಿ ಕಾಪ್ ಅಣ್ಣಾಮಲೈ (Annamalai) ಹೆಸರನ್ನು ಕೈಬಿಟ್ಟಿದೆ.
ತಮಿಳುನಾಡಿನಲ್ಲಿ ಎಐಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಒಟ್ಟೂ 234 ಕ್ಷೇತ್ರಗಳ ಪೈಕಿ 169 ಕಡೆಗಳಲ್ಲಿ ಎಐಡಿಎಂಕೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಈ ಎನ್ಡಿಎ ಮೈತ್ರಿಕೂಟದ ಇತರೆ ಪಕ್ಷಗಳಾದ ಪಟ್ಟಲಿ ಮಕ್ಕಳ್ ಕಚ್ಚಿ 18, ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ 11, ತಮಿಳ್ ಮಾನಿಳ ಕಾಂಗ್ರೆಸ್ 5, ಮತ್ತು ಇಂಡಿಯಾ ಜನನಾಯಗನ್ ಕಚ್ಚಿ (ಹಾಗೂ ಪುರಚ್ಚಿ ಭರತಂ ತಲಾ 1 ಕ್ಷೇತ್ರದಲ್ಲಿ ಸ್ಪರ್ಧಿಸಲಿವೆ.
ಇದನ್ನೂ ಓದಿ: ಆಟಕ್ಕುಂಟು ಲೆಕ್ಕವಿಲ್ಲದಂತಾಗುವತ್ತ ಹಿಂದಿ ಭಾಷೆ: ಗ್ರೇಡಿಂಗ್ ನೀತಿ ಮರುಪರಿಶೀಲಿಸಿ ಎಂದ ರಾಜ್ಯಪಾಲರು
ಇನ್ನು ಎಐಡಿಎಂಕೆ ಜೊತೆ ಬಿಜೆಪಿ ಮೈತ್ರಿ ಬಳಿಕ ಪಕ್ಷದೊಂದಿಗೆ ಅಂತರ ಕಾಯ್ದುಕೊಂಡು ಬರುತ್ತಿದ್ದ ಅಣ್ಣಾಮಲೈ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಅಣ್ಣಾಮಲೈ ಅವರ ಮನವೊಲಿಸುವ ಕನಿಷ್ಠ ಪ್ರಯತ್ನವನ್ನೂ ಮಾಡದ ಬಿಜೆಪಿ, ಅವರ ಹೆಸರು ಕೈಬಿಟ್ಟು ಅಭ್ಯರ್ಥಿಗಳ ಪಟ್ಟಿ ಘೋಷಿಸಿರುವುದು ಅಚ್ಚರಿ ಮೂಡಿಸಿದೆ.
ಅಣ್ಣಾಡಿಎಂಕೆಯೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಮುಂದಾದ ಸಂದರ್ಭದಲ್ಲಿಯೇ ಎಐಡಿಎಂಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಅಣ್ಣಾಮಲೈ ಅವರನ್ನು ಕೆಳಗಿಳಿಸಬೇಕೆಂಬ ಷರತ್ತು ವಿಧಿಸಿತ್ತು. ಅಂತೆಯೇ ಅಣ್ಣಾಮಲೈ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ತೊರೆದಿದ್ದರು. ಇದಾದ ಬಳಿಕ ಪಕ್ಷದೊಂದಿಗೆ ಅಂತರ ಕಾಯ್ದುಕೊಂಡೇ ಬಂದಿದ್ದ ಅಣ್ಣಾಮಲೈ, ಇತ್ತೀಚಿಗೆ ಕೊಯಮತ್ತೂರಿಗೆ ಪ್ರಧಾನಿ ಮೋದಿ ಆಗಮಿಸಿದ್ದ ಸಂದರ್ಭದಲ್ಲಿಯೂ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದೀಗ ಚುನಾವಣೆಯ ಕಣದಿಂದಲೂ ದೂರ ಸರಿದಿರುವ ಅಣ್ಣಾಮಲೈ ರಾಜಕೀಯ ಜೀವನದಿಂದ ದೂರ ಸರಿಯುವ ಯೋಚನೆಯಲ್ಲಿದ್ದಾರಾ ಎಂಬ ಅನುಮಾನ ಮೂಡಿದೆ.



