ಕೊರೊನಾ ನಡುವಲ್ಲೇ ಗುಡುಗು ಸಿಡಿಲು ಸಹಿತ ಮಳೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ

0

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತವಾಗಿದ್ದು, ಬಿಎಂಟಿಸಿ ಬಸ್ ಸೇರಿದಂತೆ ಬೈಕ್, ಕಾರುಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಕೆಲಸ ಮುಗಿಸಿ ಮನೆಗೆ ಹೊರಟಿದ್ದ ವಾಹನ ಸವಾರರಿಗೆ ವರುಣ ಶಾಕ್ ಕೊಟ್ಟಿದ್ದಾನೆ.

ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿದ ಬೆಂಗಳೂರು ಇಂದು ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಬೆಚ್ಚಿಬಿದ್ದಿದೆ. ಸಂಜೆಯ ವೇಳೆಗೆ ಆರಂಭವಾದ ಮಳೆ ನಗರದ ಮೆಜಿಸ್ಟಿಕ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಶೇಷಾದ್ರಿಪುರಂ, ಶಿವಾಜಿನಗರ, ಕೆ.ಆರ್.ಮಾರ್ಕೆಟ್, ಚಾಮರಾಜಪೇಟೆ, ಹನುಮಂತನಗರ, ತ್ಯಾಗರಾಜನಗರ, ಜಯನಗರ, ಬಸವನಗುಡಿ, ಕೆಂಗೇರಿ, ಮಾಗಡಿ ರಸ್ತೆ, ಮೈಸೂರು ರಸ್ತೆ, ವಿಜಯನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸುರಿದಿದೆ. ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ವಾಹನ ಸವಾರರು ಸಂಚರಿಸಲಾಗದೆ ಪರದಾಡುತ್ತಿದ್ದಾರೆ.

ಭಾರೀ ಮಳೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಯಲಹಂಕ,ಜಯನಗರ, ಗಾಯತ್ರಿನಗರ, ನವರಂಗ್, ಬಿಟಿಎಂ ಲೇಔಟ್, ಇಂದಿರಾನಗರ, ಜಯನಗರ ಮುಂತಾದ ಕಡೆಗಳಲ್ಲಿ ಮಳೆಯ ರಭಸಕ್ಕೆ ಮರಗಳು ಬಿಎಂಟಿಸಿ ಬಸ್, ಕಾರು ಹಾಗೂ ಬೈಕ್ ಗಳ ಮೇಲೆ ಉರುಳಿಬಿದ್ದಿವೆ. ಹಲವು ಕಡೆಗಳಲ್ಲಿ ರಸ್ತೆಗೆ ಅಡ್ಡಲಾಗಿ ಮರಳು ಉರುಳಿರೋದ್ರಿಂದಾಗಿ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿವೆ.

ಇನ್ನು ಯಲಹಂಕದಲ್ಲಿ ಟ್ರಾನ್ಸ್ ಫಾರ್ಮರ್ ಕುಸಿದು ಬಿದ್ದಿದ್ರೆ, ಬಹುತೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ. ಅಲ್ಲದೇ ನಗರದ ಕೆಲವೆಡೆ ಮರ ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ವಾಲಿರುವುದರಿಂದ ಆತಂಕ ಶುರುವಾಗಿದೆ.

ಇನ್ನು ಜಯನಗರ ಭಾಗಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಹವಾಮಾನ ಇಲಾಖೆ ಸಿಲಿಕಾನ್ ಸಿಟಿಯಲ್ಲಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದಾಗಿ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ನೀಡಿತ್ತು. ಅಂತೆಯೇ ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ.

Leave A Reply

Your email address will not be published.