ಮಾಂತ್ರಿಕನ ಮನೆ ಹೊಕ್ಕ ನನ್ನನ್ನು ಸ್ವಾಗತಿಸಿತ್ತು ಮಾನವನ ತಲೆ ಬುರುಡೆ..! ಭಾಗ -7

0

ನಿಜಕ್ಕೂ ಈ ಮಾಟ ಮಂತ್ರ ಎಲ್ಲಾ ನಿಜವಾ ಅದೇನಿದೆಯೋ ನೋಡೇ ಬಿಡೋಣ ಅಂತ ಕೊಳ್ಳೇಗಾಲಕ್ಕೆ ಹೊರಟ ನಾನು ನನ್ನ ಗೆಳೆಯ ಬಸಂತ್ ನನ್ನು ಭೇಟಿ ಮಾಡಿದ್ದೆ. ಕೊಳ್ಳೇಗಾಲದ ಯಾರೇ ಗೆಳೆಯರಿದ್ದರೂ ಅವರನ್ನು ಕೇಳಿ ನೋಡಿ..ಮಾಟ ಮಂತ್ರ ಎಲ್ಲ ನಿಜ ಅಂತಾನೇ ಹೇಳ್ತಾರೆ.

ಅದೇ ರೀತಿ ಬಸಂತ್ ಕೂಡ ಹೇಳಿದ್ದ. ಹೌದೌದು, ಅನ್ನುತ್ತಲೇ ಅವನೊಟ್ಟಿಗೆ ಹೆಜ್ಜೆ ಹಾಕಿದೆ. ಕೊಳ್ಳೇಗಾಲದಿಂದ ಹನೂರಿಗೆ ಹೋಗುವ ರಸ್ತೆಯಲ್ಲಿ ನಮಗೊಂದು ಪುಟ್ಟ ಗುಡಿಸಲು ಕಂಡಿತು ಆ ಗುಡಿಸಲಿನಲ್ಲಿ ಮಹಾ ಮಾಂತ್ರಿಕನಿದ್ದಾನೆ ಅಂತ ಬಸಂತ್ ಹೇಳಿದ್ದ. ಹೌದಾ, ನಡಿ ನೋಡೋಣ ಅಂತ ಅವನೊಟ್ಟಿಗೆ ಗುಡಿಸಲು ಹೊಕ್ಕಿದ್ದೇ.

ಪುಟ್ಟ ಗುಡಿಸಲು… ಅದರೊಳಗೊಂದು ಬುಡ್ಡಿ ದೀಪ… ಬುಡ್ಡಿ ದೀಪದ ಎದುರಿಗೆ ಭಯಂಕರವಾದ ಕಾಳಿಕಾ ದೇವಿಯ ವಿಗ್ರಹ..ಆ ದೇವಿಯನ್ನು ನೋಡುತ್ತಲೇ ಭಯ ನಿಮ್ಮ ಎದೆಯನ್ನ ಆವರಿಸೋದು ಗ್ಯಾರಂಟಿ..ಆ ಭಯವೇ ಮಾಂತ್ರಿಕನ ಮೊದಲ ಬಂಡವಾಳ… ಬನ್ನಿ ಸಾರ್ ಕೂತ್ಕೊಳ್ಳಿ ಅನ್ನೋ ಕರ್ಕಶವಾದ ಧ್ವನಿ ನಮ್ಮನ್ನು ಆಹ್ವಾನಿಸಿತ್ತು…ಆತನೇ ಮೋಡಿ ಕೃಷ್ಣಪ್ಪ..ಆ ಊರಿನವರ ಪಾಲಿಗೆ ಫೇಮಸ್ ಮಾಟಗಾರ.. ಮಾಂತ್ರಿಕ.

ಆತನನ್ನು ನಡುರಾತ್ರಿ ಏನಾದ್ರು ನೋಡಿದ್ರೆ ಖಂಡಿತವಾಗಲೂ ನೀವು ಬೆಚ್ಚಿ ಬೀಳೋದು ಗ್ಯಾರಂಟಿ..ಅಂತಹ ಮುಖಾರವಿಂದ…ಕರ್ಕಶವಾದ ಧ್ವನಿ ಕೆಂಪು ಕೇಸರಿ ಯಂತಹ ಅಟ್ರ್ಯಾಕ್ಟಿಂಗ್ ವಸ್ತ್ರ.. ಅಲ್ಲಲ್ಲಿ ನಿಂಬೆ ಹಣ್ಣು..ಅರಿಶಿನ ಕುಂಕುಮ ಚೆಲ್ಲಿಕೊಂಡು ಮೂರು ಆರು ಅಡಿಯ ಕೋಣೆಯೊಳಗೆ ಕಾಳಿಕಾ ದೇವಿಯನ್ನು ಪ್ರತಿಷ್ಠಾಪಿಸಿಕೊಂಡು ಅದಕ್ಕೆ ಹೂವುಗಳಿಂದ ಅಲಂಕಾರ ಮಾಡಿ ಒಂದು ಸಣ್ಣ ದೀಪ ಹಚ್ಚಿ, ಮಾನವನ ಸಕಲಾಂಗದ ಎಲುಬು ಮೂಳೆ ಅಲ್ಲಿ ಪ್ರತಿಷ್ಠಾಪಿಸಿರ್ತಾರೆ. ಆ ದೃಶ್ಯವನ್ನು ಯಾರೇ ನೋಡಿದ್ರೂ ಭಯಪಡುವುದು ಗ್ಯಾರಂಟಿ.

ನಮ್ಮನ್ನು ಸ್ವಾಗತಿಸಿದ ಆ ಮಾಂತ್ರಿಕ ಮೊದಲಿಗೆ ಕೇಳಿದ ಪ್ರಶ್ನೆ ಏನು ಗೊತ್ತಾ ಎನ್ ಕಾಯಿಲೆ..ವ್ಯವಹಾರದಲ್ಲಿ ನಷ್ಟ ಆಗಿದೆಯಾ ಅಥವಾ ದುಡಿದ ದುಡ್ಡು ಕೈಸೇರ್ತಿಲ್ವಾ…ಶತ್ರು ಬಾಧೆ ನಿಮ್ಮನ್ನು ಬಾಧಿಸುತ್ತಿದೆಯಾ..?…ಹೀಗೆ ಈತ ಒಬ್ನೆ ಅಲ್ಲ..ಎಲ್ಲ ಮಾಂತ್ರಿಕರು ಮನುಷ್ಯನಿಗೆ ಸಾಮಾನ್ಯವಾಗಿ ಎದುರಾಗುವ ತೊಂದರೆಗಳ ಪಟ್ಟಿಯನ್ನು ನಿಮ್ಮ ಮುಂದಿಡುತ್ತಾರೆ.. ಅವುಗಳಲ್ಲಿ ಯಾವುದೋ ಒಂದು ಸಮಸ್ಯೆಯಲ್ಲಿ ನಾವು ನೀವು ಬಳಲುತ್ತಿರುವವರೇ. ನೀವು ಇಂತಹ ಸಮಸ್ಯೆ ಅಂತ ಹೇಳಿ ಪಟ್ಟಂತ ಆತ ಇದು ಅವರ ಕೈವಾಡ ನೇ ಅಂತಾನೇ… ಅದೇ ರೀತಿ ನನಗೂ ಕೂಡ ನಾನು ಕಾಯಿಲೆ ಅಂತ ಹೇಳಿದಾಗ ನಿಮ್ಮವರೇ ಯಾರೋ ಮಾಟ ಮಾಡಿಸಿದ್ದಾರೆ ಎಂದಿದ್ದ…ಎಲಾ ಇವನ ಅದೇನೇನು ಹೇಳ್ತಾನೋ ಹೇಳಲಿ ಅಂತ ನಾನು ಕೇಳಿಸಿಕೊಂಡು ಕೂತಿದ್ದೆ…

ಅಸಲಿಗೆ ನನಗೆ ಯಾವುದೇ ಕಾಯಿಲೆ ಇರಲಿಲ್ಲ..ಆದ್ರೂ ಅವನು ನಾನು ಹೇಳಿದ ಸುಳ್ಳನ್ನೇ ನಿಜ ಅನ್ಕೊಂಡು ಕಾಯಿಲೆಗೆ ಪುಂಖಾನುಪುಂಖವಾಗಿ ಕಥೆ ಕಟ್ಟಿದ್ದ…ಅಷ್ಟೇ ಅಲ್ಲ..ನಾನು ಸುಮ್ಮನೆ ದೇವಿಯ ಮುಂದೆ ಇರೋ ಈ ಮೂಳೆಗಳು ಯಾವು..? ಇವನ್ಯಾಕೆ ಇಲ್ಲಿಟ್ಟಿದ್ದೀರಾ ಅಂತ ಕೇಳಿದ್ದೆ ಅದಕ್ಕೊಂದು ಭಯಂಕರ ಕಥೆಯನ್ನೇ ಹೇಳಿದ್ದ.

ಆ ಕಥೆ ನೂರಕ್ಕೆ ನೂರು ಪರ್ಸೆಂಟ್ ಸುಳ್ಳಾದರೂ ಅದನ್ನು ನಂಬುವ ಮಟ್ಟಿಗೆ ಕಥೆ ಕೊಡ್ತಾರೆ. ನಾನು ಕೊಳ್ಳೇಗಾಲದ ಅನೇಕ ಮಾಂತ್ರಿಕರ ಮನೆ ಹೊಕ್ಕು ಬಂದೆನಲ್ಲ; ಅವರೆಲ್ಲರ ಮನೆಯೊಳಗೆ ಅನ್ನ ಬೇಯಿಸುವ ಪಾತ್ರಗಳಿಗಿಂತಲೂ ಮನೆಯೊಳಗೆ ಸ್ಥಾನ ಪಡೆದಿರುವುದು ಈ ಎಲುಬುಗಳು !

ಅವರು ಕೂತು ಪೂಜಿಸುವ ಕಾಳಿಕಾ ದೇವಿಯ ಎದುರಿಗೆ ಮಾನವನ ತಲೆಬುರುಡೆಯೊಂದು ಕಾಣುತ್ತೆ ಆ ಬುರುಡೆಗೆ ಅರಿಶಿನ ಗಂಧವನ್ನು ಸವರಲಾಗಿರುತ್ತದೆ. ಕಣ್ಣು ಕಪ್ಪಿನಲ್ಲಿ ಕಣ್ಣುಗಳನ್ನು ತಿದ್ದಲಾಗಿರುತ್ತದೆ. ಹಾಗೆಯೇ ಕೈ ಮೂಳೆ ಕಾಲುಗಳ ಮೂಳೆ ಎಲ್ಲವಕ್ಕೂ ರಕ್ತದಂತೆ ಗೋಚರಿಸಲು ಕುಂಕುಮ ಮೆತ್ತಿರುತ್ತಾರೆ. ಮೋಡಿ ಕೃಷ್ಣಪ್ಪ ಆ ಮೂಳೆಗಳನ್ನ ಸುಮ್ಮನೆ ಆಯ್ದುಕೊಂಡು ತಂದಿಲ್ಲವಂತೆ. ಅವನು ಹೇಳೋ ಕಥೆ ಬಗ್ಗೆ ಮುಂದಿನ ಲೇಖನದಲ್ಲಿ ಹೇಳ್ತೀನಿ. ಸುಳ್ಳು ನೆತ್ತಿ ಮೇಲೆ ಒಡೆದಂತಿರುತ್ತೆ.

(ಮುಂದುವರಿಯುತ್ತದೆ…)

  • ಕೆ.ಆರ್.ಬಾಬು
Leave A Reply

Your email address will not be published.