Bajrang Dal: ಭಜರಂಗದಳ ಸಂಘಟನೆ ಸ್ಥಾಪನೆ ಆಗಿದ್ದು ಹೇಗೆ?

ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣದಿಂದ ಕರ್ನಾಟಕದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಹರ್ಷ ಭಜರಂಗದಳದ (Harsha Bajrang Dal Activist ಸಕ್ರಿಯ ಕಾರ್ಯಕರ್ತರಾಗಿದ್ದರು. ಹಿಂದೂ ಪರ ಹೋರಾಟಗಳಲ್ಲಿ ಭಜರಂಗದಳ ಸಂಘಟನೆಯ ಹೆಸರು ಆಗಾಗ ಮುನ್ನೆಲೆಗೆ ಬರುತ್ತಿರುತ್ತದೆ. ಕರ್ನಾಟಕದಲ್ಲೊಂದೇ ಅಲ್ಲದೇ ದೇಶದ ಹಲವೆಡೆ ಭಜರಂಗದಳ ಸಕ್ರಿಯವಾಗಿದೆ. ಹಿಂದುತ್ವದ ಪರ ವಿಷಯಗಳ ಕುರಿತು ಸಕ್ರಿಯವಾಗಿ ಹೋರಾಟ ಮಾಡಲು ಮುಂಚೂಣಿಗೆ ನಿಲ್ಲುವ ಸಂಘಟನೆ ಭಜರಂಗದಳ (Bajrang Dal). ಈ ಸಂಘಟನೆಯ ಕಿರು ಪರಿಚಯ ಇಲ್ಲಿದೆ.

ವಿಶ್ವ ಹಿಂದೂ ಪರಿಷತ್‌ನ ಒಂದು ಘಟಕವೇ ಭಜರಂಗದಳ. ಅಂದಹಾಗೆ ಇದು ಸಂಪೂರ್ಣ ಯುವ ತಂಡ. 1 ಅಕ್ಟೋಬರ್ 1984ರಂದು ಉತ್ತರ ಪ್ರದೇಶದಲ್ಲಿ ಭಜರಂಗದಳವು ಹುಟ್ಟಿಕೊಂಡಿತು. ವಿನಯ್ ಕಟಿಯಾರ್ ಎಂಬುವವರೇ ಭಜರಂಗದಳದ ಸಂಸ್ಥಾಪಕರು. ಮೂಲತಃ ಆ ಸಮಯದಲ್ಲಿ ನಡೆಯುತ್ತಿದ್ದ ರಾಮ ಜನ್ಮಭೂಮಿ ಅಭಿಯಾನವನ್ನು ಬೆಂಬಲಿಸಿ ಇನ್ನಷ್ಟು ಬೃಹತ್ತಾಗಿ ಬೆಳೆಸಲು ವಿನಯ್ ಕಟಿಯಾರ್ ಅವರು ಭಜರಂಗದಳವನ್ನು ಸ್ಥಾಪಿಸಿದರು. ವಿನಯ್ ಕಟಿಯಾರ್ (ಜನನ 11 ನವೆಂಬರ್ 1954) ಓರ್ವ ರಾಜಕಾರಣಿ ಮತ್ತು ಭಾರತದಲ್ಲಿ ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆ ವಿಶ್ವ ಹಿಂದೂ ಪರಿಷತ್ (VHP) ನ ಯುವ ವಿಭಾಗವಾದ ಬಜರಂಗದಳದ ಸ್ಥಾಪಕ ಅಧ್ಯಕ್ಷರು. ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.

ಭಜರಂಗದಳ ಸಂಘಟನೆಯು ಭಾರತದಾದ್ಯಂತ ಹೆಚ್ಚು ಮುನ್ನೆಲೆಗೆ ಬಂದಿದ್ದು 2010ರ ನಂತರ. ವಿಕಿಪೀಡಿಯದಲ್ಲಿ ಒದಗಿಸಿರುವ ಮಾಹಿತಿಯ ಪ್ರಕಾರ ಭಜರಂಗದಳವು ಕೆಲವು ವರದಿಗಳ ಪ್ರಕಾರ ಯವತ್ತು ಸಾವಿರಕ್ಕೂ ಹೆಚ್ಚು ಅಖಾಡಾಗಳನ್ನು ದೇಶದಾದ್ಯಂತ ಹೊಂದಿದ್ದು  ಅವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಂತೆಯೇ ರಚನೆ ಹೊಂದಿವೆ. ಭಜರಂಗದಳದ ಹೆಸರು ರಾಮಭಕ್ತ  ಹನುಮಂತನ ಹೆಸರನ್ನು ಒಳಗೊಂಡಿದ್ದು ಸಂಘಟನೆಯ ಸದಸ್ಯರಿಗೆ ಸ್ಪೂರ್ತಿ ನೀಡುತ್ತದೆ ಎಂಬ ಆಶಯ ಹೊಂದಿದೆ. ಸೇವೆ, ಸುರಕ್ಷತೆ, ಸಂಸ್ಕಾರ ಸಂಸ್ಕೃತಿಗಳು ಭಜರಂಗದಳದ ಮೂಲೋದ್ದೇಶವಾಗಿದೆ. ಸೇವಾ ಸುರಕ್ಷಾ ಸಂಸ್ಕೃತಿ ಎಂಬ ಫೋಷವಾಕ್ಯದೊಂದಿಗೆ ಭಜರಂಗದಳವು ಕಾರ್ಯನಿರ್ವಹಿಸುತ್ತದೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಅಯೋಧ್ಯೆಯ ರಾಮ ಜನ್ಮಭೂಮಿ, ಮಥುರಾದ ಕೃಷ್ಣ ಜನ್ಮಭೂಮಿ, ರಾಮಮಂದಿರ ಮಂದಿರವನ್ನು ನಿರ್ಮಿಸುವುದು ಮತ್ತು ಪ್ರಸ್ತುತ ವಿವಾದಿತ ಪೂಜಾ ಸ್ಥಳಗಳಾಗಿರುವ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯವನ್ನು ವಿಸ್ತರಿಸುವುದು ಭಜರಂಗದಳದ ಕೆಲವು ಪ್ರಮುಖ ಗುರಿಗಳಾಗಿವೆ. ಬಜರಂಗದಳವು ಕ್ರಿಶ್ಚಿಯನ್ ಪ್ರೇರಿತ ಮತಾಂತರ, ಇಸ್ಲಾಮಿಕ್ ಭಯೋತ್ಪಾದನೆ ಮತ್ತು ಗೋಹತ್ಯೆಯನ್ನು ವಿರೋಧಿಸುತ್ತದೆ.

ಬಾಬರಿ ಮಸೀದಿ ಧ್ವಂಸದ ನಂತರ ಪಿ.ವಿ. ನರಸಿಂಹ ರಾವ್ ಸರ್ಕಾರವು 1992 ರಲ್ಲಿ ಭಜರಂಗದಳವನ್ನು ನಿಷೇಧಿಸಿತ್ತು. ಆದರೆ ಒಂದು ವರ್ಷದ ನಂತರ ನಿಷೇಧವನ್ನು ಹಿಂತೆಗೆದು ಕೊಳ್ಳಲಾಗಿತ್ತು. ಭಜರಂಗದಳವು ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇ ದಿನದ ವಿರುದ್ಧ ಕರ್ನಾಟಕಕವೂ ಸೇರಿ ದೇಶದ ವಿವಿದೆಡೆ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಇದನ್ನೂ ಓದಿ : Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

(Bajrang Dal Harsha Hindu activist how and who started pro Hindutva organization)

Comments are closed.