Donkey Milk: ಕ್ಷೀರ ಕ್ರಾಂತಿಯತ್ತ ಕತ್ತೆ ಹಾಲು!!

ಸಾಮಾನ್ಯವಾಗಿ ಹೇಳಿದ ಕೆಲಸ ಅಚ್ಚುಕಟ್ಟಾಗಿ ಮಾಡದಿದ್ದಾಗ “ಕತೆಕಾಯೋಕೆಹೋಗು” ಎಂದು ಬೈಯುತ್ತಾ ಅಲ್ಲಗಳೆಯುವವರು ಅನೇಕರಿದ್ದಾರೆ. ನಮ್ಮ ಸಮಾಜದಲ್ಲಿ ಪ್ರಾಣಿಗಳಿಗೆ ಹೋಲಿಸಿ ಬೈಯುವುದು ಅತಿಶೋಕ್ತಿ ಅಲ್ಲ. ಅದು ಮನುಷ್ಯ ಸಹಜ ಗುಣವೇ ಆಗಿಬಿಟ್ಟಿದೆ. ಆದರೆ ವಿಶೇಷ ಅಂದ್ರೆ ಇನ್ಮುಂದೆ ಕತ್ತೆಕಾಯೋಕೆ ಹೋಗುವುದು ಕೂಡ ಲಾಭದಾಯಕವೇ!  ಕೇವಲ ಭಾರ ಹೊರಲು ಅಗಸರಿಗೆ ಮಾತ್ರ ಉಪಯೋಗವಾಗುತ್ತಿದ್ದ ಕತ್ತೆ ಇನ್ನು ಮುಂದೆ ಕೃಷಿಕರ (Agriculture) ಮನೆಯಲ್ಲೂ ಸದ್ದು ಮಾಡಬಹುದು. ಹಾಗಾದ್ರೆ ಕತ್ತೆಯಲ್ಲಿ ಏನಿದೆ ಅಂತಹ ವಿಶೇಷ ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅದಕ್ಕೆಉತ್ತರ ಕತ್ತೆಯ ಹಾಲು. (Donkey Milk)

ಹೌದು ನಾವೆಲ್ಲ ದನ ಹಾಗೂ ಎಮ್ಮೆಯ ಹಾಲಿನ ಕುರಿತು ಕೇಳಿರುತ್ತೇವೆ. ಆದರೆ ಕತ್ತೆಯ ಹಾಲು ಇತ್ತೀಚಿನ ದಿನಗಳಲ್ಲಿ ಕ್ಷೀರಕ್ರಾಂತಿಯತ್ತ ಹೆಜ್ಜೆ ಹಾಕುತ್ತಿದೆ.  ಈ ಕತ್ತೆಯ ಹಾಲು ಇಷ್ಟೊಂದು ಹೆಸರುವಾಸಿಯಾಗಲು ಮುಖ್ಯ ಕಾರಣ ಅದರಲ್ಲಿರುವ ರೋಗ ನಿರೋಧಕ ಶಕ್ತಿಯ ಪ್ರಮಾಣ. ಕೊರೋನಾ ಸಾಂಕ್ರಾಮಿಕ ರೋಗ ಹಬ್ಬಿದ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ನಮಗೆ ಎಷ್ಟು ಮುಖ್ಯ ಎಂದು ಈಗಾಗಲೇ ಅರಿವಾಗಿದೆ. ಬಹುಶಃ ಈ ಕಾರಣಕ್ಕಾಗಿಯೇ ಕತ್ತೆಯ ಹಾಲಿನ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಹರಿಯಾಣ ಹಾಗೂ ಗುಜರಾತಿನ ‘ವಡೋದರ’ ಎಂಬಲ್ಲಿ ಕಂಡು ಬರುವ ಹಲಾರಿ ತಳಿಯ ಕತ್ತೆಯ ಹಾಲು ವಿಶೇಷ ಗುಣಗಳನ್ನು ಹೊಂದಿದೆ. ದೇಹದ ಸೌಂದರ್ಯ ವೃದ್ಧಿಯ ಜೊತೆಗೆ ಕ್ಯಾನ್ಸರ್, ಬೊಜ್ಜು ಅಲರ್ಜಿಯಂತಹ ಸಮಸ್ಯೆಗಳನ್ನುನಿವಾರಿಸುತ್ತದೆ. ಅಷ್ಟೇ ಅಲ್ಲದೆ ಈ ಹಾಲಿನ ಉತ್ಪನ್ನಗಳಿಂದ ಚೀಸ್, ಸೋಪ್, ಫೇಸ್ವಾಷ್, ಸ್ಕಿನ್ಕ್ರೀಮ್ಗಳನ್ನು ಸಹ ತಯಾರಿಸುತ್ತಾರೆ.  ಈ ಹಾಲಿನಲ್ಲಿ ಆಂಟಿ ಆಕ್ಸಿಡೆಂಟ್ ಆಂಟಿ ಜೆಜಿಂಗ್ಹಾಗೇಯೇ ಕಡಿಮೆ ಕೊಬ್ಬಿನಾಂಶ ಮತ್ತು ಹೆಚ್ಚು ಪ್ರೋಟೀನ್ ಅಂಶವಿರುವುದರಿಂದ ಮಕ್ಕಳಿಗೆ ಯಾವುದೇ ಅಲರ್ಜಿ ಆಗುವುದಿಲ್ಲ ಎಂಬ ಮಾಹಿತಿಯನ್ನು ತಜ್ಞರು ತಿಳಿಸಿದ್ದಾರೆ.

ಇಷ್ಟೆಲ್ಲಾ ಉಪಯೋಗವಿರುವ ಕತ್ತೆ ಹಾಲಿನ ದರದ ಬಗ್ಗೆ ಪ್ರಶ್ನೆ ಮೂಡುವುದು ಸಹಜ. ಈ ಹಾಲಿನ ದರವನ್ನು ಕೇಳಿ ಶಾಕ್ ಆಗಬೇಡಿ. ಯಾಕಂದ್ರೆ ಪ್ರತಿ ಲೀಟರ್ ಹಾಲಿನ ಬೆಲೆ ಕನಿಷ್ಠ 5000 ರೂಪಾಯಿಗಳಿಂದ ಗರಿಷ್ಠ 10 ಸಾವಿರ ರೂಪಾಯಿಗಳ ವರೆಗೂ ಮಾರಾಟವಾಗುತ್ತದೆ. ಕತ್ತೆಯ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್.ಆರ್.ಸಿ.ಇ) ಹರಿಯಾಣದ ಹಿಸಾರ್ನಲ್ಲಿ ಕತ್ತೆಯ ಹಾಲಿನ ಡೈರಿಯನ್ನು ಸ್ಥಾಪಿಸಿದೆ. ಇದು ದೇಶದ ಮೊಟ್ಟ ಮೊದಲ ಕತ್ತೆಹಾಲಿನ ಡೈರಿ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.

ಬೇರೆ ರಾಜ್ಯಗಳಲ್ಲಿ ಕತ್ತೆ ಹಾಲಿನ ಡೈರಿ ಇದೆ ಛೇ….ಹೀಗಿಯೇ ನಮ್ಮ ರಾಜ್ಯದಲ್ಲಿಯೂ ಒಂದು ಡೈರಿ ಇರಬೇಕಿತ್ತು ಎಂದು ಬೇಸರಗೊಳ್ಳುವವರಿಗೆ ಮಂಗಳೂರಿನ ಕತ್ತೆ ಹಾಲಿನ ಡೈರಿಯು ಖುಷಿ ನೀಡಲಿದೆ. ಹೌದು ವಿದೇಶಗಳಲ್ಲೂ ಲೀಟರಿಗೆ 12 ಸಾವಿರ ರೂಗಳಲ್ಲಿ ಮಾರಾಟವಾಗುವ ಕತ್ತೆ ಹಾಲಿನ ಡೈರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ. ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ರಾಮನಗರ ಜಿಲ್ಲೆಯ ಶ್ರೀನಿವಾಸಗೌಡ ಈ ವಿನೂತನ ಯೋಜನೆಯ ಕನಸು ಕಂಡಿದ್ದಾರೆ. ಇದು ಕರ್ನಾಟಕದ ಮೊದಲ ಹಾಗೂ ದೇಶದಲ್ಲಿ ವಿನೂತನವಾದ ಡೈರಿಯಾಗಿ ಸ್ಥಾಪನೆಯಾಗಲಿದೆ.  ಈ ಮೂಲಕ ರಾಜ್ಯದ ರೈತರಿಗೆ ಕತ್ತೆ ಸಾಕಣೆಕಾರರಿಗೆ ಸಹಕಾರಿಯಾಗಲಿದೆ.

ಮುಂದಿನ ದಿನಗಳಲ್ಲಿ ಹೈನುಗಾರಿಕಾ ಕ್ಷೇತ್ರದಲ್ಲಿ ಸಾಧಿಸುವವನಿಗೆ ಕತ್ತೆಯ ಹಾಲು ಹೊಸದಾರಿಯನ್ನು ಒದಗಿಸಿ ಬದುಕು ಬಂಗಾರವಾಗಿಸಲಿದೆ. ದನಗಳಂತೆ ಕತ್ತೆಗಳೂ ಐದರಿಂದ ಹತ್ತು ಲೀಟರ್ ಹಾಲನ್ನು ಪ್ರತಿದಿನ ನೀಡಬಹುದು ಎಂಬ ಆಕಾಂಕ್ಷೆ ಇದ್ದವರಿಗೆ ಕೊಂಚ ಬೇಸರವಾಗಬಹುದು. ಏಕೆಂದರೆ ಪ್ರತಿ ಕತ್ತೆ ದಿನಕ್ಕೆಅರ್ಧ ಲೀಟರ್ ಹಾಲನ್ನು ಮಾತ್ರ ಕೊಡುತ್ತದೆ. ಹೀಗಾಗಿ ಹೆಚ್ಚು ಕತ್ತೆಗಳನ್ನು ಸಾಕುವುದರಿಂದ ಹೆಚ್ಚು ಲಾಭಪಡೆಯಬಹುದು. ಸರ್ಕಾರವು ಕತ್ತೆ ಸಾಕಾಣಿಕೆಗೆ ಉತ್ತೇಜನ ನೀಡಲಿದ್ದು ನಿರುದ್ಯೋಗಿಗಳು ಸಹ ಕತ್ತೆಯ ಹಾಲಿನ ಮುಖಾಂತರ ಬದುಕು ಕಟ್ಟಿಕೊಳ್ಳಬಹುದು. ಆದ್ದರಿಂದ ಇನ್ನು ಮುಂದೆ ಕತ್ತೆಕಾಯೋಕೆಹೋಗು ಎಂದು ಬೈಯುವವರು ಹುಷಾರಾಗಿರಬೇಕು.

ಇದನ್ನೂ ಓದಿ: Smartphones to Launch : ಭಾರತದಲ್ಲಿ ಈ ವಾರ ಬಿಡುಗಡೆ ಮತ್ತು ಮಾರಾಟಕ್ಕೆ ಸಿದ್ಧವಾಗಿರುವ ಸ್ಮಾರ್ಟ್‌ಫೋನ್‌ಗಳು!!

ಇದನ್ನೂ ಓದಿ: Scan Documents : ಆಂಡ್ರಾಯ್ಡ್‌ ಫೋನ್‌ನಲ್ಲಿ ಡಾಕ್ಯುಮೆಂಟ್‌ ಗಳನ್ನು ಸ್ಕ್ಯಾನ್‌ ಮಾಡುವುದು ಹೇಗೆ ಗೊತ್ತಾ?

Donkey Milk! At Rs. 5000 Per Liter

Comments are closed.