ಆಟಕ್ಕುಂಟು ಲೆಕ್ಕವಿಲ್ಲದಂತಾಗುವತ್ತ ಹಿಂದಿ ಭಾಷೆ: ಗ್ರೇಡಿಂಗ್ ನೀತಿ ಮರುಪರಿಶೀಲಿಸಿ ಎಂದ ರಾಜ್ಯಪಾಲರು
ರಾಜ್ಯದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯನ್ನು (SSLC Hindi Third Language) ಕೇವಲ ಗ್ರೇಡಿಂಗ್ಗೆ ಸೀಮಿತಗೊಳಿಸಬೇಕು ಎಂದುಕೊಂಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಸಲಹೆ ನೀಡಿದ್ದಾರೆ. ಶಿಕ್ಷಣ ಇಲಾಖೆ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ರಾಜ್ಯಪಾಲರ ಸೂಚನೆಯ ಮೇರೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನ ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘಟನೆಯವರು ರಾಜ್ಯಪಾಲರಿಗೆ ಮನವಿ ಪತ್ರ ನೀಡಿದ್ದು, ಇದನ್ನು ಆಧರಿಸಿ ಸರ್ಕಾರಕ್ಕೆ ರಾಜ್ಯಪಾಲರ ಕಚೇರಿಯಿಂದ ಪತ್ರ ಕಳುಹಿಸಲಾಗಿದೆ.
ರಾಜ್ಯಪಾಲರಿಗೆ ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘಟನೆ ನೀಡಿದ ಪತ್ರದಲ್ಲಿ ತೃತೀಯ ಭಾಷೆಗಳಿಂದ ವಿದ್ಯಾರ್ಥಿಗಳಲ್ಲಿ ಭಾಷಾ ವೈವಿಧ್ಯತೆ ಹೆಚ್ಚುತ್ತದೆ. ಮಕ್ಕಳ ಬೌದ್ಧಿಕ ಬೆಳವಣಿಗೆ ಸುಧಾರಿಸುವುದರಲ್ಲಿ ಭಾಷೆಗಳ ಕಲಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೇ ತೃತೀಯ ಭಾಷೆಗಳಿಗೆ ಕೇವಲ ಗ್ರೇಡಿಂಗ್ ನೀಡುವುದರಿಂದ ವಿದ್ಯಾರ್ಥಿಗಳು ಆ ಭಾಷೆಯನ್ನು ಗಂಭೀರವಾಗಿ ಪರಿಗಣಿಸದೇ ಹೋಗಬಹುದು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಮೌಲ್ಯಮಾಪಕರಿಗೆ ಗುಡ್ನ್ಯೂಸ್..! ಗೌರವ ಸಂಭಾವನೆ ಹೆಚ್ಚಿಸಿದ ರಾಜ್ಯ ಸರ್ಕಾರ
ಈ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ರಾಜ್ಯ ಪಾಲರು, ಸರ್ಕಾರಕ್ಕೆ ಪತ್ರದ ಮುಖೇನ ಮತ್ತೊಮ್ಮೆ ತಮ್ಮ ನಿರ್ಧಾರ ಮರುಪರಿಶೀಲಿಸುವಂತೆ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಮಗ್ರವಾದ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು.ವಿದ್ಯಾರ್ಥಿಗಳ ಹಿತಾಸಕ್ತಿಯಿಂದ ಸಮಾಲೋಚನೆ ನಡೆಸುವಂತೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.



