ಇನ್ಮುಂದೆ ದೇವಾಲಯಗಳಲ್ಲಿ ‘ಆನ್ ಲೈನ್ ಪೂಜೆ’ : ಸಂಪ್ರದಾಯಕ್ಕೆ ತಿಲಾಂಜಲಿ ಇಟ್ರಾ ಸಚಿವರು ?

0

ಬೆಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಧಾರ್ಮಿಕ ಕೇಂದ್ರಗಳು ಬಂದ್ ಆಗಿವೆ. ಸದ್ಯಕ್ಕೆ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ಸಿಗುವುದು ಕೂಡ ಅನುಮಾನ. ಹೀಗಾಗಿಯೇ ಧಾರ್ಮಿಕ ದತ್ತಿ ಇಲಾಖೆ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಆನ್ ಲೈನ್ ಪೂಜೆ ಆರಂಭಿಸುವುದಕ್ಕೆ ಮುಂದಾಗಿದೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಮುಜರಾಯಿ ದೇವಾಲಯಗಳಲ್ಲಿ ಆನ್ ಲೈನ್ ಮೂಲಕವೇ ಪೂಜೆಗೆ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೇ ಭಕ್ತರು ಮನೆಯಲ್ಲಿಯೇ ಕುಳಿತು ಪೂಜೆಯ ನೇರ ಪ್ರಸಾರವನ್ನು ವೀಕ್ಷಿಸಬಹುದಾಗಿದೆ. ಮಂಗಳಾರತಿ, ಕುಂಕುಮಾರ್ಚನೆ ಸೇರಿದಂತೆ 15 ಬಗೆಯ ಪೂಜಾ ಸೇವೆಗಳನ್ನು ಭಕ್ತರು ಆನ್ ಲೈನ್ ಮೂಲಕವೇ ನೆರವೇರಿಸಬಹುದಾಗಿದೆ.

ಭಕ್ತರ ಮನೆಗಳಿಗೆ ಪ್ರಸಾದವನ್ನು ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರಮುಖವಾಗಿ ಬೆಂಗಳೂರಿನ ಬನಶಂಕರಿ ದೇವಸ್ಥಾನ, ಸವದತ್ತಿಯ ಯಲ್ಲಮನ ದೇವಸ್ಥಾನ, ನಂಜನಗೂಡಿನ ಶ್ರೀಕಂಠ ದೇವಸ್ಥಾನ, ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಆನ್ ಲೈನ್ ಪೂಜೆ ನೆರವೇರಿಸಲಾಗುತ್ತದೆ. ಮುಂದಿನ ಎರಡು ದಿನಗಳಲ್ಲಿ ಈ ಕುರಿತು ಅಧಿಕೃತ ಚಾಲನೆ ದೊರೆಯಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಆನ್ ಲೈನ್ ಪೂಜೆಗೆ ವಿರೊಧ : ಧಾರ್ಮಿಕ ನಂಬಿಕೆಗೆ ಧಕ್ಕೆ
ಭಕ್ತರು ದೇವಸ್ಥಾನಗಳಿಗೆ ತೆರಳುವುದು ಕೇವಲ ದೇವರಿಗೆ ಹರಿಕೆ ತೀರಿಸುವುದಕ್ಕಲ್ಲ. ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ದೇವರ ಪೋಟೋಗಳಿವೆ. ಆದರೆ ದೇವಸ್ಥಾನಕ್ಕೆ ತೆರಳಿ ಸೇವೆ, ಹರಿಕೆ ಸಲ್ಲಿಸುವುದು ಧಾರ್ಮಿಕ ನಂಬಿಕೆ. ಮಾತ್ರವಲ್ಲ ಪವಿತ್ರ ಕ್ಷೇತ್ರಗಳೆಂಬ ನಂಬಿಕೆಯಿದೆ. ದೇವಸ್ಥಾನಕ್ಕೆ ತರಳಿ ಪೂಜೆ ಸಲ್ಲಿಸಿದ್ರೆ ಮಾನಸಿಕ ನೆಮ್ಮದಿ ಸಿಗುತ್ತದೆ. ಆದ್ರೀಗ ರಾಜ್ಯ ಸರಕಾರ ಆನ್ ಲೈನ್ ಪೂಜಾ ಸೇವೆ ಆರಂಭಿಸಿರುವುದು ಸರಿಯಲ್ಲ.

ಇದು ಜನರಿಂದ ಸುಲಿಗೆ ಮಾಡುವ ಮತ್ತೊಂದು ಹುನ್ನಾರ. ಕೊರೊನಾ ಲಾಕ್ ಡೌನ್ ನಡುವಲ್ಲೇ ಎಲ್ಲಾ ಸೇವೆಗಳನ್ನು ಆರಂಭಿಸಿರುವ ಸರಕಾರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಆದೇಶಿಸಿ ಧಾರ್ಮಿಕ ಕ್ಷೇತ್ರಗಳಿಗೂ ಅನುಮತಿಯನ್ನು ನೀಡಲಿ. ಇಲ್ಲಾ, ಕೊರೊನಾ ಸೋಂಕು ಮುಗಿಯುವವರೆಗೂ ಯಥಾಸ್ಥಿತಿಯಲ್ಲಿಯೇ ಮುಂದುವರಿಸಲಿ. ಅದನ್ನು ಬಿಟ್ಟು ಆನ್ ಲೈನ್ ಪೂಜೆ ಆರಂಭಿಸಿ ಧಾರ್ಮಿಕ ನಂಬಿಕೆಯನ್ನು ಹಾಳುಮಾಡುವುದು ಬೇಡ ಎಂದು ಭಕ್ತ ಸಂತೋಷ್ ಆಗ್ರಹಿಸಿದ್ದಾರೆ.

Leave A Reply

Your email address will not be published.