ಜೂನ್ 1 ರಿಂದ ದೇವಸ್ಥಾನಗಳು ಓಪನ್ : ನಾಳೆಯಿಂದಲೇ ಆನ್ ಲೈನ್ ಬುಕ್ಕಿಂಗ್ ಸೇವೆ ಆರಂಭ

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಆಗಿರುವ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳು ಜೂನ್ 1ರಿಂದಲೇ ಆರಂಭಗೊಳ್ಳಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ, ಕಟೀಲು ದುರ್ಗಾಪರಮೇಶ್ವರಿ, ಮೈಸೂರಿನ ಚಾಮುಂಡಿ, ಬೆಂಗಳೂರಿನ ಬನಶಂಕರಿ, ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನ ಸೇರಿದಂತೆ ರಾಜ್ಯದಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿರುವ ಸುಮಾರು 36,000 ದೇವಾಲಯಗಳು ಸೋಮವಾರದಿಂದ ಬಾಗಿಲು ತೆರೆಯಲಿವೆ.

ಎಲ್ಲಾ ದೇವಾಲಯಗಳಲ್ಲಿಯೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಭಕ್ತರಿಗೆ ದೇವರ ದರ್ಶನ ಹಾಗೂ ಸೇವೆಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ದೇವಸ್ಥಾನಗಳನ್ನು ತೆರೆಯುವಂತೆ ಭಕ್ತರಿಂದ ಒತ್ತಡ ಬಂದಿತ್ತು. ಈ ಕುರಿತು ಮುಖ್ಯಮಂತ್ರಿಗಳಲ್ಲಿ ಚರ್ಚಿಸಿದಾಗ ಅವರು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲೀಗ ದೇವಸ್ಥಾನಗಳನ್ನು ತೆರೆಯಲಾಗುತ್ತಿದೆ. ಆದರೆ ದೇವಸ್ಥಾನಗಳಲ್ಲಿ ಜಾತ್ರೆ ಹಾಗೂ ಸಮಾರಂಭಗಳನ್ನು ನಡೆಸುವುದಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ.

ಇನ್ನು ಭಕ್ತರ ಅನುಕೂಲಕ್ಕಾಗಿ ರಾಜ್ಯದ 52 ದೇವಸ್ಥಾನಗಳಲ್ಲಿ ಆನ್ ಲೈನ್ ಸೇವೆಯನ್ನು ಆರಂಭಿಸಲಾಗುತ್ತಿದೆ. ಭಕ್ತರು ತಮ್ಮ ಸೇವೆಗಳನ್ನು ಆನ್ ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದ್ದು, ಇದರಿಂದಾಗಿ ಭಕ್ತರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ನಾಳೆಯಿಂದಲೇ ಆನ್ ಲೈನ್ ಬುಕ್ಕಿಂಗ್ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.