Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಪುಣೆ:(Bangalore Bulls‌ Puneri Paltan) ಪ್ರೊ ಕಬಡ್ಡಿ ಲೀಗ್-9ನೇ ಆವೃತ್ತಿಯ ಟೇಬಲ್ ಟಾಪರ್’ಗಳಾದ ಪುಣೇರಿ ಪಲ್ಟನ್ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಭಾನುವಾರ ನಡೆದ ಪಂದ್ಯದಲ್ಲಿ ಸೋಲು ಕಂಡಿವೆ.

ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ನಡೆದ ಭಾನುವಾರದ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಬಳಗ, ಗುಜರಾತ್ ಜೈಂಟ್ಸ್ ವಿರುದ್ಧ 44-46ರ ಅಂತರದಲ್ಲಿ ಮುಗ್ಗರಿಸಿತು. ಪ್ರಥಮಾರ್ಧದಲ್ಲಿ ಭಾರೀ ಹಿನ್ನಡೆಯಲ್ಲಿದ್ದ ಬುಲ್ಸ್, ದ್ವಿತೀಯಾರ್ಧದಲ್ಲಿ ತಿರುಗೇಟು ನೀಡಿತಾದರೂ ಕೊನೇ ಕ್ಷಣದಲ್ಲಿ ಒತ್ತಡ ನಿಭಾಯಿಸಿದ ಗುಜರಾತ್ ಜೈಂಟ್ಸ್ ಕೆಂಪುಗೂಳಿಗಳನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಯಿತು. ಈ ಸೋಲಿನೊಂದಿಗೆ ಬೆಂಗಳೂರು ಬುಲ್ಸ್ ಆಡಿದ 11 ಪಂದ್ಯಗಳಲ್ಲಿ 6 ಗೆಲುವು, 4 ಸೋಲು, 1 ಟೈ ಸಹಿತ ಒಟ್ಟು 36 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಮುಂದುವರಿಯಿತು.

ಆತಿಥೇಯ ಪುಣೇರಿ ಪಲ್ಟನ್ ಹಾಗೂ ತಮಿಳ್ ತಲೈವಾಸ್ ನಡುವಿನ ದಿನದ 2ನೇ ಪಂದ್ಯ ಮತ್ತಷ್ಟು ರೋಚಕತೆಗೆ ಸಾಕ್ಷಿಯಾಯಿತು. ಇರಾನ್ ಡಿಫೆಂಡರ್ ಫಜಲ್ ಅತ್ರಾಚಲಿ ನಾಯಕತ್ವದ ಪುಣೇರಿ ಪಲ್ಟನ್ ಪಡೆ, ತಮಿಳ್ ತಲೈವಾಸ್ ವಿರುದ್ಧ 34-35ರ ಅಂತರದಲ್ಲಿ ಸೋಲು ಕಂಡಿತು. ಇದರೊಂದಿಗೆ ಪುಣೇರಿ ಪಲ್ಟನ್ ಪಡೆಯ ಅಜೇಯ ಓಟ ಅಂತ್ಯಗೊಂಡಿತು. ಕಳೆದ 7 ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಅಜೇಯವಾಗಿ ಮುನ್ನುಗ್ಗುತ್ತಿದ್ದ, ಕನ್ನಡಿಗ ಬಿ.ಸಿ ರಮೇಶ್ ಅವರ ಗರಡಿಯಲ್ಲಿ ಪಳಗಿರುವ ಪುಣೇರಿ ಪಲ್ಟನ್’ಗೆ ಕೊನೆಗೂ ಸೋಲಿನ ಬಿಸಿ ಮುಟ್ಟಿಸುವಲ್ಲಿ ತಲೈವಾಸ್ ಯಶಸ್ವಿಯಾಯಿತು. ಈ ಗೆಲುವಿನೊಂದಿಗೆ ತಮಿಳ್ ತಲೈವಾಸ್ ತಂಡ ಸತತ 5 ಪಂದ್ಯಗಳಲ್ಲಿ ಗೆಲುವಿನ ಓಟ ಮುಂದುವರಿಸಿ ಲೀಗ್’ನಲ್ಲಿ 5ನೇ ಗೆಲುವಿನೊಂದಿಗೆ ಒಟ್ಟು 33 ಅಂಕಗಳನ್ನು ಕಲೆ ಹಾಕಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.

ಇದನ್ನೂ ಓದಿ:Gandhadagudi : ಅಪ್ಪು ಅಭಿಮಾನಿಗಳಿಗೆ ಭರ್ಜರಿ ಆಫರ್ : ನಾಲ್ಕು ದಿನಗಳ ಕಾಲ ಗಂಧದಗುಡಿ ಟಿಕೇಟ್ ದರ ಕಡಿತ

ಇದನ್ನೂ ಓದಿ:Chennai-Mysore Vande Bharat Express: ಚೆನ್ನೈ-ಮೈಸೂರು ವಂದೇ ಭಾರತ್ ರೈಲು ಸಂಚಾರಕ್ಕೆ ಕ್ಷಣಗಣನೆ. ಇಂದಿನಿಂದ ಪ್ರಾಯೋಗಿಕ ಸಂಚಾರ

ಪ್ರೊ ಕಬಡ್ಡಿ ಲೀಗ್-9: ಸೋಮವಾರದ ಪಂದ್ಯಗಳು

  1. ಯು ಮುಂಬಾ Vs ಜೈಪುರ ಪಿಂಕ್ ಪ್ಯಾಂಥರ್ಸ್
  2. ಪಾಟ್ನಾ ಪೈರೇಟ್ಸ್ Vs ಹರ್ಯಾಣ ಸ್ಟೀಲರ್ಸ್

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Bangalore Bulls‌ Puneri Paltan lose to in photo finish race

Comments are closed.