ಪಡುಮಲೆಯ ಗರಡಿ ವಿವಾದ ‘ಗೆಜ್ಜೆಗಿರಿ’ಯನ್ನು ಬೆಳಗಿಸಿದ ರೋಚಕ ಕಥೆ !

0

ಪುತ್ತೂರು : ತುಳುನಾಡಿನ ವೀರಪುರುಷರು ಎನಿಸಿಕೊಂಡಿರೋ ಕೋಟಿ ಚೆನ್ನಯ್ಯರು ಇಂದಿಗೂ ಅಜರಾಮರ. ಕೋಟಿ ಚೆನ್ನಯ್ಯ, ದೇಯಿ ಬೈದಿತಿಯರ ಪುಣ್ಯಕ್ಷೇತ್ರವಾಗಿರೋ ಗೆಜ್ಜೆಗಿರಿಯಲ್ಲೀಗ ಬ್ರಹ್ಮಕಲಶೋತ್ಸವದ ಸಂಭ್ರಮ. ಕರಾವಳಿ ಜನರ ಗಮನ ಸೆಳೆಯುತ್ತಿರೋ ಗೆಜ್ಜೆಗಿರಿ ನಿರ್ಮಾಣ ಹಿಂದೆ ರೋಚಕ ಕಥೆಯಿದೆ. ಪಡುಮಲೆಗೆ ಎಂದಿಗೂ ಹಿಂದಿರುಗೋದಿಲ್ಲವೆಂದು ಶಪತ ಮಾಡಿದ್ದ ವೀರ ಸಹೋದರರು ಕೊನೆಗೂ ಪಡುಮಲೆಯ ಮೆಟ್ಟಿಲು ಏರಲೇ ಇಲ್ಲಾ.

ಸುಮಾರು 500 ವರ್ಷಗಳ ಹಿಂದೆ ಬಾಳಿ ಬದುಕಿ ಪರಾಕ್ರಮ ಮೆರೆದಿದ್ದ ಅವಳಿ ವೀರರಾಗಿರೋ ಕೋಟಿ – ಚೆನ್ನಯ್ಯರು ಇಂದಿಗೂ ಅಜರಾಮರ. ಚಾರಿತ್ರಿಕ ವೀರ ಪುರುಷರಾಗಿರೋ ಕೋಟಿ ಚೆನ್ನಯ್ಯರು ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿರುವ ಸುಮಾರು 250 ಗರಡಿಗಳಲ್ಲಿ ಇಂದಿಗೂ ಕೋಟಿ ಚೆನ್ನಯ್ಯರ ಆರಾಧನೆ ನಡೆಯುತ್ತಿದೆ. ಕ್ರಿ.ಶ 1550 ರ ದಶಕದಲ್ಲಿ ಜನಿಸಿದ್ದರೆಂದು ಹೇಳಲಾಗುತ್ತಿರೋ ಕೋಟಿ ಚೆನ್ನಯ್ಯರು ಅಂದಿನ ಕಾಲದಲ್ಲಿಯೇ ಸಾಮಾಜಿಕ ತಾರತಮ್ಯದ ವಿರುದ್ದ ತೊಡೆತಟ್ಟಿ ನಿಂತವರು.

32 ವರ್ಷಗಳ ಕಾಲ ಬಾಳಿ ಬದುಕಿದ್ದ ಕೋಟಿ ಚೆನ್ನಯ್ಯರು ಪರಾಕ್ರಮದಿಂದ ಹೋರಾಡಿ, ಸತ್ಯ ಧರ್ಮಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು. ರಾಜಪ್ರಭುತ್ವದಲ್ಲಿ ಪ್ರಜೆಗಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ, ಸಾಮಾಜಿಕ ತಾರತಮ್ಯದ ವಿರುದ್ದ ಹೋರಾಟವನ್ನು ಮಾಡಿದವರು. ಅರಸರಾಗಿ ಮೆರೆಯಬೇಕಾದವರು ಜನ ನಾಯಕರಾಗಿಯೇ ಬಾಳಿಬದುಕಿ, ಕೊನೆಗೆ ರಾಜಪ್ರಭುತ್ವದ ಸಂಚಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದು ಇತಿಹಾಸ.

ಹುಟ್ಟಿದ 16ನೇ ದಿನಕ್ಕೆ ತಾಯಿಯನ್ನು ಕಳೆದುಕೊಂಡಿದ್ದ ಕೋಟಿ ಚೆನ್ನಯ್ಯರು ತುಳುನಾಡಿನಲ್ಲಿ ಮಾಡಿದ ಕ್ರಾಂತಿ ಇಂದಿಗೂ ಮಾದರಿ. ಇಂತಹ ವೀರಪುರಷರ ಇತಿಹಾಸವನ್ನು ಇಂದು ಗೆಜ್ಜೆಗಿರಿಯಲ್ಲಿ ಸಾರಲಾಗುತ್ತಿದೆ. ಹಲವಾರು ವರ್ಷಗಳಿಂದಲೂ ಎಲೆಮರೆ ಕಾಯಿಯಂತಿದ್ದ ‘ಗೆಜ್ಜೆಗಿರಿ’ ಇಂದು ಕರಾವಳಿಯಲ್ಲಿಯೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಕೋಟಿ – ಚೆನ್ನಯ್ಯರ ತಾಯಿ ದೇಯಿಬೈದಿತಿ ಬೆಳೆದ ಪ್ರದೇಶ ಗೆಜ್ಜೆಗಿರಿಯಾದರೂ ಶತಮಾನಗಳಿಂದ ಗೆಜ್ಜೆಗಿರಿಯ ಮಹತ್ವವನ್ನು ಯಾರೂ ಗಮನಿಸಿರಲಿಲ್ಲ. ಪಡುಮಲೆಯೇ ಕೋಟಿ ಚೆನ್ನಯ್ಯರ ಇಡೀ ಕಥೆಯಿದೆ ಎಂದೇ ನಂಬಿದ್ದರು, ಮಾತ್ರವಲ್ಲ ನಂಬಿಕೆಯಲ್ಲಿ ಪಡುಮಲೆ ಬಹುಮುಖ್ಯ ಪಾತ್ರಪಡೆದಿತ್ತು.

ಆದರೆ ಯಾವಾಗ ಪಡುಮಲೆಯ ಅಭಿವೃದ್ದಿ ಸಮಿತಿಯು ರೂಪುಗೊಂಡು, ಅಭಿವೃದ್ದಿಯ ಬಗ್ಗೆ ಚರ್ಚೆ ಆರಂಭಗೊಂಡಿರೋ ಆಗ ಒಂದು ವಿವಾದ ಮುನ್ನಲೆಗೆ ಬಂದಿತ್ತು. ಕೋಟಿ ಚೆನ್ನಯ್ಯರ ಪಾಡ್ದನ ಹಾಗೂ ಇತಿಹಾಸದಲ್ಲಿ ಒಂದು ಆಂಶವೂ ಪ್ರಮುಖವಾಗಿದೆ. ಅದುವೆ ‘ನಾವು ಮತ್ತೆ ಪಡುಮಲೆಗೆ ಕಾಲಿಡುವುದಿಲ್ಲ’ ಎಂಬ ಅಂಶ.

ಕೋಟಿ ಚೆನ್ನಯ್ಯರು ಪಡುಮಲೆಯಲ್ಲಿ ಇಳಿದು ಹೋದ ಮೆಟ್ಟಿಲುಗಳು ಇನ್ನೂ ಹಾಗೆಯೇ ಇದೆ. ಕೋಟಿ – ಚೆನ್ನಯ್ಯ ಪಡುಮಲೆಗೆ ಬರುವುದಿಲ್ಲ ಎಂದು ಇಳಿದು ಹೋದ ಮೇಲೆ ಪಡುಮಲೆಯಲ್ಲಿ ಗರಡಿ ಕಟ್ಟಿಸುವುದು ಸರಿಯೇ ಎಂಬುದು ಹಲವರ ಪ್ರಶ್ನೆಯಾಗಿತ್ತು. ಇತಿಹಾಸ, ಪಾಡ್ದನವನ್ನು ನೋಡಿದಾಗ ಈ ಪ್ರಶ್ನೆ ಸಹಜವಾಗಿಯೇ ಉದ್ಬವಿಸಿತ್ತು. ಅಸಮಾನತೆ, ದೌರ್ಜನ್ಯ, ಜಾತೀಯತೆಯ ಸಂಕೇತದಂತೆ ಪಡುಮಲೆ ಗೋಚರಿಸುತ್ತದೆ. ಇಲ್ಲಿ ಗರಡಿ ಕಟ್ಟಿಸಬಾರದೆಂದನ್ನುವ ಕೆಲವರ ಅಭಿಪ್ರಾಯವೇ ಗೆಜ್ಜೆಗಿರಿಯತ್ತ ನಡೆಯುವಂತೆ ಮಾಡಿತು.

ಪಡುಮಲೆಯಿಂದ ಕೇವಲ 2 ಕಿಲೋ ಮೀಟರ್ ದೂರದಲ್ಲಿರೋ ಗೆಜ್ಜೆಗಿರಿ ಕೋಟಿ ಚೆನ್ನಯರ ಮೂಲಸ್ಥಾನ. ಗೆಜ್ಜೆಗಿರಿಯಲ್ಲಿ ದೇಯಿಬೈದ್ಯೆತಿ ಸಮಾಧಿಯಿದ್ದು, ಸುಮಾರು 450 ವರ್ಷಗಳ ಇತಿಹಾಸವಿದೆ. ಪಡುಮಲೆಯಲ್ಲಿ ಹೆರಿಗೆಯಾದ 16ನೇ ದಿನಕ್ಕೆ ದೇಯಿಬೈದಿತಿ ಸಾವನ್ನಪ್ಪಿದ ನಂತರದಲ್ಲಿ ಮಕ್ಕಳಾದ ಕೋಟಿ –ಚೆನ್ನಯ್ಯರನ್ನು ಮಾವ ಸಾಯನ ಬೈದ್ಯರು ಗೆಜ್ಜೆಗಿರಿ ತಂದು ಸಾಕಿ ಸಲಹಿದ್ದರು. ಗೆಜ್ಜೆಗಿರಿಯ ಹಿತ್ತಲ ಮನೆಯಲ್ಲಿಯೇ ಅವಳಿ ವೀರರು ಬೆಳೆದು ದೊಡ್ಡವರಾಗಿದ್ದರು.

ಹೀಗಾಗಿಯೇ ಹಲವರು ಗೆಜ್ಜೆಗಿರಿಯ ಅಭಿವೃದ್ದಿಗೆ ಮುಂದಾಗಿದ್ದರು. ಗೆಜ್ಜೆಗಿರಿಯ ಅಭಿವೃದ್ದಿಗೆ ಮನಸ್ಸು ಮಾಡುತ್ತಲೇ ಲಕ್ಷಾಂತರ ಮಂದಿ ಬೆಂಬಲಕ್ಕೆ ನಿಂತ್ರು. ಗೆಜ್ಜೆಗಿರಿ ಇಂದು ಕರಾವಳಿಯ ಪ್ರಮುಖ ಧಾರ್ಮಿಕ ಕೇಂದ್ರವಾಗಿಯೂ, ಐತಿಹಾಸಿಕ ಸ್ಥಳವಾಗಿಯೂ, ತುಳುನಾಡ ವೀರಪುರುಷರ ಕುರುಹು ಆಗಿಯೂ ತೆಲೆ ಎತ್ತಿ ನಿಂತಿದೆ.

ಗೆಜ್ಜೆಗಿರಿಯ ಬ್ರಹ್ಮಕಲಶೋತ್ಸವಕ್ಕೆ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಗೆಜ್ಜೆಗಿರಿಯಲ್ಲಿ ನಡೆಯುತ್ತಿರೋದು ಇತಿಹಾಸ.

ಆದರೆ ಇತಿಹಾಸವನ್ನು ತಿರುಚಲು ಪ್ರಯತ್ನಿಸಿ, ಅಸಮಾನತೆ, ದೌರ್ಜನ್ಯವನ್ನು ಮುಚ್ಚಿ ಹಾಕಲು ಯತ್ನಿಸಿದವರಿಗೆ ಗೆಜ್ಜೆಗಿರಿಯಲ್ಲಿ ಕೋಟಿ ಚೆನ್ನಯ್ಯರೇ ಉತ್ತರ ಕೊಟ್ಟಿದ್ದಾರೆನ್ನುವುದು ಭಕ್ತರ ಅನಿಸಿಕೆ.

ಒಟ್ಟಿನಲ್ಲಿ ಕರಾವಳಿಯ ವೀರ ಪುರುಷರು, ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿ, ಮೇಲು ಕೀಳೆಂಬ ಬೇಧ ಬಾಧವನ್ನು ತೊಡೆದು ಹಾಕಿರುವ ಕೋಟಿ ಚೆನ್ನಯ್ಯರ ಪುಣ್ಯಭೂಮಿಗೀಗ ಹೊಸ ಕಳೆ ಬಂದಂತಾಗಿದೆ.

ಗೆಜ್ಜೆಗಿರಿಯ ಬ್ರಹ್ಮಕಲಶದಲ್ಲಿ ನಾರಾಯಣಗುರುಗಳ ಹಳದಿ ಧ್ವಜ ಇನ್ನಷ್ಟು ಶೃಂಗಾರಗೊಳಿಸಿದೆ. ಹೊರೆಕಾಣಿಕೆ ಕರಾವಳಿಯಲ್ಲಿಯೇ ಹೊಸ ಇತಿಹಾಸವನ್ನು ನಿರ್ಮಿಸಿದೆ.

ನೂತನ ಕೊಡಿಮರ, ಆದಿ ದೈವ ಧೂಮಾವತಿ ಸಾನ್ನಿಧ್ಯ, ಕುಪ್ಪೆ ಪಂಜುರ್ಲಿ ಸಾನ್ನಿಧ್ಯ, ಸಾಯನ ಬೈದ್ಯರ ಗುರು ಪೀಠ, ಬೆರ್ಮೆರ್ ಗುಂಡ, ಕೋಟಿ ಚೆನ್ನಯರ ಮೂಲಸ್ಥಾನ ಗರಡಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ, ಮಹಾಮಾತೆ ದೇಯಿಬೈದಿತಿ ಮಹಾಸಮಾಧಿ ಸಾನಿಧ್ಯಗಳ ಪ್ರತಿಷ್ಠೆ,ಬ್ರಹ್ಮಕಲಶೋತ್ಸವ ನಡೆಯುತ್ತಿದೆ, ಧರ್ಮ ದೈವ ಧೂಮಾವತಿ, ಕುಪ್ಪೆ ಪಂಜುರ್ಲಿ, ದೇಯಿ ಬೈದ್ಯೆತಿ, ಕೋಟಿ ಚೆನ್ನಯ, ಕೊರತಿ, ಕಲ್ಲಾಲ್ದಾಯ ದೈವಗಳ ನೇಮೋತ್ಸವದೊಂದಿಗೆ ಬ್ರಹ್ಮಕಲಶ ಸಂಪನ್ನಗೊಳ್ಳಲಿದೆ.

Special Desk News Next

Leave A Reply

Your email address will not be published.