Fazal Atrachali : ಪ್ರೊ ಕಬಡ್ಡಿ ಲೀಗ್‌ನಲ್ಲಿ 400 ಟ್ಯಾಕಲ್ ಪಾಯಿಂಟ್ಸ್, ಐತಿಹಾಸಿಕ ದಾಖಲೆ ಬರೆದ ಇರಾನ್ ದಿಗ್ಗಜ ಫಜಲ್ ಅತ್ರಾಚಲಿ

ಪುಣೆ: ಇರಾನ್’ನ ದಿಗ್ಗಜ ಆಟಗಾರ ಫಜಲ್ ಅತ್ರಾಚರಿ (Fazal Atrachali)ಪ್ರೊ ಕಬಡ್ಡಿ ಲೀಗ್ (Pro Kabaddi League) ಇತಿಹಾಸದಲ್ಲಿ 400 ಟ್ಯಾಕಲ್ ಪಾಯಿಂಟ್ಸ್ ಗಳಿಸಿದ ಮೊದಲ ಆಟಗಾರನೆಂಬ ದಾಖಲೆ ಬರೆದಿದ್ದಾರೆ.

ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 5 ಟ್ಯಾಕಲ್ ಪಾಯಿಂಟ್ಸ್ ಗಳಿಸಿದ ಪುಣೇರಿ ಪಲ್ಟನ್ ತಂಡದ ನಾಯಕ ಫಜಲ್ ಅತ್ರಾಚಲಿ, 400ರ ಗಡಿ ದಾಟಿದರು. ಕಳೆದ ಪಂದ್ಯದಲ್ಲೇ ಭಾರತದ ದಿಗ್ಗಜ ಡಿಫೆಂಡರ್ ಮನ್’ಜೀತ್ ಚಿಲಾರ್ ಅವರ 391 ಟ್ಯಾಕಲ್ ಪಾಯಿಂಟ್’ಗಳ ದಾಖಲೆಯನ್ನು ಪುಡಿಗಟ್ಟಿದ್ದ ಫಜಲ್, 400ರ ಕ್ಲಬ್ ಸೇರಿದ ಮೊದಲ ಆಟಗಾರ ಎನಿಸಿದ್ದಾರೆ.

ನಾಯಕ ಫಜಲ್ ಅವರ ಅದ್ಭುತ ಟ್ಯಾಕಲ್ಸ್ ಹಾಗೂ ಯುವ ರೇಡರ್ ಆಕಾಶ್ ಶಿಂಧೆ ಅವರ ಸೂಪರ್-10 ಸಾಹಸದಿಂದ ಪುಣೇರಿ ಪಲ್ಟನ್ 35-34ರಿಂದ ತಮಿಳು ತಲೈವಾಸ್ ತಂಡವನ್ನು ರೋಚಕವಾಗಿ ಸೋಲಿಸಿ ಕಳೆದ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿತು. ಅಲ್ಲದೇ ಲೀಗ್‌ನಲ್ಲಿ 7ನೇ ಗೆಲುವಿನೊಂದಿಗೆ ಒಟ್ಟು 43 ಅಂಕ ಕಲೆ ಹಾಕಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು.

ದಿನದ ಮತ್ತೊಂದು ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ಹರ್ಯಾಣ ಸ್ಟೀಲರ್ಸ್ ಸವಾಲನ್ನು 36-33ರ ಅಂತರದಲ್ಲಿ ಮೆಟ್ಟಿ ನಿಂತು ಲೀಗ್‌ನಲ್ಲಿ 7ನೇ ಗೆಲುವು ದಾಖಲಿಸಿಕೊಂಡಿದೆ. ಆಡಿರುವ 12 ಪಂದ್ಯಗಳಲ್ಲಿ 7 ಗೆಲುವು, 4 ಸೋಲು ಹಾಗೂ 1 ಟೈ ಫಲಿತಾಂಶದೊಂದಿಗೆ ಒಟ್ಟು 41 ಅಂಕ ಸಂಪಾದಿಸಿರುವ ಬೆಂಗಳೂರು ಬುಲ್ಸ್ ತಂಡ, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಇದನ್ನೂ ಓದಿ : Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಇದನ್ನೂ ಓದಿ : Pawan Sehrawat out : ಪ್ರೊ ಕಬಡ್ಡಿ ಲೀಗ್-9 ಟೂರ್ನಿಯಿಂದ ಹೈ ಫ್ಲೈಯರ್ ಪವನ್ ಸೆಹ್ರಾವತ್ ಔಟ್

ಪ್ರೊ ಕಬಡ್ಡಿ ಲೀಗ್: ಅತೀ ಹೆಚ್ಚು ಟ್ಯಾಕಲ್ ಪಾಯಿಂಟ್ಸ್ (ಟಾಪ್-10)

  • ಫಜಲ್ ಅತ್ರಾಚಲಿ: 403 (135 ಪಂದ್ಯ)
  • ಮನ್’ಜೀತ್ ಚಿಲಾರ್: 391 (132 ಪಂದ್ಯ)
  • ಸಂದೀಪ್ ನರ್ವಾಲ್: 348 (149 ಪಂದ್ಯ)
  • ಸುರ್ಜೀತ್ ಸಿಂಗ್: 345 (124 ಪಂದ್ಯ)
  • ಗಿರೀಶ್ ಎರ್ನಕ್: 344 (136 ಪಂದ್ಯ)
  • ರವಿಂದರ್ ಪಹಲ್: 339 (124 ಪಂದ್ಯ)
  • ನಿತೇಶ್ ಕುಮಾರ್: 298 (102 ಪಂದ್ಯ)
  • ಮೋಹಿತ್ ಚಿಲಾರ್: 277 (109 ಪಂದ್ಯ)
  • ರಣ್ ಸಿಂಗ್: 269(134 ಪಂದ್ಯ)
  • ಸುರೇಂದರ್ ನಾಡ: 267 (94ಪಂದ್ಯ)

400 Tackle Points in Pro Kabaddi League, a historic record by Iranian legend Fazal Atrachali

Comments are closed.