Minnu Mani: 30 ಲಕ್ಷದ ಒಡತಿಯಾದ ಬುಡಕಟ್ಟು ಹುಡುಗಿ, ಮಹಿಳಾ ಕ್ರಿಕೆಟ್‌ನಲ್ಲೊಂದು ಅಪ್ರತಿಮ ಯಶೋಗಾಥೆ

ಬೆಂಗಳೂರು: ( Minnu Mani ) ಕೇರಳದ ವಯನಾಡ್ ಜಿಲ್ಲೆಯ ಮನಂತವಾಡಿ ತಪ್ಪಲಿನ ಬುಡಕಟ್ಟು ಜನಾಂಗದ ಹುಡುಗಿಯೊಬ್ಬಳು ಕ್ರಿಕೆಟ್ ಆಡಬೇಕೆಂಬ ಕನಸು ಕಂಡಿದ್ದಳು. ಆದರೆ ಕ್ರಿಕೆಟ್ ಆಡೋದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಆದರೆ ಎದುರಾದ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತ ಆಕೆ ಈಗ ತನ್ನ ಕನಸಿನ ಪ್ರಯಾಣದಲ್ಲಿ ಒಂದು ಹೆಜ್ಜೆಯನ್ನು ಯಶಸ್ವಿಯಾಗಿ ಇಟ್ಟಿದ್ದಾಳೆ.

ಇದು ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League) 30 ಲಕ್ಷ ರೂಪಾಯಿಗಳನ್ನು ಬುಟ್ಟಿಗೆ ಹಾಕಿಕೊಂಡ ಮಿನ್ನು ಮಣಿ ಎಂಬ ಬುಡುಕಟ್ಟು ಹುಡುಗಿಯ ಯಶೋಗಾಥೆ. ಮುಂಬೈನಲ್ಲಿ ಸೋಮವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜಿನಲ್ಲಿ ಕೇರಳದ ವಯನಾಡ್ ಜಿಲ್ಲೆಯ ಮನಂತವಾಡಿ ತಪ್ಪಲಿನ ಬುಡಕಟ್ಟು ಜನಾಂಗದ ಹುಡುಗಿ ಮಿನ್ನು ಮಣಿಯನ್ನು 30 ಲಕ್ಷ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಖರೀದಿ ಮಾಡಿದೆ.

“ನಾನು ನನ್ನ ಜೀವನದಲ್ಲಿ ಯಾವತ್ತೂ 30 ಲಕ್ಷ ರೂಪಾಯಿಗಳನ್ನು ಕಂಡವಳೇ ಅಲ್ಲ. ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗುತ್ತಿಲ್ಲ” ಎಂದು ಮಿನ್ನು ಮಣಿ ಹೇಳಿದ್ದಾಳೆ. ಮಿನ್ನು ಮಣಿ ಅವರದ್ದು ವಯನಾಡ್’ನ ಚೊಯಿಮೂಲದಲ್ಲಿರುವ ಕುರಿಚಿಯಾ ಎಂಬ ಹೆಸರಿನ ಬುಡಕಟ್ಟು ಜನಾಂಗಕ್ಕೆ ಸೇರಿದ ಕುಟುಂಬ. ತಂದೆ ಮಣಿ ಸಿ.ಕೆ ದಿನಗೂಲಿ ಕಾರ್ಮಿಕ. ತಾಯಿ ಗೃಹಿಣಿ. 10ನೇ ವರ್ಷದವಳಿದ್ದಾಗ ಮನೆ ಪಕ್ಕದ ಗದ್ದೆಗಳಲ್ಲಿ ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿದ್ದ 23 ವರ್ಷದ ಮಿನ್ನು ಮಣಿ ಈಗ ಕೇರಳ ತಂಡವನ್ನು ಪ್ರತಿನಿಧಿಸುತ್ತಿದ್ದಾಳೆ.

“ನನ್ನ ದಿನ ಬೆಳಗ್ಗೆ 4 ಗಂಟೆಗೆ ಆರಂಭವಾಗುತ್ತಿತ್ತು. ಬೆಳಗ್ಗೆ ಎದ್ದು ತಾಯಿಗೆ ಅಡುಗೆ ಮಾಡಲು ಸಹಾಯ ಮಾಡುತ್ತಿದ್ದೆ. ನಂತರ ಕ್ರಿಕೆಟ್ ಅಭ್ಯಾಸ. ಅಭ್ಯಾಸಕ್ಕಾಗಿ ಕೃಷ್ಣಗಿರಿ ಕ್ರೀಡಾಂಗಣಕ್ಕೆ ಹೋಗಬೇಕಿತ್ತು. ಅಲ್ಲಿಗೆ ನಮ್ಮ ಮನೆಯಿಂದ ಒಂದೂವರೆ ಗಂಟೆ ಪ್ರಯಾಣ. ಡೈರೆಕ್ಟ್ ಬಸ್ ಇಲ್ಲ. ಹೀಗಾಗಿ ಪ್ರತಿ ದಿನ 4 ಬಸ್’ಗಳನ್ನು ಬದಲಿಸಿ ಬೆಳಗ್ಗೆ 9 ಗಂಟೆಗೆ ಕ್ರೀಡಾಂಗಣ ತಲುಪುತ್ತಿದ್ದೆ. ಮನೆಗೆ ಮರಳುವ ವೇಳೆಗೆ ಸಂಜೆ 7 ಗಂಟೆಯಾಗಿರುತ್ತಿತ್ತು” ಎಂದು ತಾವು ಪಟ್ಟಿರುವ ಕಷ್ಟದ ಬಗ್ಗೆ ಮಿನ್ನು ಮಣಿ ಹೇಳಿಕೊಂಡಿದ್ದಾಳೆ. ಎಡಗೈ ಬ್ಯಾಟರ್ ಮತ್ತು ಬಲರೈ ಆಫ್’ಸ್ಪಿನ್ನರ್ ಆಗಿರುವ ಮಿನ್ನು ಮಣಿ ಇತ್ತೀಚೆಗೆ ನಡೆದ ಬಿಸಿಸಿಐ ಮಹಿಳಾ ಏಕದಿನ ಟೂರ್ನಿಯಲ್ಲಿ ಆಲ್ರೌಂಡ್ ಪ್ರದರ್ಶನ ತೋರಿದ್ದರು. ದೇಶೀಯ ಕ್ರಿಕೆಟ್’ನಲ್ಲಿ ತೋರಿದ ಪ್ರದರ್ಶನ ಇದೀಗ ಆಕೆಗೆ ಮಹಿಳಾ ಐಪಿಎಲ್’ನಲ್ಲಿ ಅವಕಾಶ ಕಲ್ಪಿಸಿಕೊಟ್ಟಿದೆ.

ಇದನ್ನೂ ಓದಿ : ಬೆಳಗಾವಿ ಕ್ರಿಕೆಟಿಗನ ಫೀಲ್ಡಿಂಗ್‌ಗೆ ಫಿದಾ ಆದ್ರು ತೆಂಡೂಲ್ಕರ್, ಅದ್ಭುತ ಕ್ಯಾಚ್‌ಗೆ ಬಹುಪರಾಕ್ ಅಂದ್ರು ಕ್ರಿಕೆಟ್ ದಿಗ್ಗಜರು

ಇದನ್ನೂ ಓದಿ : Women’s Premier League 2023: ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಎದುರಾಳಿ, ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ

30 lakh tribal girl Minnu Mani an unparalleled success story in Women’s Premier League

Comments are closed.