Bamboo Shoots : ವರ್ಷಕ್ಕೊಮ್ಮೆಯಾದರೂ ತಿನ್ನಿ ಕಳಲೆ

ಪರಶುರಾಮ ಸೃಷ್ಟಿಯ ತುಳುನಾಡು ಅನೇಕ ಆಚರಣೆ-ಸಂಸ್ಕೃತಿಗಳಿಗೆ ಹೆಸರುವಾಸಿಯಾಗಿದೆ. ಭೂತಾರಾಧನೆ, ಕಂಬಳ, ಆಟಿ ಹಾಗೂ ನಾಗಾರಾಧನೆ ಹೀಗೆ ಹತ್ತು ಹಲವು ಆಚರಣೆಗಳು ಇಲ್ಲಿ ಕಂಡುಬರುತ್ತವೆ. ಪ್ರತಿಯೊಂದು ಆಚರೆಣೆಗಳ ಹಿಂದೆಯೂ ಅದರದ್ದೇ ಆದ ಪೌರಾಣಿಕ, ಕಾರಣಿಕ ಕಥೆಗಳು ಹಾಗೂ ವೈಜ್ಞಾನಿಕ ಕಾರಣಗಳೂ ಇವೆ. ಇವೆಲ್ಲದರ ಜೊತೆಗೆ ಇಲ್ಲಿನ ಆಹಾರ ಪದ್ಧತಿಯೂ ವಾತಾವರಣಕ್ಕೆ ಹೊಂದುವಂತೆ ಆರೋಗ್ಯಕರವಾಗಿಯೂ ರುಚಿಕರವಾಗಿಯೂ ಇರುತ್ತದೆ. ಅವುಗಳಲ್ಲಿ ಮಳೆಗಾಲದಲ್ಲಿ ಬರುವ ಆಟಿ ತಿಂಗಳಲ್ಲಿ ತಯಾರಿಸುವ ಖಾದ್ಯಗಳಂತೂ ಮನೆಮಂದಿಯೆಲ್ಲಾ ಬಾಯಿ ಚಪ್ಪರಿಸಿಕೊಂಡು ತಿನ್ನುವಂತದ್ದಾಗಿವೆ. ಅವುಗಳಲ್ಲಿ ಕಳಲೆಯಿಂದ ತಯಾರಿಸುವ ಪದಾರ್ಥವೂ ಒಂದು. (Bamboo Shoot)

ಏನಿದು ಮತ್ತು ಯಾಕೆ?
ಕಳಲೆ ಮಳೆಗಾಲದಲ್ಲಿ ಮಾತ್ರ ಸಿಗುವ ಬಿದಿರಿನ ಮೊಳಕೆಯಾಗಿದೆ. ಇದನ್ನು ತುಳುನಾಡಿನಲ್ಲಿ ಆಟಿ ತಿಂಗಳೆಂದು ಕರೆಯಲ್ಪಡುವ ಆಷಾಢ ಮತ್ತು ಶ್ರಾವಣ ಮಾಸದಲ್ಲಿ ಆಹಾರ ಪದಾರ್ಥಗಳಿಗೆ ಬಳಸುತ್ತಾರೆ. ಪಲ್ಯ, ಸಾಂಬಾರು, ದೋಸೆ, ವಡೆ, ಆಂಬೋಡೆ, ಉಪ್ಪಿನಕಾಯಿ ಮುಂತಾದವುಗಳಿಗೆ ಬಳಸುತ್ತಾರೆ.

ಬಳಕೆ ಹೇಗೆ
ಕಳಲೆಯನ್ನು ಕತ್ತರಿಸಿ ತೆಗೆದುಕೊಂಡು ಬಂದು ಉಪಯೋಗ ಮಾಡುವ ಮೊದಲು ಅದರ ಮೇಲಿನ ಸಿಪ್ಪೆಯನ್ನು ತೆಗೆಯಬೇಕು. ಅದರ ಬಿಳಿ ಬಣ್ಣ ಕಾಣಿಸಿಕೊಳ್ಳುವವರೆಗೂ ಮೇಲ್ಪದರಗಳನ್ನು ತೆಗೆಯಬೇಕು. ಇದರ ಒಳ ಪದರವು ಬಹಳ ಗಟ್ಟಿಯಾಗಿರದೇ ಮೆತ್ತನೆಯಾಗಿರುತ್ತದೆ. ನಂತರ ಒಳ ಪದರ ಸಣ್ಣಗೆ ಕತ್ತರಿಸಿಕೊಳ್ಳಬೇಕು. ಕತ್ತರಿಸಿಕೊಂಡ ಕಳಲೆಯನ್ನು ನೀರಿನಲ್ಲಿ ಹಾಕಬೇಕು ಹಾಗೂ ಇದನ್ನು ನಾಲ್ಕು ದಿನಗಳ ಕಾಲ ನೀರಿನಲ್ಲಿ ಇಡಬೇಕು. ದಿನಕ್ಕೆ ಒಂದು ಬಾರಿ ನೀರನ್ನು ಬದಲಾಯಿಸಬೇಕು. ಏಕೆಂದರೆ ಇದರಲ್ಲಿ ಗ್ಲೂಕೋಸೈಡ್ ಎಂಬ ವಿಷಪೂರಿತವಾದ ಅಂಶವಿರುತ್ತದೆ. ಇದರ ಬಗ್ಗೆ ಬಹಳಷ್ಟು ಜಾಗೃತವಾಗಿರಬೇಕು. ಇದರಿಂದ ಅದೆಷ್ಟೋ ಪ್ರಾಣಾಪಾಯವಾಗಿರುವ ಉದಾಹರಣೆಗಳೂ ಇವೆ. ಮೊದಲೆಲ್ಲಾ ಈ ಕತ್ತರಿಸಿದ ಕಳಲೆಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಮನೆ ಬಳಿ ಹರಿಯುವ ಸಣ್ಣ ನೀರಿನ ಮೂಲಗಳಾದ ತೋಡು ಅಥವಾ ನದಿಯಲ್ಲಿ ಇಡುತ್ತಿದ್ದರು. ಈ ಮೂಲಕ ಅದರಲ್ಲಿನ ವಿಷಪೂರಿತ ಅಂಶ ನೀರಿನಲ್ಲಿ ಹೋಗುತ್ತದೆ. ಆಗ ಒಂದೇ ದಿನ ಇಟ್ಟರೆ ಸಾಕಾಗುತ್ತಿತ್ತು.

ಉಪಯೋಗ ಮತ್ತು ವೈಜ್ಞಾನಿಕ ಕಾರಣ
ಈ ಆಟಿ ತಿಂಗಳಲ್ಲಿ ಸಾಮಾನ್ಯವಾಗಿ ಮಳೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ತಂಪು ಹೆಚ್ಚಾಗುತ್ತದೆ ಮತ್ತು ಬ್ಯಾಕ್ಟೀರಿಯಾಗಳು ಇನ್ನಷ್ಟು ಶಕ್ತಿಶಾಲಿಯಾಗುತ್ತವೆ. ಈ ಮೂಲಕ ರೋಗಗಳು ಹರಡುವ ಸಾಧ್ಯತೆ ಹೆಚ್ಚು. ಕಳಲೆ ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುವುದರ ಜೊತೆಗೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದಿಷ್ಟೇ ಉಪಯೋಗವಲ್ಲದೇ ಗೊತ್ತಿಲ್ಲದೇ ದೇಹವನ್ನು ಸೇರಿರುವ ಮನುಷ್ಯನ ಮತ್ತು ಪ್ರಾಣಿಗಳ ಕೂದಲು ಹೊರಹಾಕಲು ಒಳ್ಳೆಯ ಔಷಧಿಯಾಗಿದೆ. ಇದನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಏಷ್ಯಾ ಖಂಡದ ಹಲವು ಕಡೆಗಳಲ್ಲಿ ಬಳಸುತ್ತಾರೆ. ವರ್ಷಕ್ಕೆ ಎರಡರಿಂದ ಮೂರು ಬಾರಿಯಾದರೂ ಸೇವಿಸಬೇಕಾದ ಆಹಾರ ಇದಾಗಿದ್ದು, ಅತಿಯಾದರೆ ಮೂಲವ್ಯಾಧಿಗೆ ದಾರಿಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Tuesday Astrology : ಹೇಗಿದೆ ಮಂಗಳವಾರದ ದಿನಭವಿಷ್ಯ

ಇದನ್ನೂ ಓದಿ: Ben stokes: ಏಕದಿನ ಕ್ರಿಕೆಟ್​ಗೆ ಇಂಗ್ಲೆಂಡ್​ ಸ್ಟಾರ್​ ಆಲ್ರೌಂಡರ್​​ ಬೆನ್​ ಸ್ಟೋಕ್ಸ್​ ದಿಢೀರ್​ ವಿದಾಯ

(Using Bamboo Shoot as a Vegetable)

Comments are closed.