Krantivira Sangolli Rayanna: ಇಂದು ಸಂಗೊಳ್ಳಿ ರಾಯಣ್ಣನ 192 ನೇ ವರ್ಷದ ಪುಣ್ಯಸ್ಮರಣೆ

(Krantivira Sangolli Rayanna) ಬ್ರಿಟಿಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ಜ್ಯೋತಿಯನ್ನು ಹಚ್ಚಬೇಕು ಎಂದು ಹಗಲು ರಾತ್ರಿಯೆನ್ನದೇ ಹೋರಾಡಿದ ಧೀಮಂತ ನಾಯಕ, ಭಾರತಮಾತೆಯನ್ನು ಆರಾಧಿಸುತ್ತಿದ್ದ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರನಾಗಿ ಜನರ ಮನದಲ್ಲಿ ಸದಾ ಜೀವಂತವಾಗಿರುವ ಸಂಗೊಳ್ಳಿ ರಾಯಣ್ಣ ವೀರಮರಣ ಹೊಂದಿ ಇಂದಿಗೆ 192 ವರ್ಷಗಳು ಕಳೆದಿವೆ.

ಜನವರಿ 26 ರಂದು ಗಣರಾಜ್ಯೋತ್ಸವದ ಅಚರಣೆ ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ಸಂಗೊಳ್ಳಿ ರಾಯಣ್ಣನ ಪುಣ್ಯಸ್ಮರಣೆ. ರಾಯಣ್ಣನವರು ಹುಟ್ಟಿದ ದಿನ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ದಿನವಾದರೆ ಅವರು ಪ್ರಾಣತ್ಯಾಗ ಮಾಡಿದ ದಿನ ಭಾರತ ಗಣರಾಜ್ಯವಾದ ದಿನ.

ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿನ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಪುತ್ರನೇ ಕೆಚ್ಚೆದೆಯ ವೀರ ಸಂಗೊಳ್ಳಿ ರಾಯಣ್ಣ. ಹುಟ್ಟಿನಿಂದ ಸಾಯುವವರೆಗೂ ತನ್ನ ಸರ್ವಸ್ವವನ್ನು ಕಿತ್ತೂರು ನಾಡಿನ ಸ್ವಾತಂತ್ರ್ಯಕ್ಕಾಗಿ ಅರ್ಪಿಸಿ, ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿಯ ವಿರುದ್ದ ಸಂಗೊಳ್ಳಿ ರಾಯಣ್ಣ ಹೋರಾಡಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಗಣೇಶವಾಡಿ ಹಾಗೂ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಬೆಳೆದ ರಾಯಣ್ಣ, ಕುರುಬ ಜನಾಂಗದ ವೀರ. ಸಾಮ್ರಾಜ್ಯಶಾಹಿ ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ಸಾರಿದ. ಭಾರತದಲ್ಲಿ ಗೆರಿಲ್ಲಾ ಯುದ್ಧ ಪರಿಣತಿ ಹೊಂದಿದ್ದ ಪ್ರಪ್ರಥಮ ಯೋಧ ಎಂಬ ಕೀರ್ತಿ ರಾಯಣ್ಣನಿಗೆ ಸಲ್ಲುತ್ತದೆ.

ಹಣದಾಹಿ ಜಮೀನುದಾರರಿಗೆ, ಭೂ ಮಾಲೀಕರಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ, ಸರಕಾರಕ್ಕೆ ಸೇರಿದ್ದ ಅನೇಕ ದಾಖಲೆಗಳನ್ನು ನಾಶ ಮಾಡಿ ಬಡವರಿಂದ ದೋಚಿದ್ದ ಹಣವನ್ನು ಕಸಿದುಕೊಳ್ಳತೊಡಿದ್ದರು. ಇದರಿಂದ ಬ್ರಟಿಷ್‌ ಸಾಮ್ರಾಜ್ಯಕ್ಕೆ ತೆರಿಗೆ ಹಾನಿಯಾಯಿತು. ನೇರವಾಗಿ ರಾಯಣ್ಣನನ್ನು ಹಿಡಿಯಲು ಸಾಧ್ಯವಾಗದೇ ಆತನ ಮಾವನ ಸಹಾಯ ಪಡೆದು ಮೋಸದಿಂದ ರಾಯಣ್ಣನನ್ನು ಸೆರೆಹಿಡಿದರು.

ಬ್ರಿಟಿಷರು ಅವನನ್ನು ಬಹಿರಂಗ ಯುದ್ಧದಲ್ಲಿ ಸೋಲಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವನಿಗೆ ದ್ರೋಹ ಮಾಡುವ ಮೂಲಕ ಅವನನ್ನು ಏಪ್ರಿಲ್ 1830 ರಲ್ಲಿ ಹಿಡಿಯಲಾಯಿತು. ಅವನ ವಿರುದ್ಧ ವಿಚಾರಣೆ ಪ್ರಾರಂಭವಾಯಿತು ಮತ್ತು ಅವನಿಗೆ ಮರಣದಂಡನೆ ವಿಧಿಸಲಾಯಿತು. ರಾಯಣ್ಣನನ್ನು 26 ಜನವರಿ 1831 ರಂದು ನಂದಗಡದ ಆಲದ ಮರಕ್ಕೆ ನೇಣು ಹಾಕಲಾಯಿತು. ನಂತರ ರಾಯಣ್ಣನ ಪಾರ್ಥೀವ ಶರೀರವನ್ನು ನಂದಗಡದಲ್ಲಿ ಸಮಾಧಿ ಮಾಡಲಾಯಿತು. ರಾಯಣ್ಣನ ನಿಕಟವರ್ತಿಯೋರ್ವ ಸಮಾಧಿಯ ಮೇಲೆ ಆಲದ ಸಸಿಯನ್ನು ನೆಟ್ಟನೆಂದು ಪುರಾಣಗಳು ಹೇಳುತ್ತವೆ.

ಇದನ್ನೂ ಓದಿ : Heeraben Modi lifestyle: ಅತ್ಯಂತ ಸರಳ ಜೀವಿಯಾದ ಶತಾಯುಷಿ ಹೀರಾಬೆನ್‌ ಮೋದಿ ಅವರ ಜೀವನ ಶೈಲಿ ಹೇಗಿತ್ತು ಗೊತ್ತಾ?

ಇದನ್ನೂ ಓದಿ : Republic Day 2022 Special: ಜನವರಿ 26 ರಂದೇ ಗಣರಾಜ್ಯೋತ್ಸವ ದಿನವನ್ನು ಆಚರಿಸುವುದೇಕೆ?

ಗಲ್ಲಿಗೇರುವ ಮೊದಲು ರಾಯಣ್ಣ ಹೇಳಿದ ಕೊನೆಯ ಮಾತುಗಳು ಇಂದಿಗೂ ಕೂಡ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿವೆ. ಬ್ರಿಟಿಷ್‌ ಕುನ್ನಿಗಳು ನಡುರಾತ್ರಿಯಲ್ಲಿ ದೇಶವನ್ನು ಬಿಟ್ಟು ತೊಲಗುವಂತಾಗುತ್ತದೆ ಎಂಬ ರಾಯಣ್ಣನ ಮಾತಿನಂತೆ ಅಗಸ್ಟ್‌ 14 ರ ನಡುರಾತ್ರಿ ಬ್ರಿಟಿಷರು ದೇಶವನ್ನು ಬಿಟ್ಟು ತೊಲಗುತ್ತಾರೆ. ವಿಶೇಷವೇನೆಂದರೆ ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಿದ ದಿನವೇ ರಾಯಣ್ಣ ಭೂಮಿಗೆ ಬಂದ ದಿನವಾಗಿದೆ.

Krantivira Sangolli Rayanna: Today marks the 192nd anniversary of Sangolli Rayanna.

Comments are closed.